ಹಳದಿ ಎಲೆ ಉದುರಿ ಹಸಿರು ಎಲೆ ಚಿಗುರು,
ಹೊದ್ದ ಹೂವ ಗಿಡಗಳಿಗೆ ಅವನ ಸ್ಪರ್ಶ ಇನ್ನೂ,
ರೆಕ್ಕೆ ಬಿಚ್ಚಿದ ಮುದ್ದು ಮರಿಗಳ ಕೆಂಪು ಕೊಕ್ಕು,
ಮೋಡಗಳ ಬೀಜ ಹರಡಿದ ನೀಲ ಬಾನು,
ನಾಳೆಯ ಚಿಂತೆಯಿರದ ವಸಂತನ ಹಸಿರು ಓಕುಳಿ.
ಮೊಳೆತ ಮೌನ ಮಾತುಗಳಿಗೆ ಸೂರ್ಯನ
ಕಿರಣಗಳ ಪ್ರಕಾಶ ತಬ್ಬಿದ ಮುಂಜಾನೆ,
ಮನದ ಹೆಣಿಕೆಯ ನೇಯ್ಗೆಯಲಿ, ಜೀವ
ಸೋಸುವ ಜಾಲ ಹರಡಿ ತಣ್ಣಗೆ ಹರಿದ ನದಿ,
ಝಳದ ಖಾವೆಲ್ಲಾ ಹಾಳೆಗಿಳಿಸಿದ ಕವಿ.
ಜೀವ ತೊಟ್ಟಿಕ್ಕುವ ಬೆಳಗಿಗೆ, ಹಾಲು ಹಿಂಡಿದ
ಅವ್ವ, ಚಿಲಿಪಿಲಿ ಗುಟ್ಟಿದ ಹಕ್ಕಿಹಾಡಿಗೆ ಪಾಟೀ
ಹಿಡಿದ ಮಕ್ಕಳು, ಸೂರ್ಯನ ಅಗ್ನಿ ಸ್ಪರ್ಶದ ಅಡುಗೆ
ಮನೆಯಲ್ಲಿ ಅರಳಿದ ಘಮ ಬಿಳಿಬಿಳಿ ಅನ್ನ,
ಪೇಟೆಯಲ್ಲಿ ತಾಜಾ ಮೀನುಗಳ ಮಾರಾಟಗಿತ್ತ ಮೊಗೆರ್ತಿ.
ದುಡಿವ ಕೈಗಳ ಶಕ್ತಿ ಕೊಂಚವೂ ಕಡಿಮೆ ಆಗದ ಹೊತ್ತ
ಮಿಡಿವ ಹೃದಯಕೆ ಒಂದು ನೇವರಿಗೆ ಮತ್ತು
ಹರಿದ ಕಣ್ಣೀರಿಗೆ ಒಂದು ಜೀವ ಸ್ಪರ್ಶ ನೀಡಿ, ಹೂವ
ಹೂವ ಮೇಲೆ ದುಂಬಿಗಳು ಹಾರಾಡಿ ಒಂದು ರಾಗ,
ಎದೆಯ ಆಳಕೆ ಇಳಿದ ದರ್ಶನದ ಹರಿಕಾರ ಪ್ರೇಮಿ ನೀನು.
*****