ಯೂರೋಪ್ ಖಂಡದ ಫೂಡಲ್ ಸಂಸ್ಥೆಯ ಹಿಡುವಳಿ ಸಿಸ್ತು ಹೇಗೆ ಹುಟ್ಟಿತೋ ನಮ್ಮ ಭರತಖಂಡದಲ್ಲಿಯೂ ಹಾಗೆಯೇ ಹುಟ್ಟಿದಂತೆ ಇದೆ. ಫ್ರಾನ್ಸ್ ದೇಶ ದೊಳು ೫ ನೇ ಶತಮಾನದಿಂದ ಎಂಟನೇ ಶತಮಾನದವರೆಗೆ ಆಳಿದ ದೊರೆಗಳ ಕಾಲದಲ್ಲಿ ಆಯಾ ದೊರೆಗಳು ತಮ್ಮ ಬಂಧುವರ್ಗದ ಜನರಿಗೂ, ಕೆಲವು ಮುಖಂಡರಿಗೂ ದೊಡ್ಡದಾದ ಭೂಪ್ರದೇಶಗಳನ್ನು ಮಾನ್ಯವಾಗಿ ಕೊಡುತ್ತಾ ಬಂದರು. ಹಾಗೆ ತೆಗೆದುಕೊಂಡವರು ದೊರೆಯ ವಿಷಯದಲ್ಲಿ ಭಯಭಕ್ತಿಯಿಂದ ನಡೆದುಕೊಳ್ಳುತ್ತಿರಬೇಕೆಂಬುದು ವಿಧಿಯಾಗಿತ್ತು. ಮೊದಲು ಮೊದಲು ಒಂದೊಂದು ತಲೆಯ ವರೆಗೆ ಮಾತ್ರ ಕೊಡುತ್ತಾ ಇದ್ದ ಈ ಇನಾಮು ದಿನಕ್ರಮೇಣ ಸಂತತಿ ಪರಂಪರೆಯಾಗಿ ಅನುಭವಿಸುವ ಹಾಗೆ ಆಗುತ್ತಾ ಬಂತು. ದೊರೆಗೆ ತನ್ನ ಪ್ರೀತಿಪಾತ್ರರ ಮೇಲೆ ಅಭಿಮಾನ ಹೆಚ್ಚಿದಹಾಗೆಲ್ಲಾ ಇನಾಂದಾರರು ವಂಶಪಾರಂಪರವಾಗಿ ಅಂಥಾ ಇನಾಮನ್ನು ಅನುಭವಿಸುವ ಹಕ್ಕು ದೊರೆಯುತ್ತಾ ಬಂತು. ಅದೂ ಅಲ್ಲದೆ ದೊರೆಯ ದರ್ಪ ಕಡಮೆಯಾಗುತಾ ಬಂದಹಾಗೆ ಈಇನಾಂದಾರರು ಅರಸನನ್ನು ಧಿಕ್ಕರಿಸಿ, ಸ್ವತಂತ್ರಾಗುತಾ, ವಂಶಪಾರಂಪರವಾದ ಹಕ್ಕನ್ನು ಸಂಪಾದಿಸಿಕೊಳ್ಳುತ್ತಾ ಬಂದರು.
ಬೆನಿಫಿಸಿಯರಿ, ಖಾಯಂಗುತ್ತಾ
ಇದೂ ಅಲ್ಲದೆ ಹೀಗೆ ಸ್ವತಂತ್ರರಾದ ಇನಾಂದಾರರೂ ಕೂಡ ಕೆಲವರು ಶತ್ರುಗಳ ಬಾಧೆಯನ್ನು ತಪ್ಪಿಸಿಕೊಳ್ಳುವುದಕ್ಕಾಗಿ ದಿನಕ್ರಮೇಣ ಒಬ್ಬ ಪ್ರಬಲವಾದ ದೊರಯನ್ನೋ ಚರ್ಚು ಎಂಬ ಗುಡಿ ಅಧಿಕಾರಗಳನ್ನೊ (ಈಗ್ಗೆ ಐನೂರು ಆರುನೂರು ವರ್ಷಗಳ ಹಿಂದೆ ಕ್ರಿ|| ಶಕೆ ಆದಿಭಾಗದಿಂದಲೂ ಕ್ರಿಸ್ತ ಗುಡಿಯ ಪಾದ್ರಿಗಳು ದೊರೆಗಳಂತೆ ವಿಶೇಷ ಪ್ರಬಲರಾಗಿದ್ದರು.) ಅನುಸರಿಸಿ ಕೊಂಡು ಅವರಿಗೆ ಅಧೀನರಾಗಿ ಕಂದಾಯ ಕೊಡುತಾ ಮತ್ತು ಇತರರ ಸೇವೆಯನ್ನು ಸಮಯ ಬಿದ್ದಾಗ ಅವರಿಗೋಸ್ಕರ ಮಾಡುತ್ತಾ ಇದ್ದರು. ಈ ಬಗೆ ಭೂಸಾಗುವಳಿ ಸಿಸ್ತಿಗೆ “ಬೆನಿಫಿಸಿಯರಿ” ಎಂದು ಹೆಸರು. ಇದರ ಅರ್ಥಕ್ಕೆ ಸಮೀಪವಾದ ಶಬ್ದವನ್ನು ನಾವು ಹುಡುಕಿ ನೋಡಿದರೆ “ಖಾಯಂಗುತ್ತಾ” ಎಂಬ ಶಬ್ದವನ್ನು ಭಾಷಾಂತರವಾಗಿ ಇಟ್ಟುಕೊಳಬಹುದು. ಈ ಖಾಯಂಗುತ್ತಾ ಏರ್ಪಾಡಿನಿಂದ ಜಮಿನ್‌ದಾರನಿಗೂ, ರೈತನಿಗೂ ಇರುವ ಸಂಬಂಧವೇ ಯುರೋಪಿನಲ್ಲಿಯೂ ಇದ್ದ ಹಾಗಾಯಿತು.
ಸಾಗುವಳಿ ವಿಷಯ
ಭೂಸಾಗುವಳಿ, ಅದರ ಆದಾಯ, ಇದನ್ನು ಕುರಿತು ಯೋಚಿಸಲಾಗಿ, ಭೂಮಿಯನ್ನು ಗೇಮೆಮಾಡುವುದು, ರಾಜಪಾಲನ್ನು ಕೊಟ್ಟು ಕುಳಪಾಲನ್ನು ಅನುಭವಿಸಿ ಕೊಳ್ಳುವುದು, ಎಷ್ಟೊ ಅಷ್ಟೆ. ಇದಕ್ಕಿಂತಲೂ ಹೆಚ್ಚಾದ ಸಂಬಂಧವು ಸ್ವಾಮಿಗೂ, ಕುಳಕ್ಕೂ ಇಲ್ಲವೇ ಇಲ್ಲವೆಂಬುವುದು ಕೆಲವರ ಮತವಾಗಿತ್ತು. ಇಷ್ಟು ಹೊರತು ರೈತನು ಯಜಮಾನನಿಗೆ ಮತ್ತೆ ಯಾವ ಭಾಗದಲ್ಲಿಯೂ ಅಧೀನನಲ್ಲವೆಂದು ಕೆಲವು ಪರವಾದಿಗಳು ವಾದಿಸಲು ಮಾರ್ಗವಿತ್ತು. ಈಗಲೂ ನಮ್ಮ ದೇಶದಲ್ಲಿ ಕೂಡ ಇನಾಂದಾರರಿಗೂ, ರೈತರಿಗೂ ಈ ವಿಧವಾದ ಚರ್ಚೆಯೂ, ತೀಯಾಟವೂ ಇದ್ದೇ ಇರುವುದು. ಇನಾಂ ಗ್ರಾಮಗಳಲ್ಲಿ ರೈತರಿಗೆ ಖಾಯಂ ಕಂದಾಯಕ್ಕೆ ಭೂಮಿಯನ್ನು ಕೊಡುತ್ತಾರೆ. ಅಂಥಾ ರೈತರು ಸರ್ವಮಾನ್ಯ ಅಥವಾ ಜೋಡಿದಾರರಿಗೋಸ್ಕರ ಇತರ ಚಿಲ್ಲರೆ ಕೆಲಸವನ್ನು ಮಾಡಿಕೊಡಬೇಕೆಂತಲೂ, ಎಲ್ಲಾ ಭಾಗದಲ್ಲಿಯೂ ಸಮಯ ಬಂದಾಗ ಆ ರೈತನು ಸರ್ವಮಾನ್ಯದಾರನ ಆಳಿನಂತೆ ಭಾವಿಸಿಕೊಂಡಿರಬೇಕೆಂತಲೂ, ಕೆಲವು ಗ್ರಾಮಗಳಲ್ಲಿ ಆಚರಣೆಯುಂಟು. ಆದರೆ ಕೆಲವು ರೈತರು ಸರ್‍ವಮಾನ್ಯದಾರನ ಮೇಲೆ ಕೈಮಾಡುತ್ತಾ, “ಭೂಮಿ ಕೊಟ್ಟದ್ದಕ್ಕೆ ಕಂದಾಯ ತೆಗೆದುಕೊಳ್ಳುತ್ತೀರಿ, ಉಳಿದ ಚಾಕರಿ ಮಾಡುವುದಕ್ಕೆ ನಾವು ಬದ್ಧರಲ್ಲ” ಎನ್ನುತಾ ಇದಾರಷ್ಟೆ. ಇದೇ ವಿಧವಾದ ರೈತರು ಪೂರ್ವಕಾಲದಲ್ಲಿಯೂ ಇದ್ದರು. ದೇಶಾಂತರಗಳಲ್ಲಿಯೂ ಇದ್ದರು. ಈ ಕಾರಣದಿಂದ ರೈತರೆಲ್ಲಾ ಆದ್ಯಂತವಾಗಿ ಇನಾಂದಾರರ ವಶವೇ ಆಗಿರಬೇಕೆಂದು ಯೂರೋ
ಖಂಡದಲ್ಲಿ ವ್ಯವಸ್ಥೆ ಮಾಡಿಕೊಂಡು, ಅದಕ್ಕಾಗಿ ಭೂಮಿಯಲ್ಲಿ ನಿರುಪಾಧಿಕವಾಗಿ ಸ್ವಾಮ್ಯವುಳ ಇನಾಂದಾರರಾದ ಯಜಮಾನರುಗಳು ಇನ್ನೊಂದು ಏರ್ಪಾಡನ್ನು ಮಾಡಿಕೊಂಡರು.
ಭೃತ್ಯನು ಪ್ರಮಾಣ ಮಾಡುವುದು
ಪ್ರತಿ ರೈತನೂ ಇನಾಂದಾರ ಅಥವಾ ಸ್ವಾಮಿಗೆ ಆಧ್ಯಂತ ಭೃತ್ಯ ಎಂದು ತೋರಿಸಲು, ಅಂಥಾ ರೈತನು ಬೋಳುತಲೆಯಲ್ಲಿ ಸೊಂಟಕ್ಕೆ ಏನೂ ಕಟ್ಟಿಕೊಳ್ಳದೆ, ಕತ್ತಿಯನ್ನು ಕಟ್ಟಿಕೊಳ್ಳದೆ ವೀರಮಂಡಿ ಹೂಡಿ ಕೂತು, ಸ್ವಾಮಿಯ ಕೈಯನ್ನು ಹಿಡಿದುಸ್ವಾಮಿಗೆ ತಾನು ಆದ್ಯಂತ
ಭೃತ್ಯನೆಂದು ಪ್ರಮಾಣಮಾಡಿಕೊಡಬೇಕು ಎಂದು ವಾಗ್ದಾನದ ಪದ್ಧತಿಯನ್ನು ಏರ್ಪಾಡು ಮಾಡಿದರು. ಈ ಏರ್ಪಾಡಿಗೆ ‘ಕಮೆಂಡೇಷನ್’ ಎಂದು ಹೆಸರು. ಇದಕ್ಕೆ ‘ವಶವರ್ತಿ’ ಎಂದು ಅರ್ಥ ಮಾಡಬಹುದು. ಹೀಗೆಂದರೆ ಆ ಆದ್ಯಂತ ಭೃತ್ಯನು ಸ್ವಾಮಿಯ ವಶವಾದನೆಂದು ಅರ್ಥ ಮಾಡಬಹುದು.
ಕಮೆಂಡೇಷನ್ ಏರ್ಪಾಡು.
