ಅರ್‍ಜುನನ ಹೃದಯದಲಿ ಪ್ರತಿಬಿಂಬಿಸಿದ ದೇವ
ಪರ್ಜನ್ಯನೊಲು ಆತ್ಮ ಸುಜ್ಞಾನಗಳ ತಿಳಿವ
ನಿರ್ಜೀವರಾದೆಮಗೆ ಧಾರೆಯೆರೆದೀ ಜಳವ
ವರ್ಜಿಸಿದೆ ಬೋಧಿಸುತ ನಿನ್ನ ವಚನಾಮೃತವ.
ಸೌಜನ್ಯ ಬೆಳೆ ಬಿತ್ತಿ ಬೆಳೆದೇರಿ ಪೂಫಲವ
ನಾರ್ಜಿಸಿದೆವಾವಿಂದು ನಿನ್ನ ಕೃಪೆಯಿಂದೋಲವ
ಪೂಜ್ಯಮಾದುದು ಸವಿದು ಗೀತಾ ಸುಧಾರಸವ.
ಒಂದೊಂದು ಮಾತಿನಲಿ ಹೃದಯವನೆ ತೆರೆಯಿಸುವೆ
ಎಂದೆಂದು ಮರೆಯದೊಲು ಸವಿಮಾತನಾಡಿರುವೆ
ಅಂದಿನಿನ್ನಿನ್ನೆವರ ಮುಂದೆಯುಂ ಸೊಗಯಿಸುವೆ
ಹಂದೆಗಳ ಹೇಡಿಗಳ ಹುರಿಮಾಡಿ ಮೆರೆಯಿಸುವೆ
ಮಂದಾರಮನ್ನಿತ್ತು ಲೋಕಮಂ ಬೆಳಗಿರುವೆ
ನಂದನೋದ್ಯಾನವನೆ ಜಗದ ಮೇಲಿಟ್ಟಿರುವೆ
ತಂದೆಯಲ್ಲಿಹುದೆಲ್ಲ ಸುರಭಿ – ಕಲ್ಪದ್ರುಮವೆ.
ಧರೆಯು ಕೆರ್‍ಚನು ಮರೆತು ಮೌಢ್ಯಮೇ ಪೆರ್ಚು ತಿರೆ
ಸರುವಕುಂ ತಾನು ಹೊಣೆಯನ ಗರುವ ಮೂಡುತಿರೆ
ಧರುಮ ಕರುಮಗಳಳತಯೇನೊಂದನರಿಯದಿರೆ
ಮೊರೆಯುತಿದೆ ನಿನ್ನಮೃತವಾಣತಾಮರೆಯದಿರೆ
ಕರುಣದಿಂದೀಕ್ಷಿಸಿದೆ ಕಲಿಯುಗವ ನೀನರರೆ
ಸರುವ ಲೋಕದೊಳೆಂದು ಮಾಸದಿಹ ಧರುಮ ಕರೆ
ಪರಮಪಾವನ ಶರಣು ಇರಲಿರಲಿ ಕೃಪೆಯ ಮರೆ.
*****