ಮತ್ತೆ ಮಳೆ ಹೊಯ್ಯುತಿದೆ ಆದರೆ
ಎಲ್ಲಾ ನೆನಪಾಗುವುದಿಲ್ಲ.
ಮತ್ತೆ ಮತ್ತೆ ಮಳೆ ಬರಬೇಕು
ಅಂದರೇ ಈ ನೆಲ ಹಸಿರಾಗುವುದು
ಹಸಿರಾದೊಡೆ ಚಿಗುರಿತೆಂದು ನಾವು
ಭ್ರಮಿಸುವುದು, ಅದು ಜ್ವಾಲಾಮುಖಿಯ
ಮೇಲಿನ ಹಸಿರೆಂದು ಈ ಇಳೆ ಅದೆಷ್ಟು
ಸಲ ಗುಡುಗಿಲ್ಲ. ಗುಡುಗುತ್ತ ಹೇಳಿಲ್ಲ.
ಕೇಳುವ ಕಿವಿಯಿದ್ದರಲ್ಲವೆ?
ಮೊದಲು ಅವಳು ಹೀಗಿರಲಿಲ್ಲವಂತೆ
ಎಲ್ಲೆಲ್ಲೂ ಹಸಿರುಕ್ಕಿಸಿದ್ದಳಂತೆ
ಉಸಿರುಕ್ಕಿಸಿದ್ದಳಂತೆ ಕ್ಷಮಯಾ ಧರಿತ್ರಿ
ಎಂದು ಹಾಡಿ ಹೊಗಳಿಸಿಕೊಂಡಿದ್ದಳಂತೆ
ನಿನ್ನೊಳಗೇ ಈ ಬೇನೆ ಬೆಂಕಿಯೆ
ಕಾರಣವೇನಮ್ಮ ತಾಯೇ
ಮತ್ತೆ ಮತ್ತೆ ಬರುವ ಈ ಮಳೆಯೇ ಎಷ್ಟೋ ವಾಸಿ
ತಂಪಾಗಿಸಿದೆ ಈ ನಿನ್ನ ಬಿಸಿಯೊಡಲ ಬೆಂಕಿಯ
ಚೆಂಡಾಗಿ ಉರಿಯುತ್ತಿದ್ದೆ ನೀನು ಎಂದ ಆ
ವಿಜ್ಞಾನಿಗಳು ಪಾಪ ಪೆದ್ದರಾದರು. ಈಗಲೂ
ನೀನು ಉರಿಯುವ ಚೆಂಡೆಂದು ಅವರಿಗೆ ಕಾಣುವುದೇ ಇಲ್ಲ.
ಧಾರೆ ಹರಿವ ಮಳೆರಾಯನಿಗೇ ಗೊತ್ತು
ನಿನ್ನ ಗಾತ್ರ ತೂಕ ಪ್ರಮಾಣ, ತಮ್ಮ ಒಂಟಿ
ಮೇಜಿನ ಮುಂದೆ ಕುಳಿತು ಚಿತ್ರ ಬರೆಯುವ
ಆ ಪೆದ್ದರೀಗೇನು ಗೊತ್ತು?
ಆ ಮಳೆರಾಯ ಬಂದಾಗೊಮ್ಮೆ ನಿನಗೆ ಸಡಗರ
ಸದ್ಯ ನಿನ್ನ ಉರಿ ಸ್ವಲ್ಪ ಕಡಿಮೆ, ಮತ್ತೆ ಬಾಯಾ
ರುವವರೆಗೆ ಚಿಂತೆಯಿಲ್ಲ. ನಾವೂ ನಿನ್ನ ನೆನೆಯುತ್ತೇವೆ.
ನಿನ್ನೊಂದಿಗೇ ಹರಿಯುತ್ತೇವೆ ಅವನೊಂದಿಗೆ ನಿನ್ನ
ಈ ಜುಗಲ್‌ಬಂದಿಗೆ ಪ್ರೇಕ್ಷಕರೇ ನಾವೆಂದು
ಇನ್ನೂ ಅರಿವಾಗಿಲ್ಲವೇ ನಿನಗೆ, ಕಡೆಗಣಿಸಬಹುದೇ
ನಮ್ಮನ್ನು ಹೀಗೆ, ಇದು ತರವಲ್ಲ ತಾಯೆ ನಿನಗೆ
ಒಮ್ಮೆ ಒಂದು ಕ್ಷಣ ಸುಮ್ಮನಾಗು, ನಿಶ್ಚಿಂತಳಾಗು.
ಗರಗರ ತಿರುಗುವುದನ್ನೇನೂ ನಿಲ್ಲಿಸಬೇಡ
ಹಗಲೂ ರಾತ್ರಿ ಕಣ್ಣೆವೆ ತೆರೆದು ಮುಚ್ಚುವುದನ್ನೂ
ನಿಲ್ಲಿಸಬೇಡ ಒಳಗೊಳಗೇ ಅದುಮಿಟ್ಟ, ಆ
ಬೆಂಕಿಯನ್ನು ಅದರದೇ ಆದ ಬಾಯಿದೆ
ಯುಗಯುಗಗಳಿಂದ ಅಲ್ಲಿಂದ ಹರಿಯಬಿಡು
ಹೊರಗೆ, ತಣ್ಣಗಾಗು ಅಲ್ಲಿಗೆ, ಹೀಗೆ ಎಲ್ಲೆಲ್ಲೋ
ಗುಡುಗಾಡಿ ಅಪರಿಮಿತ ಯಕ್ಷಗಾನ ಬಯಲಾಡ
ಬೇಡ, ಕಿಲಾರಿಯಾಗಬೇಡ, ಗುಜರಾತಿನ
ಗುಡ್ಡಗಾಡುಗಳ ತಲೆ ಕಳಗು ಮಾಡಬೇಡ,
ಮತ್ತೆ ಮತ್ತೆ ಮಳೆ ಹೊಯ್ಯುತಿರಲೆಂದೇ
ನಿನ್ನ ಋತುಚಕ್ರ ತಿರುಗಿಸಿ ಆವಿಯಾಗಿಸಿ
ಮೋಡವಾಗಿಸಿ ಮಳೆಯಾಗಿಸಿ ಸುರಿಸು
ಉರಿಸಿ ಕಾಯಿಸು.
ಒಳಗಿನ ಬೆಂಕಿ ಇರಲಿ ಅಲ್ಲೇ
ಹೊರಗೆಲ್ಲಾ ಚಿಗುರಾಗಿ ಹಸಿರಾಗಿ ನಲಿ.
*****
-ಅನ್ವೇಷಣೆ