ಬಿಟ್ಟು ಬಿಡದೇ ನಡೆದೆ ನಡೆದರು
ದಾರಿತುಂಬ ಕಲ್ಲು ಮಣ್ಣು ಹೆಂಟೆಗಳು.
ಹಟ್ಟಿಯ ಮಾಡಿನಲಿ ಗುಬ್ಬಚ್ಚಿ ಗೂಡು.
ಪುಟ್ಟ ಸೇತುವೆಯ ಕೆಳಗೆ ಸಳಸಳ ಮೀನುಗಳು,
ಎಲ್ಲಾ ಗಿಡಗಳ ತುಂಬ ಹಕ್ಕೀ ಹಾಡು.
ಹಸಿರು ಸೊಂಪಿನ ದಾರಿತುಂಬ ಕಂಡ,
ಬೇಟೆಯ ಹೆಜ್ಜೆಗಳು, ಏರು ದಾರಿ ತುಂಬ ನೋವು.
ಅಂತರಿಕ್ಷದಲಿ ತಾರೆಗಳ ಹುಡುಕಿದವರು.
ಮೊದಲ ಮಳೆಹನಿಗೆ ಮುಖ ಒಡ್ಡಿದಾಗ,
ಸಂಪನ್ನ ಸದಾಚಾರದ ಮಣ್ಣು ಘಮ್ಮೆಂದು
ಒಳಗೊಳಗೆ ಚಿಗುರಿದ ಹಸಿರು, ಆತ್ಮದ ತುಂಬ
ಧ್ವನಿ ಎತ್ತಿ ಹಾಡಿದ ಹಕ್ಕಿಗೂಡು, ತಾಯಿ ಒಡಲಲಿ
ಹುದುಗಿದ ಕೂಸು ಹಸಿಬಿಸಿ ರಕ್ತ ನರಗಳಲಿ
ಹರಿದು ಹೃದಯ ಹಗುರಾಗುವ ಊರು ಕೇರಿ.
ಸಾಗುತ್ತಲಿದೆ ದಾರಿ ಹೆಣಗುತ್ತ ಅವರಿವರ ಹೆಜ್ಜೆಗಳ
ಹೊತ್ತು ಶಿಲುಬೆ, ವರ್ಷದ ಎಲ್ಲಾ ಕಾಲದಲ್ಲಿ ಎದೆ
ಶೂಲೆ ಸಹಿಸುತ್ತ ಸೂರ್ಯ ಪಸರಿಸಿದ ಕಿರಣಗಳು.
ಪ್ರೇಮದ ಮಾತು ತೆರೆದ ನೀಲಿ ಆಕಾಶದಲಿ,
ಡಬ್ಬುಬಿದ್ದ ಚಂದ್ರ ಹಳೇ ಗ್ರಂಥಗಳಲಿ ಹುದುಗಿದ.
ಇತಿಹಾಸ, ಉತ್ತಮವಾದದ್ದು ಯಾವುದೂ
ಪರಿಶ್ರಮವಿಲ್ಲದೇ ದಕ್ಕದು, ಸಫಲವಾಗು ಕೃತಿಯಲ್ಲಿ.
*****