ಈ ಇಂಥ ಕಂದ ಹಿಂದೆ ಇರಲಿಲ್ಲ
ಮುಂದಿರುವುದಿಲ್ಲ ಎಂದು
ಹೆಸರಿಟ್ಟೆವು ಅಪೂರ್‍ವ ಎಂದು
ನಮ್ಮೊಲುಮೆಯಲ್ಲಿ ಸುತ್ತಿಟ್ಟೆವು
ನಮ್ಮೊಲುಮೆಯಲ್ಲಿ ಉಣಿಸಿದೆವು ತಿನಿಸಿದೆವು
ಹಾಲೂಡಿಸಿದೆವು
ತೊಟ್ಟಿಲಲಿರಿಸಿ ಹಾಡಿದೆವು ತೂಗಿದೆವು
ಅವಳು ನಿದ್ರಿಸಿಯೆ ನಾವು ನಿದ್ರಿಸಿದೆವು
ಅವಳು ನಕ್ಕರೆ ನಮಗದುವೆ ಸಂತೋಷ
ಅವಳು ದುಃಖಿಸಿದರೆ ನಮಗದುವೆ ದುಃಖ
ತಿಳಿಯೊ ದೇವರೆ
ನಮ್ಮ ಶಿಕ್ಷಿಸುವುದಕೆ ನೀನವಳನೇಕೆ ನೋಯಿಸುವಿ
ಅದು ಮಂತ್ರ ಮಾಟದವರ ತಂತ್ರವಲ್ಲವೇ
ರೋಗ ಕಳಿಸುವುದಿದ್ದರೆ ನಮಗೆ ಕಳಿಸು
ದುರಿತ ಕಳಿಸುವುದಿದ್ದರೆ ನಮಗೆ ಕಳಿಸು
ಈಗಿನ್ನೂ ಹಸುಳೆ ನಮ್ಮ ಮಗಳ ಅಂತೆಯೆ ಬಿಡು
ಆಡುತ್ತ ಹಾಡುತ್ತ ಬೆಳೆದುಕೊಂಡಿರಲಿ
ಓ ದಯಾಮಯನೆ ಓ ಕೃಪಾಕರನೆ
ನಿನ್ನ ಕರುಣೆಯಲವಳಿಗೆ ಹಕ್ಕಿಲ್ಲವೇ?
*****