ಕತ್ತಲೆಯಲ್ಲಿ ಕತ್ತಲೆ ಆವರಿಸಿದ ರಾತ್ರಿ
ನಕ್ಷತ್ರಗಳು ನೆತ್ತಿಯ ಮೇಲೆ ಕುಣಿದಾಡುತ್ತಿವೆ
ವಾಸನೆ ಹೊತ್ತ ತಲೆದಿಂಬ ಅವರ ಸುಖನಿದ್ರೆ
ಆವರಿಸಿದೆ ಎಣ್ಣೆಯ ಕಮಟು ವಾಸನೆಯಲಿ.
ದೂರದಲ್ಲಿ ಎಲ್ಲೋ ನಾಯಿ ಬೆಚ್ಚಿ ಬೊಗಳಿದೆ
ಗೂರ್‍ಖಾನ ಸೀಟಿ ಅರೆಮಂಪರಿನಲಿ ಕೇಳಿಸಿದೆ.
ಪುಟ್ಟ ಚೈನು ಕಳಚಿದ ಸೈಕಲ್ಲಿನ ರಿಪೇರಿಯ
ಚಿಂತೆಯ ಕನಸುಗಳು ನಾಲ್ಕೂ ದಿಕ್ಕುಗಳ ಬಿಕ್ಕುಗಳು
ಜಾವದ ನರಳುವಿಕೆಯಲ್ಲಿ ಗಿಡದ ಹೂಗಳು
ಅರಳಿವೆ ಬೆಳಕಿಗೆ ತಮ್ಮ ಅರ್‍ಪಿಸಲು ಸಜ್ಜಾಗಿವೆ.
ಸುತ್ತಿದ ಚಾಪೆಯ ಸಂದಿಯಿಂದ ಇಲಿ ಹಾರಿ
ಬಚ್ಚಲಗೂಡು ಸೇರಿವೆ ಅವರಿವರ ಪಾದಗಳು
ಮಗು ಹೊಯ್ದ ಉಚ್ಚೆ ಜೋಳಿಗೆ ತೊಯ್ದಿದೆ
ಎದೆ ತುಂಬಿದ ಹಾಲು ಬಿಗಿದು ಅವಳು ಮುಲುಕಾಡಿದ್ದಾಳೆ
ರಾತ್ರಿಯ ಎಲ್ಲಾ ಕತ್ತಲೆ ಕನವರಿಕೆಗಳು ಮತ್ತೆ
ಹೊಸದಾಗಿ ಸೂರ್‍ಯನ ಕಿರಣದ ದಾರಿಯಲಿ
ಪಾದಗಳ ಊರುತ್ತ ನಡೆದಿವೆ
ಹೀಗೊಂದು ಕವಿತೆ ಕನ್ನಡಿ ಮುಂದೆ ನಿಂತು
ಅಲಂಕರಿಸಿಕೊಂಡಿದೆ.
*****