ಚಲುವ ಕನ್ನಡ ನಾಡ ಮಣ್ಣೊಳಾದೀ ದೇಹ
ಬೆಳೆದು ಕನ್ನಡ ತಾಯ ತೊಡೆಯಮೇಲೆ
ಇಂಬಾಗಿ ಮಲಗಿರಲು ಹಾಡಿ ಕನ್ನಡಗಬ್ಬ
ಹೃದಯದಲಿ ತುಂಬಿದಳು ರಸದ ಹಬ್ಬ.
ಕನ್ನಡಿಗನಾನೆಂಬ ವಜ್ರಕವಚವ ತೊಡಿಸಿ
ರಾಗರಸಭಾವಗಳ ಮನದೊಳಿಡಿಸಿ
ಕನ್ನಡದ ಹಿರಿಮೆಗಳ ಹಾಡೆಂದು ಮನಗೊಟ್ಟು
ಕನಸಿನಲಿ ಹರಸಿದಳು ಕಳಸವಿಟ್ಟು.
ಶಿವಮೊಗ್ಗೆಯಲಿ ಬಂದು ಸಮ್ಮೇಳನದಿ ನಿಂದು
ಕವಿಹೃದಯದೊಳಹೊಕ್ಕು ಕಂಡೆನಂದು
ನೋಡಿದೆನು ಕೇಳಿದೆನು ಕವಿಯ ಸವಿಕೃತಿಗಳನು
ಮೂಡಿದುದು ಹಿರಿದಾಸೆ ಹಾಡೆ ನಾನು.
ಗಾಯತ್ರಿ ಸೂಕ್ತದಲಿ ಮೊದಲಾದ ಕವಿವಾಣಿ
ಗಂಗಾವತರಣದಲಿ ಜನರಜಾಣಿ
ಮಂಗಳವ ತುಂಬಿದುದು ತೆರೆದು ಸರ್ವರ ಹೃದಯ
ಕನ್ನಡದ ಪೀರದಲಿ ಮೊಳಗಲುದಯ.
ಕಾಡುಸುಮಗಳಿಂದ ನಾಡದೇವಿಯ ಭಜಿಸಿ
ಮಡ್ಡನುಡಿ ಮಂತ್ರದಿಂ ಹಾಡಿ ನಮಿಸಿ
ದೇವಿಯೊಲುಮೆಯ ಪಡೆದ ಕಬ್ಬಿಗರ ಪದರಜದಿ
ಹೊಡೆಮರಳಿ ಪಡೆದಿರುವ ಸೂಕ್ಷ್ಮಪಥದಿ
ಜೀವಮಿಲ್ಲದ ಗಾನ ಹೇವಮಿಲ್ಲದ ತಾನ
ಎರಡು ದನಿಗಳ ಮೇಳದಲ್ಲಿ ಮೌನ.
ಆರರಿಯದಂತಾನು ಮುಂಜಾವಿನಲಿ ಭಾನು
ಉದಯಿಸುವ ಪೂರ್ವದಲ್ಲಿ ಹಾಡುತಿಹೆನು.
*****