ಈ ಪದ್ಧತಿಯು ದಿನಕ್ರಮೇಣ ವ್ಯತ್ಯಾಸ ಹೊಂದಿತು. ಈ ವಿಧವಾದ ಸ್ವಾಮಿಭೃತ್ಯರ ಸಂಬಂಧದಲ್ಲಿ ಭೂಸಂಬಂಧ ಹೋಯಿತು. ಬರೀ ಸ್ವಾಮಿಭೃತ್ಯ ಸಂಬಂಧ ಮಾತ್ರ ಉಳಿಯಿತು. ಆದರೆ ಭೃತ್ಯನು ಬೇರೆ ಭೂಮಿಯನ್ನು ಸಾಗುವಳಿ ಮಾಡಿಸುವ ವಿಚಾರದಲ್ಲಿ ನಿರ್ಬಂಧವೇನೂ ಇರಲಿಲ್ಲ. ಕೆಲವು ಸಂದರ್ಭದಲ್ಲಿ ಯುದ್ಧ ಪ್ರಸಕ್ತಿ ಬಿದ್ದಾಗ, ಸ್ವಾಮಿಗೆ ಉಪಜಮೀನ್ದಾರನು ಸೇನೆ ಸೇರಿಸಿಕೊಂಡು ಸೇವೆ ಮಾಡುವುದೂ ಕೂಡ ಉಂಟು. ಇದಕ್ಕೆ ಪ್ರತಿಯಾಗಿ ಸ್ವಾಮಿಯು ಭೃತ್ಯನನ್ನು ಎಲ್ಲಾ ಭಾಗದಲ್ಲಿಯೂ ಕಾಪಾಡಬೇಕಾದ್ದು ಒಂದು ವಿಧಿ ಯಾಗಿತ್ತು.
(೨) ರಾಜ್ಯ ಭಾರಕ್ರಮ.
ರಾಜಪದವಿ ಹೊಂದಿದ್ದು
ಇದುವರೆಗೆ ಭೂಸಂಬಂಧ ಸ್ವಾಮಿ ಭೃತ್ಯಸಂಬಂಧ ಇವುಗಳನ್ನು ಮಾತ್ರ ಹೇಳಿದಂತಾಯಿತು. ಹೀಗೆ ಭೂಮಿಯನ್ನು ವಿಸ್ತಾರವಾಗಿ ದೊರೆಯಿಂದ ಇನಾಂ ಪಡೆದುಕೊಂಡವರೆಲ್ಲಾ ಬಲಕಾಯಿಸಿ ಕೊಂಡು, ದೊರೆಯ ಅಧಿಕಾರವನ್ನು ಹೆಚ್ಚು ಕಡಮೆಯಾಗಿ ನಿರಾಕರಿಸುತ್ತಾ, ಆದಾಯವೂ, ಖರ್ಚೂ ಹೋಗುತ್ತಾ ಉಳಿಯುವ ಶೇಖರವಾದ ದ್ರವ್ಯವೂ ಹೆಚ್ಚಿದಹಾಗೆಲ್ಲಾ ಸ್ವತಂತ್ರಾಧಿಕಾರ ಮಾಡುವವರ ಡಂಭವನ್ನು ವಿಶೇಷವಾಗಿ ವಹಿಸಿ, ರಾಜಠೀವಿಯನ್ನು ಹೊಂದಿ ಬೇರೇ ಸೇನೆ, ಬೇರೇ ನಾಣ್ಯ, ಬೇರೆ ಕಾನೂನುಗಳು, ಸ್ವತಂತ್ರವಾಗಿ ಯುದ್ಧವನ್ನು ಮಾಡುವುದು, ಈ ಆಯ ಕಟ್ಟುಗಳನ್ನೆಲ್ಲಾ ಇಟ್ಟುಕೊಳ್ಳುತ್ತಾ ಬಂದರು. ಸಮಯ ತಪ್ಪಿದರೆ ದೊರೆಯನ್ನು ಎದುರಿಸುತ್ತಲೂ ಇದ್ದರು. ಇಂಥಾ ಚಿಕ್ಕ ಸಂಸ್ಥಾನದವರು ಡ್ಯೂಕು, ಮಾರ್ಕ್ವಿಸ್, ಕೌಂಟು ಎಂದು ಬಿರುದಿನ ಹೆಸರನ್ನು ಹೊಂದಿ ದರ್ಬಾರು