ಸೋಲಿರಲಿ, ಗೆಲುವಿರಲಿ, ನಗುವಿರಲಿ ಅಳುವಿರಲಿ ದಿನಗಳು ಉರುಳುತ್ತವೆ. ಉರುಳುತ್ತಿರುವ ದಿನಗಳಲ್ಲಿ ನಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಯಾರಿಗೂ ಭಾರವಾಗದೆ ಜೀವಿಸುವ ಛಲವಿದೆಯಲ್ಲ ಅದು ಜೀವನಕ್ಕೆ ಎಸೆಯುವ ಸವಾಲು. ಎಷ್ಟು ಆಡಿಸುತ್ತಿಯೋ ಅಷ್ಟು ಆಡಿಸು ನಾನು ಮಾತ್ರ ಕೆಳಕ್ಕೆ ಉರುಳುವುದಿಲ್ಲ ಎನ್ನುವ ಎದೆಗಾರಿಕೆಯ ನಿರ್ಧಾರಕ್ಕೆ ಯಾವ ದೇವರಾದರೂ ತಲೆಬಾಗಲೇಬೇಕು.
ಎಲ್ಲರೂ ಇಂತಹ ಎದೆಗಾರಿಕೆಯನ್ನು ಬೆಳೆಸಿಕೊಳ್ಳಬೇಕು. ಜೀವನಕ್ಕೆ ಸವಾಲು ಹಾಕಬೇಕು. “ಸತ್ತೆನೆಂದೆನಬೇಡ; ಸೋತೆನೆಂದೆನಬೇಡ; ಬತ್ತಿತೆನ್ನೊಳು ಸತ್ವದೂಟೆಯೆನಬೇಡ; ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು! ಮತ್ತೆ ತೋರ್ಪುದು ನಾಳೆ- ಮಂಕುತಿಮ್ಮ!” ಇದು ಜೀವನ. ಹೀಗೆ ಬಾಳಲು ಆತ್ಮವಿಶ್ವಾಸ ಬೇಕು. ಜೀವನವನ್ನು ಪ್ರೀತಿಸುವ ಮನಸ್ಸು ಬೇಕು. ಜೀವನದಲ್ಲಿ ಶ್ರದ್ಧೆ ಇರಬೇಕು. ಏನಾದರೂ ಕೆಳಕ್ಕೆ ಉರುಳಬಾರದು, ಒಂದು ವೇಳೆ ಬಿದ್ದರೂ ಎದ್ದು ನಿಲ್ಲಬೇಕು ಎನ್ನುವ ಛಲಬೇಕು. ಈ ಮನೋಭಾವವಿದ್ದಲ್ಲಿ ಬಿದ್ದಲ್ಲಿಂದ ಎದ್ದು, ಅಳುನುಂಗಿ ನಗುವ, ನೋವಲ್ಲೂ ನಗುವ ಕಲೆಯನ್ನು ಕರಗತ ಮಾಡಿಕೊಳ್ಳಬಹುದು. ಜೀವನದಲ್ಲಿ ಮುಂದೆ ಸಾಗಬಹುದು.
ಯಾರಾದರೂ ಸದಾ ನಗುತ್ತಿದ್ದರೆ, ಅವರಿಗೆ ಯಾವ ನೋವೂ ಇಲ್ಲ ಎನ್ನುವುದು ಸತ್ಯವಲ್ಲ. ಆಳುವಿನಲ್ಲೂ ನಗುವ ಎದೆಗಾರಿಕೆಯನ್ನು ಅವರು ರೂಢಿಸಿಕೊಂಡಿದ್ದಾರೆ ಎನ್ನುವುದು ಸತ್ಯ. ಚಾರ್ಲಿ ಚಾಪ್ಲಿನ್ ಹೇಳುವ ಒಂದು ಮಾತಿದೆ. ‘ಮಳೆಯಲ್ಲಿ ತೊಯ್ದುಕೊಂಡು ನಡೆಯುವುದೆಂದರೆ ನನಗಿಷ್ಟ, ಯಾಕೆಂದರೆ, ಆಗ ನನ್ನ ಕಣ್ಣೀರು ಯಾರಿಗೂ ಕಾಣಿಸುವುದಿಲ್ಲ.’ ಅವನ ಕಣ್ಣೀರು ಬೇರೆಯವರಿಗೆ ಕಾಣಿಸುತ್ತಿದ್ದರೆ ಅವನನ್ನು ನೋಡಿ ನಗುವವರಿಗೂ ಮುಜುಗರವಾಗುತ್ತಿತ್ತು. ಅನುಕಂಪ ಮೂಡುತ್ತಿತ್ತು. ಅನುಕಂಪಕ್ಕೆ ಸಿಕ್ಕಿದಿದ್ದರೆ ಅವನು ಯಾವಾಗಲೋ ಸತ್ತು ಹೋಗುತ್ತಿದ್ದ. ಚಾರ್ಲಿ ಚಾಪ್ಲಿನ್ ಆಗಿ ಎಲ್ಲರ ಮನದಲ್ಲಿ ಇವತ್ತಿಗೂ ಜೀವಂತವಾಗಿ ಉಳಿಯುತ್ತಿರಲಿಲ್ಲ. ಅವನಂತೆ ತಮ್ಮ ಕಣ್ಣೀರನ್ನು ಯಾರಿಗೂ ಕಾಣಿಸದಂತೆ ಇಂಗಿಸುವವರು ಬಹಳ ಜನರಿರುತ್ತಾರೆ. ಹೊರಗೆ ನಗುನಗುತ್ತಾ ಇದ್ದು ಬಚ್ಚಲು ಮನೆಯಲ್ಲಿ ತಮ್ಮ ಕಣ್ಣೀರನ್ನು ಹರಿಬಿಡುವ ಇಂಥವರ ಕಣ್ಣೀರು ಯಾರಿಗೂ ಕಾಣಿಸದೆ ಇಂಗಿ ಹೋಗುತ್ತದೆ. ಇವರು ತಮ್ಮ ಒಳಗಿನ ದಾವಾನಲವನ್ನು ಮುಚ್ಚಿಟ್ಟು ನಗುನಗುತ್ತಾ ಮುಂದೆ ಹೆಜ್ಜೆ ಹಾಕುತ್ತಾರೆ. ಹೊರ ಪ್ರಪಂಚಕ್ಕೆ ಇವರು ಸುಖಿಗಳು.
ನೋವು ನುಂಗಿ ನಗಲಾಗದವರು ಜೀವನದಲ್ಲಿ ಅಳುತ್ತಾ ಹೆಜ್ಜೆ ಹಾಕುತ್ತಾರೆ. ಅವರ ಹೆಜ್ಜೆಗಳು ಭಾರವಾಗಿ ಬಿದ್ದಲ್ಲಿಂದ ಏಳುವುದು ಕಷ್ಟವಾಗುತ್ತದೆ. ನಗುವವರ ಹೆಜ್ಜೆಗಳು ಹಗುರವಾಗಿ ಬಿದ್ದಲ್ಲಿಂದ ಏಳಲು ಸುಲಭವಾಗುತ್ತದೆ. ನಗು ಜೀವನವನ್ನು ಹಗುರ ಮಾಡುತ್ತದೆ.
