ಬಾಗಿಲದಾಗಿನ ಕೋಗಿಲ ಕೂಗಿ ಕೂಗಿ ಮರನೇರಿ |
ನಾಗರ್‍ಹೆಡಿಯಂಗಾಡ್ಯಾವೇಳಯ್ಯಾ | ಸಿದ್ಧರಾಮಾ |
ನಾಗರ್‍ಹೆಡಿಯುಗಾಡ್ಯಾವೇಳಯ್ಯಾ ||೧||
ಅತ್ತಿಽಯ ಮಽರನೇರಿ ಸತ್ತು ಸೊರಗಿ ನಾನೆ ಬಂದ |
ಮುತ್ತಿನೊಸ್ತಾ, ತೋರ್‍ಯಾರೇಳಯ್ಯಾ | ಸಿದ್ಧರಾಮಾ |
ಮುತ್ತಿ ನೊಸ್ತಾ, ತೋರ್‍ಯಾರೇಳಯ್ಯಾ ||೨||
ಆಲಽದ ಮಽರನೇರಿ ಆಲಪರದು ನಾನೆ ಬಂದ |
ನೀಲದೊಸ್ತಾ ತೋರ್‍ಯಾರೇಳಯ್ಯಾ | ಸಿದ್ಧರಾಮಾ |
ನೀಲದೊಸ್ತಾ ತೋರ್‍ಯಾರೇಳಯ್ಯಾ ||೩||
ಅಕ್ಕಿಪೂಜಿ ಬ್ಯಾಳಿಪೂಜಿ ಮ್ಯಾಲ ಎಲಿಯ ಘಟ್ಟಪೂಜಿ |
ನಿತ್ಯಪೂಜಿ ಕಟ್ಟ್ಯಾರೇಳಯ್ಯಾ | ಸಿದ್ಧರಾಮಾ |
ನಿಮಗ ಪೂಜಿ ಕಟ್ಟ್ಯಾರೇಳಯ್ಯಾ ||೪||
ಕೆಂಪ ಗಂಧಾ ಬಿಳಿಯ ಗಂಧಾ ಅಷ್ಟಗಂಧಾ ಸಿರಿಯಗಂಧಾ |
ಛೆಂದದಿಂದ ಏರ್‍ಯಾವೇಳಯ್ಯಾ | ಸಿದ್ಧ ರಾಮಾ |
ಛೆಂದದಿಂದ ಏರ್‍ಯಾವೇಳೆಯ್ಯಾ ||೫||
ಜಾಜಮಲ್ಲಿಗಿ ಜೂಜಮಲ್ಲಿಗಿ ಅರಳಮಲ್ಲಿಗಿ ಶಾವಂತಿಗ್ಹೂವಾ |
ನಿಮ್ಮ ಪೂಜಿಗಿ ಬಂದಾವೇಳಯ್ಯಾ | ಸಿದ್ಧರಾಮಾ |
ನಿಮಗ ಪೂಜಿ ಮಾಡ್ಯಾರೇಳಯ್ಯಾ ||೬||
ಅಚ್ಚದಚ್ಚ ಬೆಲ್ಲದಚ್ಚಾ ಮ್ಯಾಗ ಎಳ್ಳ ಚಿಗಳಿನೆಚ್ಚಾ |
ನಿಮಗ ನೇವುದೀ ಬಂದಾವೇಳಯ್ಯಾ | ಸಿದ್ಧರಾಮಾ |
ನಿಮಗ ನೇವುದೀ ತೋರ್‍ಯಾರೇಳಯ್ಯಾ ||೭||
ಬಾಜಿ ಬಾಜಿ ಬಾಜಿಯಂತರಿ ಬಾಳಿ ಬನದಾಗ್ ಹೆಲಗಿ ಖೊಂಬಾ |
ಭೋರಗೆಜ್ಜಿ ಗಿಲ್ಲಂದಾವೇಳಯ್ಯಾ | ಸಿದ್ಧರಾಮಾ |
ಭೋರಗೆಜ್ಜಿ ಗಿಲ್ಲಂದಾನೇಳಯ್ಯಾ ||೮||
ಗಂಗಿಯೊಳಗ ಸ್ನಾನ ಮಾಡಿ ಶಿವನ ಸಿಕರ ಸುತ್ತಿಬಂದು |
