ಬೆದೆ ಹತ್ತಿದ ಎದೆ ಹಾಡಿದಾಗ
ಸದೆ ಬಡಿಯುವ ಸಿಂಹಾಸನವೇ
ಸಾವ ಸಂಭ್ರಮದಲ್ಲಿ ನೋವು
ನಿವಾರಿಸುವ ಜೋಳವಾಳಿಯೇ.
ಕಾಲ ಚಕ್ರ ಉರುಳುತ್ತಲೇ ಅರಿವು ಅರಳುತ್ತ
ನಾಲಗೆ ನಿಧಾನವಾಗಿ ಮಿಸುಕಾಡುತ್ತಿದೆ
ಬಾಯೊಳಗೆ ಬ್ರಹ್ಮಾಂಡ, ಶತಶತಮಾನದ ವಿರಾಟ್
ದರ್‍ಶನ ವಿರಾಟಪರ್‍ವದ ಅಜ್ಞಾತ ಅಳಿಯುತ್ತಿದೆ.
ನಂಬಿಕೆ ನಿಷ್ಠೆಯ ಜಡಕಾಡು
ಋಣದ ಒಣಹವೆಯಲ್ಲಿ ಹದ್ದು-
ಬಸ್ತಾಗಿ ಹಸ್ತಿನಾವತಿಯ ಹರಕೆ ಹೊತ್ತು
ಅಲೆಮಾರಿಯಾದದ್ದು ಹನ್ನೆರಡಕ್ಕೇ ಸಾಕು;
ಅಜ್ಞಾತವಾಸದ ಹುತ್ತ ವಾಲ್ಮೀಕಿಯಾಗಬೇಕು.
ಮತ್ತದೇ ರಾಮಾಯಣ!
ಅಲೆಮಾರಿ ಅರಿವಿಗೆ ಹದಿನಾಲ್ಕರ ಹರೆಯ!
ಹೆಪ್ಪುಗಟ್ಟುತ್ತ ಬಂದ ಗಡಿಯಾರ
ಹನ್ನೆರಡು ಹೊಡೆದಾಗ ಕಾಲ ಕಡೆದ ಮೊಸರಲ್ಲಿ
ಹೊರಬಂದ ಬಸವಾದಿ ಅಸಂಖ್ಯಾತ ಅರಿವು-
ಅಸ್ಪೃಶ್ಯರ ಹಟ್ಟಿಯಿಂದ
ಮಹಿಳೆಯ ಮುಟ್ಟಿನಿಂದ
ದೋಣಿಯ ಹುಟ್ಟಿನಿಂದ
ಕಟ್ಟೊಡೆದು ಬಂದ ನಿಟ್ಟುಸಿರು
ನಲಿವಾಯಿತು ಅದು ನಿಲುವಾಯಿತು.
ಹನ್ನೆರಡಕ್ಕೆ ಎರಡು ಸೇರಿ ಹದಿನಾಲ್ಕು ತುಂಬಿದಾಗ
ಆಸ್ಥಾನ ದೂರ ಅಲೆಮಾರಿ ಅರಿವು
ಹರಿದಾಸ ತೇರಾಯಿತು ಊರೆಲ್ಲ ಹರಿದಾಡಿತು.
ಮಹಾಭಾರತದ ಹನ್ನೆರಡಾಗಲಿ
ರಾಮಾಯಣದ ಹದಿನಾಲ್ಕಾಗಲಿ
ಅಲೆಮಾರಿ ಅನುಭವಕ್ಕೆ ಅರಮನೆಯಿಲ್ಲ
ಅರಿವಿಗೆ ಆಸ್ಥಾನವಿಲ್ಲ.
ಪುರಾಣದ ಸ್ಥಿತಿಯಾಗಿ ಇತಿಹಾಸದ ಗತಿಯಾಗಿ
ಗತಿ ಸ್ಥಿತಿಯ ಸ್ಥಿತ್ಯಂತರದಲ್ಲೇ
ಮುಷ್ಟಿಗೆ ಸಿಕ್ಕದ ಸೃಷ್ಟಿಯಾಗಿ
ವಚನವಾಗಿ ದಾಸರ ಪದವಾಗಿ
ಗುಡಿಸಲ ಗೋಳಾಗಿ ನೇಗಿಲ ನೋವಾಗಿ
ಪದವಿಟ್ಟಳುಪದೊಂದಗ್ಗಳಿಕೆಯಾಗ ಹೊರಟರೂ
ಮಸಿ ಅಳಿಸುವ ರಬ್ಬರು ಉತ್ಪಾದನೆಯಾಗುತ್ತದೆ
ಮತ್ತೆ ಮತ್ತೆ ಅಕ್ಷರ ಆಕಾರ ತಳೆಯುತ್ತದೆ.
ಇದು ಇಂದು ನೆನ್ನೆಯದಲ್ಲ
ಕಾಲ ಸಾಯುವುದಿಲ್ಲ
ಹದಿನಾಲ್ಕಕ್ಕೆ ಹಿಂದೆ ಹನ್ನೆರಡು
ಹನ್ನೆರಡಕ್ಕೆ ಹಿಂದೆ ಹತ್ತು ಇರುತ್ತದೆ
ಚರಿತ್ರೆಯ ಸರಪಳಿ ಬೆಳೆಯುತ್ತದೆ.
ಹತ್ತರ ಪಂಪ ಪೊರೆ ಬಿಡುತ್ತ ಬಂದದ್ದು
ಒತ್ತೆಯಿಟ್ಟ ಉಸಿರು ಉತ್ತರ ಹುಡುಕ ತೊಡಗಿದ್ದು
ಸುಳಿವು ಸಿಕ್ಕಿದ ಸಿಂಹಾಸನ ಗಡಗಡ ನಡುಗಿದ್ದು
ಪಂಡಿತರಿಗೆ ಪಡಿತರ ಹಂಚಿ ಪಟ್ಟಾಗಿ ಕೂತದ್ದು
ಪಟ್ಟದ ಕೆಳಗೆ ಚಟ್ಟದ ಚರಿತ್ರೆ
ನಿಲ್ಲದೆ ನಿರ್‍ಮಾಣವಾಗುತ್ತ ಬಂದದ್ದು-
ಎಲ್ಲಾ ಗೊತ್ತಾಗುತ್ತಿದೆ ಸಿಂಹಾಸನವೇ
ನಿನಗೆ ಹೊತ್ತಾಗುತ್ತಿದೆ ಜೋಳವಾಳಿಯೇ
ಈಗ-
ನನ್ನ ಕಿವಿ ನನ್ನದು
ನನ್ನ ನುಡಿ ನನ್ನದು
ನನ್ನ ಚರ್‍ಮ ನನ್ನದು
ನನ್ನ ಮೂಗು ನನ್ನದು
ನನ್ನ ಕಣ್ಣು ನನ್ನದು
ಕಡೆಗೆ-
ಈ ಮಣ್ಣು ನನ್ನದು.
ಯಾಕೆಂದರೆ-
ನೋಟ ನುಡಿಗಳ ಮೇಲೆ
ಸ್ಪರ್‍ಶ ಸಂವೇದನೆಯ ಮೇಲೆ
ಶಬ್ದ ಸ್ಪಂದನದ ಮೇಲೆ
ವಾಸನೆ ವಿವೇಚನೆಯ ಮೇಲೆ
ಗುಲಾಮ ಗೀರುಗಳು ಈಗ ಮಾಯುತ್ತಿವೆ
ವರ್‍ತಮಾನದ ಅರ್‍ಥ ಹುಡುಕುತ್ತಿವೆ.
*****