ಜೀವನದಲ್ಲಿ ಎಲ್ಲ ರೀತಿಯ ಅನುಭವಗಳಿಗೂ ಸ್ಥಾನವಿದೆ. ಅನುಭವಗಳು ಮನುಷ್ಯನನ್ನು ತಿದ್ದುವುದೆನ್ನುತ್ತಾರೆ. ಶ್ರೀಮಂತಗೊಳಿಸುವುದೆನ್ನುತ್ತಾರೆ. ಪಾಠ ಕಲಿಸುವುದೆನ್ನುತ್ತಾರೆ. ಅನುಭವಗಳು ಕೊಡುವ ಶಿಕ್ಷಣ ಯಾವ ವಿಶ್ವವಿದ್ಯಾಲಯಗಳಿಂದಲೂ ದೊರಕಲಾರದು. ಪ್ರತಿಯೊಂದು ಕೆಟ್ಟ ಅನುಭವಗಳು ಆ ಕ್ಷಣಕ್ಕೆ ನಮ್ಮನ್ನು ಸೋಲಿಸುವಂತೆ ಕಂಡರೂ ಜೀವನಕ್ಕೆ ಒಗ್ಗಿಕೊಳ್ಳುವುದನ್ನು ಕಲಿಸಿಕೊಡುತ್ತದೆ. ನೋವು ನುಂಗಿ ನಗುವ ಜಾಣತನ ಕಲಿಸಿಕೊಡುತ್ತದೆ. ಜೀವಿಸುವ ಧೈರ್ಯ ತುಂಬಿಸುತ್ತದೆ.
‘ಆಡಿಸಿ ನೋಡು ಬೀಳಿಸಿ ನೋಡು ಎಂದೂ ಉರುಳದು’ ಎನ್ನುವ ಒಂದು ಸುಂದರವಾದ ಹಾಡಿದೆ. ಈ ಹಾಡು ನನ್ನ ಸೋಲಿನ ಕ್ಷಣಗಳಲ್ಲಿ ನನ್ನನ್ನು ಬಡಿದೆಬ್ಬಿಸಿದೆ. ಕಾಲಿಗೆ ಎದ್ದುನಿಲ್ಲುವ ಶಕ್ತಿ ನೀಡಿದೆ. ನಗುನಗುತ್ತ ಜೀವನವನ್ನು ಎದುರಿಸಲು ಸಹಾಯ ಮಾಡಿದೆ. ಹಾಡು ಎಲ್ಲರ ಕಿವಿಯಲ್ಲೂ ಗುನುಗುಣಿಸುವಂತಾಗಬೇಕು. ಸೋತು ಕುಸಿಯುವುದರಲ್ಲಿ ಅರ್ಥವೇ ಇಲ್ಲ. ಎದ್ದು ನಿಂತು ಮುಂದೆ ಹೆಜ್ಜೆ ಹಾಕಬೇಕು. ಜೀವನವನ್ನು ಎದುರಿಸಬೇಕು. ಯಾವತ್ತೂ ಹೆದರಿ ಕುಸಿಯುವ ಅಗತ್ಯವಿಲ್ಲ.
“ಸತ್ತನೆಂದೆನಬೇಡ; ಸೋತೆನೆಂದೆನಬೇಡ; ಬತ್ತಿತೆನ್ನೊಳು ಸತ್ವದೂಟೆಯೆನ ಬೇಡ; ಮೃತ್ಯುವೆನ್ನುವುದೊಂದು ತೆರೆಯಿಳಿತ; ತೆರೆಯೇರು! ಮತ್ತೆ ತೋರ್ಪುದು ನಾಳೆ- ಮಂಕುತಿಮ್ಮ!” ಇದು ಡಿವಿಜಿ ಕಂಡುಕೊಂಡ ಜೀವನದ ಸತ್ಯ. ಆಡಿಸಿ ನೋಡು ಬೀಳಿಸಿ ನೋಡು ಎಂದೂ ಉರುಳದು ಎನ್ನುತ್ತಲೇ ಬಾಳುವ ಕಲೆಯಿದು.
ಕೊನೆಗೊಂದು ಕಿವಿಮಾತು –
ನಮ್ಮ ನಗು ಎಲ್ಲರಿಗೆ; ಆದರೆ ಅಳು ನಮಗೆ ಮಾತ್ರ. ನಗುವಿಗೆ ಪಾಲುದಾರರಿದ್ದಾರೆ. ಆದರೆ ಅಳುವಿಗೆ ಪಾಲುದಾರರಿಲ್ಲ.
*****
(ಚಿಂತನ- ಆಕಾಶವಾಣಿ: ಮಂತಣಿ)