ಬಾಗಿಲ ಬಡಿದವರಾರೋ
ಎದ್ದು ನೋಡಲು ಮನಸಿಲ್ಲ
ಕನಸಲ್ಲೋ ಇದು ನನಸಲ್ಲೋ
ತಿಳಿಯುವುದೇ ಬೇಡ
ಮನೆಗೆಲಸದ ಹೆಣ್ಣೋ
ದಿನ ಪತ್ರಿಕೆ ತರುವವನೋ
ಹಾಲಿನ ಹುಡುಗನೊ
ತರಕಾರಿಯವಳೋ
ಅಂಚೆ ಜವಾನನೊ
ಕಿರಿಕಿರಿ ನೆರೆಯವರೋ
ಬೇಡುವ ಯಾಚಕರೋ
ಕೇಳುವ ಪ್ರಾಯೋಜಕರೋ
ಅಚ್ಚರಿ ನೀಡುವ ಸ್ನೇಹಿತರೋ
ದಾರಿ ತಪ್ಪಿದ ಯಾತ್ರಿಕರೋ
ತಂಟೆಗೆ ತಟ್ಟಿದ ಬಾಲಕರೋ
ತಪ್ಪು ವಿಳಾಸದ ಮಾಲಿಕರೋ
ಗಾಳಿಗೆ ಬಡಬಡ ಬಡಿಯಿತೊ
ನೆನಪೆದ್ದು ಧಡಧಡ ಬಂದಿತೊ
ಒಳಮನಸಿದ ಬಯಸಿತೊ
ವಿಧಿ ತಾನೇ ಕರೆಯಿತೊ
ಅಥವಾ ನಾನೇ ಬಡಿದೆನೊ
ನನ್ನನೆ ಕರೆಯುವುದಕ್ಕೆ
ನಾ ಹೊರಗಿದ್ದೆನೊ ಒಳಗಿದ್ದೆನೊ
ಒಳ ಹೊರಗಿನ ಸಂಧಿಯಲಿದ್ದೆನೊ
ಎಚ್ಚರವಿದ್ದೆನೊ
ನಿದ್ದೆಯಲಿದ್ದೆನೊ
ಈ ದಿನವೊ ಪ್ರತಿದಿನವೊ
ಯುಗ ಮುಗಿಯಿತೊ ಸುರುವಾಯಿತೊ
ನಾನೀ ಕ್ಷಣದೊಳಗೋ
ಕ್ಷಣವಿದು ನನ್ನೊಳಗೋ
ತಿಳಿಯುವುದೇ ಬೇಡ
*****