ನಮ್ಮ ಭಾರತದಲ್ಲಿ ಸ್ತ್ರೀ ಪುರುಷನಂತೆ ಸಮಾನತೆಯ ಹಕ್ಕನ್ನು ಹೊಂದಲು ಬೇಕಾದ ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಪರಿಸರ ಇಂದಿಗೂ ನಿರ್ಮಾಣವಾಗಿಲ್ಲ. ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣ ಪ್ರತಿಪಾದಿಸಿದ ’ಸ್ತ್ರೀ ಪುರುಷನಿಗೆ ಹೆಗಲೆಣೆ’ ಎಂಬ ವಿಚಾರ ಇಂದಿಗೆ ಒಂಭತ್ತು ಶತಮಾನಗಳು ಕಳೆದರೂ ಕೈಗೂಡಿಲ್ಲ. ಕಾರಣಗಳು ಕಾರಣಗಳಾಗಿಯೇ ಉಳಿದಿವೆಯೇ ಹೊರತು ಅವುಗಳ ಪರಿಹಾರಕ್ಕೆ ಕಡ್ಡಾಯ ಶಿಕ್ಷಣದ ಕಾಂiiಕ್ರಮಗಳು, ಸ್ತ್ರೀ ಸಬಲೀಕರಣದಂತಹ ಆರ್ಥಿಕ ಯೋಜನೆಗಳು ಯಾವುದು ಶಾಶ್ವತ ಉಪಾಯಗಳಾಗದೇ ಉಳಿದಿರುವುದು ನೋಡಿದರೆ ಎಲ್ಲವೂ ಸ್ತ್ರೀ ಸಮುದಾಯದ ಕಣ್ಣೊರೆಸುವ ತಂತ್ರಗಳೆಂದು ಕಾಣುತ್ತವೆ.
ಅದಕ್ಕೂ ಮಿಗಿಲಾಗಿ ಸ್ತ್ರೀ ಸಂಕುಲ ಕೂಡಾ ಸಮಾನತೆಗಿಂತ ಅಧೀನತೆಯನ್ನೆ ಆಸ್ವಾದಿಸುವಂತೆಯೂ ಕಂಡುಬರುತ್ತಿದೆ. ಇದಕ್ಕೆ ಕಾರಣ ಹಲವಾರು. ಆಕೆಗೆ ಪತ್ನಿಯಾಗಿ, ತಾಯಿಯಾಗಿ, ಮಗಳಾಗಿ ತನ್ನ ಜವಾಬ್ದಾರಿಗಳ ನಿಭಾಯಿಸುವತ್ತ ಒಲವು ಹೆಚ್ಚು. ಇಂದಿನ ಜಾಗತಿಕ ನೆಲೆಯಲ್ಲಿ ವಿದ್ಯಾರ್ಜನೆಯಲ್ಲಿ ಹೆಣ್ಣುಮಕ್ಕಳು ಗಂಡು ಹುಡುಗರಿಗಿಂತ ಮೇಲುಗೈ ಸಾಧಿಸುತ್ತಿದ್ದಾರೆ. ಆದರೂ ಮುಂದೆ ತನ್ನ ವೃತ್ತಿ ಬದುಕಿನುದ್ದಕ್ಕೂ ಸಾಧನೆಯಲ್ಲಿ ಹೆಣ್ಣು ಹಿಂದೆ ಬೀಳುತ್ತಿದ್ದಾಳೆ. ಶೇಕಡಾವಾರು ಸಂಖ್ಯೆಯಲ್ಲಿಯೂ ಮಹಿಳಾ ಪಾಲ್ಗೋಳ್ಳುವಿಕೆಯಲ್ಲಿ ಕುಸಿತ ಕಾಣುತ್ತಿದೆ. ಹಾಗಾದರೆ ಇದಕ್ಕೆ ಕಾರಣ ನಿರ್ದಿಷ್ಟ ವಯೋಮಿತಿಯ ನಂತರದಲ್ಲಿ ಆಕೆ ಸಂಭಾಳಿಸಬೇಕಾದ ಕೌಟಂಬಿಕ ಹಾಗೂ ತಾಯ್ತನದ ಜವಾಬ್ದಾರಿಗಳಿರಬಹುದು. ಹೆಣ್ಣು ಮೂಲತಃ ಹೆರುವ ಹೊರುವ ಮನೆ ಸಂಭಾಳಿಸುವ ಸಿದ್ಧ ಮಾದರಿ ಎಂಬ ಪೂರ್ವಾಗೃಹದ ಸಿದ್ಧಾಂತವಾಗಿರಬಹುದು. ಒಟ್ಟಾರೆ ಹೆಣ್ಣಿನ ಹಲವು ಆಕಾಂಕ್ಷೆಗಳು ಅದಮ್ಯ ಉತ್ಸಾಹಗಳು ಕೆಲವೊಮ್ಮೆ ಚಿವುಟಲ್ಪಡುತ್ತವೆ. ಆದಾಗ್ಯೂ ಆಕೆ ಸಮಾಜವೆಂಬ ಗಿಡದ ಆಳದಲ್ಲಿ ಊರಿದ ಬೇರು. ಬೇರಿನ ಅಸ್ತಿತ್ವ ಹೊರಜಗತ್ತಿಗೆ ಅದೃಶ್ಯವಾಗಿದ್ದರೂ ಅದೇ ಮೂಲ. ಪುರುಷ ಗಿಡದ ಹೊರಮೈ. ವಿಸ್ತಾರ ವ್ಯಕ್ತಿತ್ವವನ್ನು ಹೊಂದಿದ ರಂಬೆ ಕೊಂಬೆಗಳಿಂದ ಬಲಿಷ್ಟನಾದ ಆತ ಸ್ತ್ರೀ ಎಂಬ ಬೇರು ಸದೃಢವಿದ್ದರೆ ಮಾತ್ರ ಪಲ್ಲವಿಸಬಲ್ಲ. ಯಾಕೆಂದರೆ ಅನಾದಿಯಿಂದಲೂ ಮಾನವ ಜಗತ್ತಿನ ಪ್ರಾರಂಭದಿಂದಲೂ ಸ್ತ್ರೀ ಸಾಮಾಜಿಕ ಜೀವನದಲ್ಲಿ ತನ್ನದೇ ಆದ ಜವಾಬ್ದಾರಿಗಳನ್ನು ನಿಭಾಯಿಸುತ್ತ ತನ್ನ ಕೊಡುಗೆಗಳ ಕಟ್ಟಿಕೊಡುತ್ತಲೇ ಬಂದಿದ್ದಾಳೆ. ಸುಮಧುರ ಬದುಕು ಕಟ್ಟುವಲ್ಲಿ, ಸುಸಂಸ್ಕೃತ ಪೀಳಿಗೆಯನ್ನು ತಯಾರುಮಾಡುವಲ್ಲಿ, ಸದೃಢ ಯುವ ಜನಾಂಗದ ಬೆಳವಣಿಗೆಯಲ್ಲಿ ,ಮಹಿಳೆಯ ಪಾತ್ರ ತಾಯಿಯಾಗಿ ಅಪೂರ್ವ, ಅನುಪಮ.
ಕೆಲಸಗಳ ಹೊರೆ ಹಂಚಿಕೆ ಆಧುನಿಕ ಅರ್ಥವ್ಯವಸ್ಥೆಯ ಪರಿಕಲ್ಪನೆಯಾದರೂ ಬದಲಾದ ಸಂದರ್ಭದಲ್ಲಿಯೂ ಕೂಡಾ ಸ್ತ್ರೀಯ ದೈಹಿಕ, ಮಾನಸಿಕ ಸಂರಚನೆಯಲ್ಲಿ ಬದಲಾವಣೆಗಳು ಇಲ್ಲದೇ ಇರುವುದರಿಂದ ಆಕೆಯನ್ನು ಜಗತ್ತು ನೋಡುವ ದೃಷ್ಟಿ ಅಂತಹ ಭಿನ್ನತೆಯನ್ನೇನೂ ಪಡೆದುಕೊಂಡಿಲ್ಲ. ಸ್ತ್ರೀ ಸ್ವಭಾವ, ಮನಸ್ಸು, ಬುದ್ಧಿಗಳು ಕೂಡಾ ಆಕೆ ತನ್ನನ್ನು ತಾನು ಪುರುಷನೊಡನೆ ಸಮಾನಾಂತರ ರೇಖೆಯಲ್ಲಿಟ್ಟು ನೋಡಲು ಹಿಂಜರಿಯುವಂತೆ ಮಾಡುತ್ತಿರಬಹುದು. ಕೌಟಂಬಿಕ ಹೊಣೆ, ತಾಯ್ತನ ಮುಂತಾದ ಸಿದ್ಧ ಮಾದರಿಯನ್ನೆ ಬಯಸುವ ಹೆಣ್ಣು ಅಲ್ಲಿಯೇ ಅತ್ಯಂತ ತೃಪ್ತಳಾಗಿಯೂ ಕಂಡುಬರುತ್ತಾಳೆ. ಪತಿಗೆ ತಕ್ಕ ಸತಿ ಎನ್ನಿಸಿಕೊಳ್ಳುವ ಆ ಇಮೇಜುಗಳ ಭ್ರ,ಮೆಹೊತ್ತ ಮಹಿಳೆಯರ ದೊಡ್ಡ ಸಮುದಾಯ ನಮ್ಮ ಭಾರತದಲ್ಲಿದೆ.
ಸ್ತ್ರೀ ಸಮಾನತೆಯ ವಿಚಾರಗಳಲ್ಲಿ ಮೂರನೇ ಜಗತ್ತಿನ ಸ್ತ್ರೀ ಮತ್ತವಳ ಸಂವೇದನೆಗಳು ವಿಭಿನ್ನ. ಆದಾಗ್ಯೂ ಬದಲಾಗುತ್ತಿರುವ ಕಾಲಘಟ್ಟದಲ್ಲಿಯೂ ಕೂಡಾ ಸಿದ್ಧಪಾತ್ರಗಳು ಅವುಗಳ ವೈಭವೀಕರಣ ಆ ಮೂಲಕ ಹೆಣ್ಣಿನ ಆತ್ಮಸ್ಥೈರ್ಯ ವಿಶ್ವಾಸಗಳ ಕಟ್ಟಿಹಾಕುವ ಇಲ್ಲವೇ ಆಕೆಯಲ್ಲಿ ಉದಾತ್ತ ವ್ಯಕ್ತಿತ್ವವ ಬಿಂಬಿಸುತ್ತ ತ್ಯಾಗ ಸಂಯಮದ ಉದಾರತೆಯನ್ನು ಪಡಿಮೂಡಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಇದು ನಿನ್ನೆ ಮೊನ್ನೆಯದಲ್ಲ. ಇಂದಿಗೂ ಜೀವಂತ ಸಂಗತಿಗಳು. ಹಾಗಿದ್ದೂ ಪುರಾಣದ ವಿಚಾರಗಳನ್ನು ಎತ್ತಿ ಹಿಡಿಯುವ ಹೆಣ್ಣು ರಾಮನಂತೆ ಇಂದಿನ ತನ್ನ ಪತಿ ತನ್ನನ್ನು ಕಾಡಿಗಟ್ಟುವುದನ್ನು ಸಹಿಸುವಳೇ? ಅಣ್ಣನ ಆಜ್ಞಾಪಾಲಕನಾಗಿ ಆತನ ನೆರಳಾಗಿ ವಿವಾಹಿತನಾದ ಲಕ್ಷ್ಮಣ ಪತ್ನಿ ಊರ್ಮಿಳೆಯನ್ನು ಬಿಟ್ಟು ಕಾಡಿಗೆ ಹೋಗುತ್ತಾನೆ. ಇಂತಹ ನಿರ್ಧಾರಕ್ಕೆ ಇಂದಿನ ಎಷ್ಟು ಸತಿಯರು ಒಪ್ಪಬಹುದು? ಎಂಬೆಲ್ಲಾ ಜಿಜ್ಞಾಸೆಗಳು ಬಂದಾಗ ಪುರುಷನ ಆತನ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ ಸ್ತ್ರೀ ಕೂಡಾ ಇದು ಅನ್ಯಾಯವೆಂದೇ ಪ್ರತಿಪಾದಿಸುವಳು. ಹಾಗಾಗಿ ಆಕೆಗೆ ಕೆಲವು ವಿಚಾರಗಳಲ್ಲಿ ಸಿದ್ಧ ಉದಾತ್ತ ಪಾತ್ರವಾಗುವಲ್ಲಿ ಹಿಂದಿನ ಸ್ತ್ರೀಯಂತೆ ಉದಾರತೆ ಇಲ್ಲವೆಂದಾಯ್ತು. ಹಿಂದಿನರಾಜ ಮಹಾರಾಜರು ಹೊಂದುತ್ತಿದ್ದ ಬಹುಪತ್ನಿತ್ವ ವ್ಯವಸ್ಥೆಯನ್ನು ಅನ್ಯಾಯವೆಂದು ಇಂದಿನ ಸ್ತ್ರೀ ಸಮಾಜ ಪ್ರತಿಪಾದಿಸುತ್ತದೆ. ಹಾಗಾಗೇ ಆಧುನಿಕ ಸ್ತ್ರೀ ಸಮುದಾಯದ ತಲ್ಲಣಗಳು ವಿಭಿನ್ನ. ಆಕೆ ತಾಯಿಯಾಗುವಲ್ಲಿ ತನ್ನ ಕರ್ತವ್ಯಗಳ ನಿಭಾಯಿಸುವಲ್ಲಿ ತಾಯ್ ಸಂವೇದನೆಯ ಹೆಣ್ಣಾದರೂ ಸಾಮಾಜಿಕ ಬದುಕಿನಲ್ಲಿ ಪುರುಷನಿಗೆ ಸಮಾನವಾದ ನೀತಿ ನಿಯಮಗಳ ತನಗೂ ಅನ್ವಯಿಸಿಕೊಳ್ಳುವ ಸುಶಿಕ್ಷಿತ ಸ್ತ್ರೀ ಸಮೂಹ ತೆರೆದುಕೊಳ್ಳುತ್ತಿರುವುದು ಅಷ್ಟೇ ವಾಸ್ತವ ವಿಚಾರ.ಹೀಗಾಗಿ ಸಾಂಪ್ರದಾಯಿಕ ಮೌಲ್ಯಗಳ ತಡೆಗೋಡೆಯನ್ನು ಸಮಾಜ ನಿವಾರಿಸಿಕೊಳ್ಳಬೇಕಾಗಿದೆ.
