ಎನ್ನ ನಾನರಿಯದಲ್ಲಿ ಎಲ್ಲಿರ್ದೆ ಹೇಳಯ್ಯಾ
ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆ
ಅಯ್ಯಾ ಎನ್ನೊಳಗೆ ಇನಿತಿರ್ದು ಮೈ ದೋರದ ಭೇದವ
ನಿಮ್ಮಲ್ಲಿ ಕಂಡೆ ಕಾಣಾ ಚೆನ್ನಮಲ್ಲಿಕಾರ್ಜುನಾ
[ಇನಿತಿರ್ದು-ಇಷ್ಟು ಇದ್ದು, ಹೀಗೆ ಇದ್ದು]
ಅಕ್ಕಮಹಾದೇವಿಯ ವಚನ. ನಾನು ಯಾರು ಎಂದು ನನಗೇ ಗೊತ್ತಾಗುವ ಮೊದಲು ನೀನು ಎಲ್ಲಿದ್ದೆ? ಇದ್ದರೂ ಇದ್ದಿರಬಹುದು, ಬಂಗಾರದೊಳಗೆ ಅಡಗಿರುವ ಬಣ್ಣದ ಹಾಗೆ. ಹಾಗೆ ನನ್ನೊಡನೆ ಬೇರ್ಪಡಿಸಲಾಗದಂತೆ ಇದ್ದೂ ಕೂಡ ಯಾಕೆ ನನಗೆ ಮೈದೋರದೆ ಹೋದೆ? ನನ್ನೊಳಗಿದ್ದೂ ನನ್ನಿಂದ ಬೇರೆಯಾಗಿಯೇ, ಕೈಗೆ ಸಿಗದೆ, ಕಣ್ಣಿಗೆ ಕಾಣದೆ ಇರುವ ಭೇದವನ್ನು ಮಾತ್ರ ಕಂಡೆ ಅನ್ನುತ್ತಾಳೆ. ಇರುವ ಒಂದು ಎರಡಾಗಿ ಮತ್ತೆ ಒಂದೇ ಆಗಲಾರದ ಉಮ್ಮಳವನ್ನು ಈ ವಚನ ಹೇಳುತ್ತದೆ.
ಈ ವಚನದಲ್ಲಿ ಗಮನಕ್ಕೆ ತಕ್ಕ ಎರಡು ಸಂಗತಿಗಳಿವೆ: ಮೊದಲನೆಯದು `ನಾನು’ ಎಂಬ ಅರಿವು ಮೂಡುವವರೆಗೆ `ನೀನು’ ಎಂಬ ಮಾತಿಗೆ ಅರ್ಥವೇ ಇಲ್ಲ. ನಾನು ಮತ್ತು ನೀನು ಅನ್ನುವ ಭೇದ ಸೃಷ್ಟಿಯಾಗದಿದ್ದರೆ `ಅರ್ಥ’ ಅನ್ನುವ ಮಾತಿಗೂ ಅರ್ಥವಿಲ್ಲ. ನಿನ್ನಿಂದ ನಾನು ಬೇರೆ, ನನ್ನಿಂದ ನೀನು ಬೇರೆ ಅನ್ನುವುದರಿಂದಲೇ ಅಲ್ಲವೇ ನಮ್ಮ ನಮ್ಮ `ವ್ಯಕ್ತಿತ್ವ’ ಸ್ಪುಟಗೊಳ್ಳುವುದು! ಹಾಗೆ `ನಾನು’ ಬೇರೆ ಎಂಬ ಅರಿವು ಮೂಡುವವರೆಗೆ ನೀನು ಎಲ್ಲಿದ್ದೆ ಅನ್ನುವ ಪ್ರಶ್ನೆ ಅಕ್ಕನದು.
ಇನ್ನೊಂದು ಸಂಗತಿ ಎಂದರೆ ನೀನು ಹಾಗೆ ಬೇರೆ ಅಲ್ಲವೇ ಅಲ್ಲ, ಬಂಗಾರದಿಂದ ಬಣ್ಣವನ್ನು ಬೇರ್ಪಡಿಸಲು ಆಗದಂತೆ ನೀನು ನನ್ನೊಳಗಿನವನೇ ಅನ್ನುವ ಅರಿವು. ಆದರೆ ತೊಡಕೆಂದರೆ ನನ್ನೊಳಗೆ ಇದ್ದರೂ ಹಾಗೆ ಇರುವಾತ ಬೇರೆಯಾಗಿ ಕಣ್ಣಿಗೆ ಕಾಣಿಸಿಕೊಳ್ಳದಿದ್ದರೆ ಕೂಡುವ ಮಾತೆಲ್ಲಿಂದ ಬಂದಿತು! ಹಾಗೆ ನನ್ನೊಳಗೆ ಇರುವವನನ್ನು ಕಾಣುವುದಕ್ಕೆ `ನಾನು’ ಪ್ರತ್ಯೇಕಗೊಂಡು ಇಲ್ಲವಾಗಬೇಕೋ ಏನೋ.
*****