ಅಯ್ಯಾ
ನೀನೆನ್ನ ಮೊರೆಯನಾಲಿಸಿದಡಾಲಿಸು
ಆಲಿಸದಿರ್ದಡೆ ಮಾಣು
ಅಯ್ಯಾ
ನೀನೆನ್ನ ದುಃಖವ ನೋಡಿದಡೆ ನೋಡು
ನೋಡದಿರ್ದಡೆ ಮಾಣು
ನಿನಗಿದು ವಿಧಿಯೆ
ನೀನೊಲ್ಲದೊಡೆ ಆನೊಲಿಸುವ ಪರಿಯೆಂತಯ್ಯಾ
[ಆಲಿಸದಿರ್ದಡೆ ಕೇಳದಿದ್ದರೆ ಮಾಣು-ಬಿಡು,]
ಅಕ್ಕಮಹಾದೇವಿಯ ವಚನ. ಈ ವಚನದಲ್ಲಿ ‘ಎನಗಿದು ವಿಧಿಯೇ’ ಎಂದೇನಾದರೂ ಇದ್ದಿದ್ದರೆ ಅರ್ಥದ ತೊಡಕು ಏನೂ ಉಂಟಾಗುತ್ತಿರಲಿಲ್ಲ. ಅಥವಾ ನಾನು ನೋಡಿದ ಪುಸ್ತಕದಲ್ಲಿ ಅಚ್ಚಿನ ದೋಷವಿದೆಯೋ ಗೊತ್ತಿಲ್ಲ. ಆದರೆ ಹೀಗಿರುವುದರಿಂದ ಮಾತ್ರ ಈ ವಚನ ಹಲವು ಪ್ರಶ್ನೆಗಳನ್ನು ಎತ್ತುವಂತೆ ತೋರುತ್ತದೆ. ನನ್ನ ಮೊರೆಯನ್ನು ಕೇಳಬೇಕೆನಿಸಿದರೆ ಕೇಳು, ಇಲ್ಲದಿದ್ದರೆ ಬಿಡು; ನೀನು ನನ್ನನ್ನು ನೋಡಬೇಕೆನಿಸಿದರೆ ನೋಡು, ಇಲ್ಲದಿದ್ದರೆ ಬಿಡು. ಹೀಗಿರುವುದು ನಿನ್ನ ವಿಧಿಯೋ? ನೀನು ನನ್ನ ಒಲಿಯದಿದ್ದರೆ ನಾನು ನಿನ್ನನ್ನು ಒಲಿಸುವ ಪರಿ ಹೇಗೆ ಎಂದು ಅಕ್ಕ ಕೇಳುತ್ತಾಳೆ.
ದೇವರು ನಿರ್ಗುಣ ಅನ್ನುತ್ತಾರಲ್ಲವೆ, ಹಾಗಿರಬೇಕಾದದ್ದು ಅವನ ಹಣೆಯಬರಹ. ದೇವರು ಯಾರನ್ನೂ ದ್ವೇಷಿಸಲೂ ಆರ, ಪ್ರೀತಿಸಲೂ ಆರ. ಹೀಗಿರುವುದು ಅವನ ವಿಧಿಯೇ ಆದರೆ ತಾನು ದೇವರನ್ನು ಎಷ್ಟು ಪ್ರೀತಿಸಿದರೆ ಏನು ಬಂದ ಹಾಗಾಯಿತು? ಅವನಲ್ಲಿ ನನ್ನ ಬಗ್ಗೆ ಪ್ರೀತಿ ಹುಟ್ಟದಿದ್ದರೆ ಏನು ತಾನೇ ಮಾಡಬಲ್ಲೆ ಎಂಬ ದಿಕ್ಕುಗಾಣದ ಕಳವಳ ಈ ವಚನದಲ್ಲಿರುವಂತಿದೆ.
ಇದೇ ಸ್ವರೂಪದ ಇನ್ನೊಂದು ದೀರ್ಘವಾದ ವಚನವೂ ಇದೆ. ಅದರಲ್ಲಿ ನೀನು ಏನು ಮಾಡಿದರೂ ನಾನು ಮಾತ್ರ ನಿನ್ನನ್ನು ಪ್ರೀತಿಸದೆ ಇರಲಾರೆ ಅನ್ನುವ ನಿಲುವು ಕಾಣುತ್ತದೆ. ಮನೋಭಾವಗಳ ಸೂಕ್ಷ್ಮವನ್ನು ಅಕ್ಕನ ಹಾಗೆ ಮಾತಿನಲ್ಲಿ ಹಿಡಿದಿಟ್ಟವರು ಕಡಮೆ.
*****