ಅದು ಬಳ್ಳಿಯಂತೆ
ಕಾಲಿಗೆ ತೊಡರುತ್ತಾ
ಭಯದಂತೆ
ಎದೆಯೊತ್ತಿ ಉಸಿರುಗಟ್ಟಿಸುತ್ತಾ
ಎತ್ತಲೆತ್ತಲೂ
ಕೂರಲೂ ನಿಲ್ಲಲೂ ಬಿಡದೇ
ಹಠ ಹಿಡಿದ ಮಗುವಿನಂತೆ
ಜೀವ ಹಿಂಡುತ್ತಿತ್ತು.
ಪ್ರೀತಿಯಿಂದ ಮೃದುವಾಗಿ
ಕಾತರದಿಂದ ರೂಕ್ಷವಾಗಿ ತಬ್ಬುತ್ತಿತ್ತು
ಇಂಚಿಂಚೂ ವ್ಯಾಪಿಸುತ್ತಾ
ಅವಳು…..
ಆ ನೋವನ್ನು
ಪ್ರೀತಿಯಿಂದ ಆಪೋಷಿಸಿಬಿಟ್ಟಳು!
ಅದು ರಕ್ತದ ಕಣಕಣದಲ್ಲೂ
ಸೇರಿಹೋಯಿತು
ಕಣ್ಣಿನೊಳಗಿನ ನೋಟದಂತೆ
ಈಗ ಅವಳೊಳಗೆ
ನೋವು ಬೀಜವಾಗಿ ಊರಿ
ಮೆಲ್ಲಗೆ ಮೊಳಕೆಯೊಡೆದು
ನರನರಗಳನ್ನೂ ಬಳ್ಳಿಯಂತೆ
ಹೆಣೆದು ಬೀಗುವಾಗ
ಅವಳು ಫಲತುಂಬಿ
ಹಠಮಾರಿ ಕಂದನಿಗೆ ಊಡಿಸುತ್ತಾಳೆ.
ಮಡಿಲೊಳಗಿಟ್ಟು ಆಡಿಸುತ್ತಾಳೆ.
ಅರಿವೇ ಇಲ್ಲದೇ
ಅವಳೀಗ ತಾಯಾಗಿದ್ದಾಳೆ!
*****