ಅಸಂಘಟಿತ ಮಹಿಳಾ ಜಗತ್ತನ್ನು ಸಂಘಟಿಸುವ ಅವರಲ್ಲಿ ಸ್ವೇಚ್ಛೆಯಲ್ಲದ ಸ್ವಾತಂತ್ರ್ಯದ ಕಲ್ಪನೆಯನ್ನು, ಸಂತುಲಿತ ವ್ಯಕ್ತಿತ್ವ ಮಾತೃಹೃದಯದ ಕಾರುಣ್ಯದ ಜೊತೆಯಲ್ಲಿ ದೌರ್ಜನ್ಯವನ್ನು ಮೆಟ್ಟಿ ನಿಲ್ಲಬಲ್ಲ ಧೀಮಂತ ವ್ಯಕ್ತಿತ್ವವನ್ನು ಬೆಳೆಸಬೇಕಾದಲ್ಲಿ ಶಿಕ್ಷಣ ಮತ್ತು ಅದರ ಮೌಲಿಕ ನೆಲೆಗಳು, ದಾರಿಗಳು ಬಲಗೊಳ್ಳಬೇಕಿದೆ. ಸ್ತ್ರೀ ಸಂವೇದನೆ ರೂಪಿಸುವ ಸ್ತ್ರೀವಾದ ಗಟ್ಟಿಗೊಳ್ಳಬೇಕಿದೆ. ಸ್ವೇಚ್ಛೆಯ ವಾದ ಸ್ತ್ರೀವಾದ ಆಗಲಾರದು. ಹೆಣ್ಣು ಸರಕಾಗಿ, ವಸ್ತುವಾಗಿ ಮುಂಚಿಗಿಂತ ಇಂದಿನ ಆಧುನಿಕ ಶಿಕ್ಷಿತ ವಲಯದಲ್ಲಿ ಪರಿಗಣಿಸಲ್ಪಡುತ್ತಿರುವುದು ಸುಳ್ಳಲ್ಲ. ಇಲ್ಲಿಯೂ ಕೂಡಾ ಆಕೆಯ ಪಾತ್ರವಿಲ್ಲದೇ,ಪುರುಷನೇ ಎಲ್ಲಕ್ಕೂ ಹೊಣೆ ಎಂದು ಹೇಳಲಾಗದ ಕೆಲವು ಸಂದಿಗ್ಧಗಳು ಇವೆ. ಆಧುನಿಕತೆಯ ವೈಭೋಗದ ಕೀರ್ತಿ ಶನಿಯ ಹಿಂದೆ ಬಿದ್ದ ಸ್ತ್ರೀ ಸಮೂಹ ಇಂದು ಬಹಳಷ್ಟಿದೆ. ಅದರಿಂದಾಗುವ ಅನಾಹುತಗಳಿಗೆ ಪುರುಷನನ್ನು ಹೊಣೆ ಮಾಡಿ ಬೆರಳು ತೋರಿಸುವ ಮಹಿಳಾ ಮಣಿಗಳೇನೂ ಕಡಿಮೆ ಇಲ್ಲ. ಕೀಳು ಅಭಿರುಚಿಗಳು, ಅಬೌದ್ಧಿಕತೆ, ಸ್ತ್ರೀ ಗೌರವಕ್ಕೆ ಕುಂದು ತರುತ್ತದೆ. ಶಿಕ್ಷಿತ ಸ್ತ್ರೀ ಸಮಾಜ ಇಂತಹ ಅಲ್ಪತೆಗೆ ಬಲಿಯಾಗದೇ ಅಗಾಧವಾದ ಶಾಶ್ವತವಾದ ಸಮಾನ ಸ್ಥಾನಮಾನಕ್ಕೆ ಯೋಗ್ಯಳಾಗುವ ಅವಕಾಶವನ್ನು ವ್ಯಕ್ತಿತ್ವವನ್ನೂ ಬೆಳೆಸಿಕೊಂಡಲ್ಲಿ ಮುಂದಿನ ದಿನಮಾನಗಳಲ್ಲಿ ಆಶಾವಾದದ ಕಿರಣಗಳು ದಿಗಂತದಲ್ಲಿ ಕಂಗೊಳಿಸಬಹುದೆಂಬ ನಿರೀಕ್ಷೆಯಲ್ಲಿ..
*****