ಹರದ್ಯೇರು ಫಲವ ಬೇಡ್ಯಾರೇಳಯ್ಯಾ | ಸಿದ್ಧರಾಮಾ |
ಹೆರದ್ಯೇರು ಫಲವ ಬೇಡ್ಯಾರೇಳಯ್ಯಾ ||೯||
ಸಂಕರಾತರಿ ಭೋಗಿ ದಿನಾ ಮಲ್ಲಿನಾಧನ ಗುಡಿಯ ಒಳಗ |
ನಾಚನಾದವ ಛೆಂದದಿಂದ | ಸಿದ್ಧರಾಮಯ್ಯ |
ನಾಚನಾದವ ಛೆಂದಛೆಂದ ಸಿದ್ಧರಾಮಯ್ಯ ||೧೦||
ಸಂಕರಾತರಿ ಸಮತಿ ದಿನಾ ನಂದಿಕೋಲಾ ಮೆರೆವ ದಿಽನಾ |
ಟಿಂಗಕೈ ಸೂರ್‍ಯಾದವೇಳಯ್ಯಾ | ಸಿದ್ಧರಾಮಾ |
ಖಾರೀಕಕೈ ಸೂರ್‍ಯಾದವೇಳೆಯ್ಯಾ ||೧೧||
ಸಂಕರಾತರಿ ಕರಿಯ ದಿಽನಾ ಮಿತ್ರೆರೆಲ್ಲಾ ಮಡಿಗಳುಟ್ಟು |
ಮುತ್ತಿನಾರುತಿ ಎತ್ತ್ಯಾರೇಳಯ್ಯಾ | ಸಿದ್ಧರಾಮಾ |
ಮುತ್ತಿನಾರುತಿ ಎತ್ತ್ಯಾರೇಳಯ್ಯಾ ||೧೨||
ಸಿಂಗರಾದ ಸೊಲ್ಲಪೂರಽ ಭಂಗರಾದ ಸಿದ್ಧರಾಮಾ |
ಸಿಕರ ಕಟ್ಟ್ಯಾರು ರೈತರೆಲ್ಲಾರು | ಸಿದ್ಧರಾಮಾ |
ಸಿಕರ ಕಟ್ಟ್ಯಾರು ರೈತರೆಲ್ಲಾರು ||೧೩||
ಕಮರ ತಽಳಿ ರೇವಣಸಿದ್ಧಾ ಗಂಗಿಯೊಳಗ ಸಿದ್ಧರಾಮಾ |
ನಡುವ ಕುಂತಾರ ಮಲ್ಲಿಕಾರ್ಜುಽನ | ಸಿದ್ಧರಾಮಾ |
ಊರಾಗ್ಹಾರ ಮಲ್ಲಿಕಾರ್ಜುಽನ ||೧೪||
*****
ಮೊದಲನೆಯ ನುಡಿಯಲ್ಲಿ ಭಕ್ತಳು ಬೆಳಗಿನ ಕುರುಹುಗಳನ್ನು ಕಾಣುತ್ತಾಳೆ. ಎರಡನೆಯ ಮತ್ತು ಮೂರನೆಯ ನುಡಿಗಳಲ್ಲಿ ಅವಳು ಪೂಜೆಗಾಗಿ ಅತ್ತಿಯ ಹಣ್ಣುಗಳನ್ನೂ ಆಲದ ಎಲೆಗಳನ್ನೂ ದೊರಕಿಸುವುದಕ್ಕೆ ತಾನು ಪಟ್ಟ ಶ್ರಮವನ್ನು ಬಣ್ಣಿ ಸಿರುವಳಲ್ಲದೆ ದೇವರ ಅಲಂಕಾರಗಳನ್ನೂ ಸೂಚಿಸಿದ್ದಾಳೆ. ನಾಲ್ಕನೆಯ ನುಡಿಯಲ್ಲಿ ವಿಧವಿಧದ ಪೂಜೆ, ಐದನೆಯದರಲ್ಲಿ ಗಂಧದ ಶೃಂಗಾರ ಆರನೆಯದರಲ್ಲಿ ಹೂವಿನ ಶೃಂಗಾರ, ಏಳನೆಯದರಲ್ಲಿ ಕೈನೇದ್ಯ ಇವುಗಳ ವರ್ಣನೆಯಿದೆ. ಎಂಟನೆಯದರಲ್ಲಿ ವಾದ್ಯಘೋಷ, ಒಂಬತ್ತನೆಯದರಲ್ಲಿ ಭಕ್ತೆಯೆರ ಗಡಣ ಮುಂತಾದ ವಿಷಯಗಳಿವೆ. ಮುಂದಿನ ಮೂರು ನುಡಿಗಳಲ್ಲಿ ಸೊಲ್ಲಾಪುರ ಜಾತ್ರೆಯ ಕಾಲದ ಮೂರು ದಿನಗಳ ವಿವಿಧ ಉತ್ಸವಗಳ ವರ್ಣನೆಯಿದೆ. ಕೊನೆಯ ಎರಡು ನುಡಿಗಳಲ್ಲಿ ಸಿದ್ಧರಾಮೇಶ್ವರನ ಹಾಗೂ ಅವನ ಅರಾಧ್ಯದೈವತೆಗಳ ಬೇರೆ ಬೇರೆ ಗುಡಿಗಳ ಉಲ್ಲೇಖವಿದೆ.
ಛಂದಸ್ಸು:- ಮೂರು ಮೂರು ಮಾತ್ರಿಯ ಗಣಗಳಿವೆ. ಆದರೆ ಪ್ರತಿಯೊಂದು ಭಂಡ ಸಮಸ್ಥಾನದ ಗಣಗಳನ್ನು ನಾಲ್ಕು ಮಾತ್ರೆಗಳಾಗಿ ಉಚ್ಚರಿಸುವಂತೆ ತೋರುತ್ತದೆ.
ಶಬ್ದ ಪ್ರಯೋಗಗಳು:- ಹೆಡಿಯಂಗ=ಹೆಡೆಯಂತೆ. ಆಡ್ಯಾವ-ಆಡಿದವು. ವಸ್ತ=ಅಭರಣ ಆಲಪರದು=ಆತುರಪಟ್ಟು. ಕಟ್ಟ್ಯಾರ=ಕಟ್ಟಿಹರು. ಏರ್‍ಯಾವ=ಏರಿಹವು. ನೇವುದಿ=ನೈವೇದ್ಯ. ಚಿಗಳಿ=ಎಳ್ಳು ಬೆಲ್ಲದ ಮುದ್ದೆ. ಬಾಜಿ=ವಾದ್ಯ ಹರದ್ಯಾರು=ನಾರಿಯರು. ಆದರೆ ಹರದಿ ಎಂಬ ಶಬ್ದಕ್ಕೆ ವಾಸ್ತವಿಕವಾಗಿ ವ್ಯಾಪಾರಗಿತ್ತಿ ಎಂದು ಅರ್ಥವಾಗುತ್ತದೆ. ನಾವು ಈ ಶಬ್ದಕ್ಕೆ ಸುಂದರಿ ಇಲ್ಲವೆ ಮನ್ನಣೆಯವಳು ಎಂದು ಅರ್‍ಥಮಾಡಿಕೊಳ್ಳ ಬಹುದು. ಸಮತಿ=ಪುರುಣ ಹೇಳುವ ಸಮಿತಿ. ಸಂಕರಾತರಿ=ಮಕರ ಸಂಕ್ರಾಂತಿ. ಭೋಗಿ=ಸಂಕ್ರಾಂತಿಯ ಮುನ್ನಾದಿನ. ಕರಿ=ಸಂಕ್ರಾಂತಿಯ ಮರುದಿನ. ನಾಚ=ನೃತ್ಯ. ಟೆಂಗ=ತೆಂಗು ಖಾರೀಕ=ಉತ್ತತ್ತಿ. ಕಮರತಳಿ= ಸೊಲ್ಲಾಪುರದ ಒಂದು ಕೆರೆ. ಗಂಗಿ=ಸಿದ್ದರಾಮೇಶ್ವರನ ಗುಡಿಯ ಸುತ್ತು ಮುತ್ತಲಿನ ಕೊಳ.