ಮನಸ್ಸಿನಾಳಕೆ ಇಳಿದ ನಿಮ್ಮ ಘನ
ವೇದ್ಯ, ಪಾಪ ಪುಣ್ಯ ಸುಖ ದುಃಖ
ಎಲ್ಲವ ದಾಟಿ ಮರಣವನು ಜನನವಾಗಿಸಿ,
ಕಾಲ ಸರಿದ ಮಹಿಮೆ ಅವನ ನಿಜ ಒಲವು.
ಎಲ್ಲ ವಿಷಯಗಳ ಅರಿದೆನೆಂಬ ಅಹಂ ಭಾವ
ನಿಜದ ನೆರಳ ಸವರಿ ಸುಖಕ್ಕೆ ಆರೋಚಕವಿಲ್ಲ.
ಶರಣನಿಗೆ ಭಯವಿಲ್ಲ ಬಂಧನವಿಲ್ಲ. ಮತ್ತೆ
ಪುರುಷಕ್ಕೆ ಬೆಲೆ ಬಂದಿತು ಅಂಗದ ಲಿಂಗದಿಂದ.
ಹಗಲಲಿ ಇರುಳಲಿ ಅಲ್ಲಿಂದ ಇಲ್ಲಿಂದ ಒಡಲ
ಕಾವಿಗೆ ತಳಮಳಿಸಿದ ಜೀವ ನೆತ್ತಿಯ ಒಳಗಿನ,
ಮೃತ್ಯು ನೆರಳು ಕಾಣದೇ ಸುಳ್ಳು ಬೆಳದಿಂಗಳ,
ಬಯಲ ನೋಡಿ, ಹಿಂದಣ ಹೆಜ್ಜೆಗಳು ನೆಲಗೊಳ್ಳದು.
ದಾರಿಗುಂಟ ನಡೆದವರಿಲ್ಲ ಎಲ್ಲ ಲೆಕ್ಕಾಚಾರಗಳ
ಬದಲಿಸಿ ಜಾರಿ ಬಿದ್ದವರು, ನೆಲವ ಬಿಟ್ಟು
ಆಕಾಶದಲಿ ನಿಂತು, ಮುಗಿಲೊಳು ಮಿಂಚದೇ,
ಸಾಮಾನ್ಯದ ಅರಿವಿನ ಘಮ ಕಳೆದು ಹೋಗುವುದು.
ಕಂಗಳ ಮುಂದಿನ ಕತ್ತಲೆ, ಮನದ ಮುಂದೆ
ಬಟ್ಟೆ, ಹೊರಗಡೆಯ ಶೃಂಗಾರ ಮರೆತು
ಒಳಗೆ ನೋಡಿದವರ ಬೆಳಕಿನ ಸೂರ್ಯನ ಕಿರಣಗಳು,
ಅಂಬರದೊಳಗೆ ಒಂದು ಹಸಿರು ಬಯಲು ಹುಟ್ಟುವುದು.
ಅಲ್ಲಮನೆಂದರೆ ಘನ ರೂಪದ ಚಿತ್ರ ಬರೆಯಬಹುದು.
ಆದರೆ ಪ್ರಾಣವ ಹಿಡಿಯಲು ಬಾರದು.
ಅಲ್ಲಮನೆಂದರೆ ಅಲ್ಲಿ ಇಲ್ಲಿ ಎಲ್ಲಿಯೂ ಇಲ್ಲದ ಬಯಲು.
ಅಂತಃ ಶೂನ್ಯಂ, ಬಹಿಃ ಶೂನ್ಯಂ ಶೂನ್ಯಂ ಸರ್ವ ಶೂನ್ಯಂ.
*****