ಅಲ್ಲಲ್ಲಿ ನಿಂತು ಅಲ್ಲಲ್ಲಿ ತಡೆದು
ದಾರಿ ಸಾಗುವುದೆ ಒಳ್ಳೆಯದು
ಎಲ್ಲಿಯೂ ನಿಲ್ಲದೆ ಏನನೂ ಕಾಣದೆ
ಧಾವಿಸುವುದೇ ತಲ್ಲಣ
ಕೆರೆಯ ನೋಡುವುದು ಕೊಳವ ನೋಡುವುದು
ಜಲಾಶಯದ ಬಳಿ ತಂಗುವುದು
ಗಿರಿಯನೇರುವುದು ಕಣಿವೆಯನಿಳಿಯುವುದು
ಬಳಸು ದಾರಿಗಳಲ್ಲಿ ಸರಿಯುವುದು
ಅದೂ ಯಾನವಲ್ಲವೇ
ಹೊಲಗಳಲಿ ಅಲೆಯುವುದು ಹುಲ್ಲಮೇಲೊರಗುವುದು
ಹಲವರುಗಳ ತಿರುಗುವುದು
ಮೆಲುದನಿಯಲಿ ಮಾತಾಡುವುದು ಮಕ್ಕಳ ಜತೆ ಆಡುವುದು
ಹಕ್ಕಿಗಳ ಕಲರವರಕೆ ಮನ ಸೋಲುವುದು
ಧ್ಯಾನ ಮಾಡುವುದು ಕರ್‍ಮ ಮಾಡುವುದು
ವಿದ್ಯಾದಾನ ಮಾಡುವುದು
ಆಗಾಗ ಮೌನ ವಹಿಸುವುದು
ಜಗ ದೊಡ್ಡದು ಗಗನ ದೊಡ್ಡದು
ಯುಗ ದೊಡ್ಡದು ಕಾಲ ಅಗಾಧ
ನಾನೆ ಪರಿಮಿತ
ಮೊಗೆದರೂ ಮುಗಿಯದ ಯಾವುದೋ ಒಂದು ಭಾವ
ಯಾವಾಗಲೂ ಇರುವುದು
ಇಂದು ನಿನ್ನೆಯದಲ್ಲ ಯಾರು ಕಂಡುದು ಅಲ್ಲ
ಹೆಸರು ಬೇಕಿಲ್ಲ ಗುರುತು ಬೇಕಿಲ್ಲ
ಅದು ಅಲ್ಲ ಇದು ಅಲ್ಲ ಯಾವುದೂ ಅಲ್ಲ
ಬಹುಳವೋ ಏಕವೋ ಎನ್ನುವುದೂ ಇಲ್ಲ
ಅನಾದಿ ಅನಂತ
ಅದ ಮರೆಯದೆ ಇರುವುದು
ಒಳ್ಳೆಯದು
*****