ಈ ಸಂಜೆಯ ಕೌನೆರಳು, ಬಾಗಿಲ ಬಳಿ
ಅವನ ಕಾಲ ಸಪ್ಪಳ, ದೇವರ ಮುಂದಿನ
ನೀಲಾಂಜನದಲಿ ಬೆಳಕು ಮಂದವಾಗಿ ಹಾಸಿ,
ಯಾರು ಶುರುವಿಟ್ಟುಕೊಂಡಿದ್ದಾರೆ ಭಜನೆಯ ಧ್ಯಾನ,
ಮಳೆ ಇಲ್ಲದೇ ಬಿರಿದ ನೆಲದ ಮಣ್ಣಿನ ವಾಸನೆ
ಹರಡಿ, ಅಂವ ಬಂದ ಹೊತ್ತು, ಅವಳ ಕಣ್ಣುಗಳಲಿ
ನೀರ ಹನಿಗಳು ತುಂಬಿದ ಕತ್ತಲು.
ಕೊಟ್ಟಿಗೆಯ ತುಂಬ ಕರುಗಳು ಮೊಲೆಗಳಿಗೆ
ಬಾಯಿ ಇಟ್ಟಿವೆ. ಮೂಲೆಯಲಿ ರಾತ್ರಿ ಗಂಜಿ
ಬೇಯುತ್ತಿದೆ. ಹಿತ್ತಲತುಂಬ ಪಾರಿಜಾತ ಗಂಧ.
ಅಡುಗೆ ಮನೆಯಿಂದ ನೀಲಿ ಹೊಗೆ ಆಕಾಶಕ್ಕೇರಿ
ತೊಟ್ಟಿಲಲಿ ಮಲಗಿದ ಕಂದ ಕಣ್ಗಳ ತುಂಬ
ಚಿಕ್ಕಿಗಳು ತೇಲಿ ಅವಳ ಎದೆತುಂಬ ಲಾಲಿಹಾಡು,
ಅಂವ ಬಂದ ಹೊತ್ತು ಪರಿಮಳ ತುಂಬಿದ ಮನೆ.
ಅಂವ ಬಾಗಿಲಿಗೆ ಬಂದ ಹೊತ್ತು ಹಗಲ
ಆಯಾಸವೆಲ್ಲಾ ಕರಗಿ, ಕೈಕಾಲುಗಳ ತುಂಬ ಹರುಷ
ಹರಡಿ ಹಾಸಿದ ಅಂಗಳದಲಿ ಹಸಿರು ಹುಲ್ಲಿನ ಗರಿ,
ಯಾವ ಭವಕೆ ಯಾರೋ ಆಲಾಪನೆ ಜಾರಿ,
ಕತ್ತಲೆಯ ಮೂಲೆಯಲ್ಲೊಂದು ಬೆಳಕಿನ ಕಂದೀಲು,
ಎಲ್ಲರೊಂದಿಗೆ ಹರಿದು ಹಂಚಿದ ಶಾಂತಿ ಪ್ರಭೆ,
ದೇವರು ನಮ್ಮಿಂದ ದೂರವಿಲ್ಲ. ಇಲ್ಲೇ ಬಾಗಿಲಲ್ಲಿ
ನಿಂತಿರುವನು.
*****