ಎಲ್ಲಿದೆಲ್ಲಿದೆ ತಣಿವು ? ಏತರಲ್ಲಿದೆ ತಣಿವು ?
ಎಲ್ಲಿಯೆಲ್ಲಿಯು ಕಾಣಲೊಲ್ಲದಾ ತಣಿವು!
ಕುಸುರುಕುಸುರಿನ ಚಿನ್ನ -ರನ್ನ ದೊಡವೆಗಳಿಟ್ಟು
ಹೊಸ ಮಿರುಗಿನಾ ಸೀರೆ ಬಣ್ಣಗುಪ್ಪಸ ತೊಟ್ಟು
ಸಾಕುಸಾಕಿನ್ನೆಂಬ ತಣಿವ ಪಡೆಯುವರು,
ಆ ಕೆಳದಿಯರು ನಕ್ಕು ನಲಿದಾಡುತಿಹರು.
ಇದು ಏನು? ನನ್ನದೀ ಎದೆಯಾಟವಚ್ಚರಿಯು!
ಒಡವೆಯುಡುಗೆಯನೊಲಿದು ಪಡೆಯುವೆನು, ಆದರೆಯು
ಒಡವೆ ಬಗೆದುಗುಡವನು ದೂಡಲಿಲ್ಲ!
ಉಡುಗೆ ತಣಿವನು ನಸುವು ನೀಡಲಿಲ್ಲ!
ಸರಿವರಯದವರೆಲ್ಲ ತೆರತೆರದ-ಹುರುಳಿರುವ-
ಅರಳುಗಳ ನುಡಿಮುಡಿದು ಹರುಷದಲಿ ಹಿಗ್ಗುವರು.
ಹಾರಯಿಸಿ ಹಾರಯಿಸಿ ಹೂಮುಡಿಯೆ ನಾನು,
ತೀರಲಿಲ್ಲವತೃಪ್ತಿ, ಹೇರಿತದು ಇನ್ನೂ!
ಕೊಳಲೂದಿ ವೀಣೆ ತಂಬೂರಿಗಳ ಬಾಜಿಸುತ
ಗೆಳತಿಯರು ಸುಲಭದಲಿ ಗಳಿಸುವರು ತೃಪ್ತಿಯನು;
ಕೊಳಲುಲಿಯು ಬಗೆದುಗುಡ ದೊಡಲಿಲ್ಲ!
ವೀಣೆ ತಣಿವನು ನಸುವು ನೀಡಲಿಲ್ಲ!
ಅನುಕೂಲದೈವರಾ ವನಿತೆಯರು, ನಾ ದೈವ-
ದನುನಯವ ಕಳೆದುಕೊಂಡವಳು; ದಿಟವೇ ದೇವ?
ಅಲ್ಲವಿಂತಿದು! ಅವರದದೆ ಸುಖದ ಕೊನೆಯು;
ಎಲ್ಲಿದೆಯೊ ದೂರ ನನ್ನಾ ಸುಖದ ಮನೆಯು..!
ಆ ಸುಖದ ಮನೆಯನೊಂದಿಸುವ ಒಡವೆಯ ಬಯಸಿ
ಆಶೆ-ಸೊನ್ನರತಿ ಬಗೆಯೊಳಗೆ ಬೆಂಕೆಯನಿರಿಸಿ
ಊದಿ ಉರಿಮಾಡಿ ಏನನೋ ಕಾಸುತಿಹಳು,
ಏತರಿಂದಲೊ ಯಾವುದನೊ ಹಣಿಯುತಿಹಳು.
* * * *
ಮನವ ಮನೆಮಾಡಿರುವ ದುಗುಡವನು ತೆಗೆದು
ತಣಿವನೀವಾ ಒಡವೆ ದೊರೆವುದೆನಗೆಂದು?
*****