ಮಾಡುತಿದ್ದರು. ದೇಶವನ್ನೂ, ಅಧಿಕಾರವನ್ನೂ ದೊರೆಯಿಂದ ಹೊಂದವುದು, ಪೂರ್ವದಿಂದ ತಮಗಿದ್ದ ಅಧಿಕಾರವನ್ನು ದೊರೆಯ ಪೋಷ್ಯವರ್ಗಕ್ಕೆ ಸೇರಿ ಕಾಪಾಡಿಕೊಳ್ಳುವುದು, ಈ ಎರಡು ವಿಧದಲ್ಲಿಯೂ ಈ ಫ್ಯೂಡಲ್ ಪ್ರಮುಖರು ವೃದ್ಧಿಯಾದರು. ಇಂಥಾ ಚಿಕ್ಕ ಪ್ರಮುಖರು ದೊರೆಗೆ ಅಧೀನ ರಾಜರಂತಾದರು. ಈ ಪ್ರತಿ ಅಧೀನರಾಜನಾದ ಜಮೀನ್ದಾರನೂ ಒಂದೊಂದು ನ್ಯಾಯಸ್ಥಾನವನ್ನು ಇಟ್ಟುಕೊಂಡಿದ್ದನು. ಇಂಥವರು ನಮ್ಮ ಸೀಮೆಯ ಪಾಳಯಗಾರ ರನ್ನು ಚನ್ನಾಗಿ ಹೋಲುತ್ತಾರೆ.
ಉಪಜಮೀನ್ದಾರರು
ದೊರೆಯ ಅಧೀನದಲ್ಲಿ ಜಮೀನ್ದಾರ ಹೇಗೆ ಇದ್ದನೋ ಹಾಗೆಯೇ ಜಮೀನ್ದಾರನ ಅಧೀನದಲ್ಲಿ ಉಪಜಮೀನ್ದಾರನೂ, ಉಪಜಮೀನ್ದಾರನ ಕೈಕೆಳಗೆ ರೈತನೂ ಇರುತಿದ್ದರು. ಜಮೀನ್ದಾರನು ಸ್ವತಂತ್ರವಾಗಿ ಬಂದು ನ್ಯಾಯ ಸ್ಥಾನವನ್ನು ಕಲ್ಪಿಸಿಕೊಂಡಿದ್ದನು. ಉಪಜಮೀನ್ದಾರರಿಗೆ ಪರಸ್ಪರ ವಿವಾದ ಹುಟ್ಟಿದರೂ, ಉಪಜಮೀನ್ದಾರರಿಗೂ ರೈತರಿಗೂ ಪರಸ್ಪರವಾಗಿ ಯಾವ ವಿವಾದ ಹುಟ್ಟಿದರೂ ಈ ನ್ಯಾಯಸ್ಥಾನದಲ್ಲಿ ವ್ಯವಸ್ಥೆಯಾಗ ಬೇಕಾಗಿತ್ತು. ಈ ನ್ಯಾಯಸ್ಥಾನದಲ್ಲಿ ಯಾದ ತೀರ್‍ಮಾನದ ಮೇಲೆ ದೊರೆಯ ಸಾರ್‍ಕಾರಿ ನ್ಯಾಯಸ್ಥಾನಕ್ಕೆ ಅಪೀಲು ಹೋಗುತಿತ್ತು. ವ್ಯಾಜ್ಯವನ್ನು ವ್ಯವಸ್ಥೆ ಮಾಡುವುದರಲ್ಲಿ ವಿಲಕ್ಷಣವಾದ ಒರಟು ಪದ್ದತಿಯನ್ನು ಅನುಸರಿಸುತಿದ್ದರು. ಫಿರ್‍ಯಾದಿ ಅಪರಾಧಿಗಳಿಬ್ಬರೂ ದೇವರ ಮೇಲೆ ಭಾರ ಹಾಕಿ, ಕತ್ತಿ ಹಿಡಿದು ಒಂಟಿ ವೀರರಾಗಿ ಇಬ್ಬರೇ ಹೊಡದಾಡುತಿದ್ದರು. ಈ ಮೂಲಕ ವ್ಯಾಜ್ಯ ಫೈಸಲಾಗಬೇಕಾಗಿತ್ತು. ಹಣ ಸಾಲ ಕೊಡುವುದು ತೆಗೆದುಕೊಳ್ಳುವುದು, ಈ ವಿಷಯದಲ್ಲಿ ವಿವಾದ ಹುಟ್ಟಿದರೆ, ಸೋತವನು ತನ್ನ ಹಕ್ಕನ್ನೂ, ವಾದವನ್ನೂ ಬಿಟ್ಟು ದಂಡವನ್ನು ಸಹಾ ತೆರಬೇಕಾಗಿತ್ತು. ಬದಲಿ ಇಟ್ಟು ವ್ಯಾಜ್ಯವನ್ನು ನಡೆಸಿದರೆ, ಆ ಬದಲಿಯವನು ಸೋತುಹೋದಲ್ಲಿ, ಅವನು ತನ್ನ ಕೈಯನ್ನು ಕತ್ತರಿಸಿಕೊಳ್ಳಬೇಕಾಗಿತ್ತು. ಅಪರಾಧ ಜರುಗಿದ ಮೊಕದ್ದಮೆಗಳಲ್ಲಿ ಅಪರಾಧಿಯು ತಪ್ಪನ್ನು ರುಜುವಾತು ಮಾಡಿಕೊಡೆಂದು ಫಿರ್‍ಯಾದಿಯನ್ನು ಅಥವಾ ನ್ಯಾಯಾಧಿಪತಿಗಳನ್ನು ಧೈರ್‍ಯವಾಗಿ ಪಂಥ ಕಟ್ಟಿಕೊಂಡು ಕೇಳಬಹುದು. ರುಜುವಾತು ಯಾವುದೂ ಇಲ್ಲದೆ ಎದುರು ಕಕ್ಷಿಯು ಸೋತುಹೋದರೆ ಅಪರಾಧಿಗೆ ಆಗಬೇಕಾಗಿದ್ದ ಶಿಕ್ಷೆಯನ್ನು ಫಿರ್‍ಯಾದಿಗೂ, ನ್ಯಾಯಾಧಿಪತಿಗಳಿಗೂ ವಿಧಿಸುತಿದ್ದರು.
ಜಮೀನ್ದಾರನ ಅಧಿಕಾರ
ಉಪಜಮೀನ್ದಾರರುಗಳಿಂದ ವರಿಗಳನ್ನು ವಸೂಲ್ಮಾಡುವುದು, ಸಾಧಾರಣವಾದ ನಿಬಂಧನೆಗಳನ್ನು ಏರ್ಪಡಿಸುವುದು, ತಂತಮ್ಮೊಳಗೆ ವಿವಾದವಿದ್ದರೆ ಅದನ್ನು ತಂತಮ್ಮೊಳಗೆ ಯುದ್ಧ ಮಾಡಿ ವ್ಯವಸ್ಥೆ ಮಾಡಿಕೊಳ್ಳುವುದು, ಒಂದೊಂದು ಪ್ರಾಂತದಲ್ಲಿ ಹೊಸ ನಾಣ್ಯಗಳನ್ನು ಟಿಂಕಸಾಲೆ ಇಟ್ಟು ಹಾಕಿಸುವುದು, ಇದೆಲ್ಲಾ ಜಮೀನ್ದಾರರ ಹಕ್ಕಿಗೆ ಸೇರಿತ್ತು.
ಉಪಜರ್ಮಾದಾರನ ಹಕ್ಕು
ಉಪಜಮೀನ್ದಾರರಿಗೇ ಅಲ್ಲದೆ ಇತರ ಹಿಡುವಳಿದಾರರಿಗೂ ಭೂಮಿಯನ್ನು ಸಾಗುವಳಿಗೆ ಕೊಡುತಿದ್ದರು. ಇಂಥಾ ಹಿಡುವಳಿದಾರರು ಕಂದಾಯವನ್ನು ಮಾತ್ರ ಕೊಡುವುದಕ್ಕೆ ಬದ್ದರೇ ಹೊರತು, ಇನ್ನು ಯಾವ ಅಡ್ಡವಿಡ್ಡೂರಗಳನ್ನೂ ಅವರು ತೆರಬೇಕಾದ ನಿಮಿತ್ತವಿರಲಿಲ್ಲ. ಇವರು ಮಾನ್ಯದ ಒಕ್ಕಲಾಗಿದ್ದರು.
ಸ್ವಾಮಿ ಭೃತ್ಯರ ಹಕ್ಕು
ಪಾಳಯಗಾರರ ವಿಚಾರವನ್ನು ಹೇಳುವುದರಲ್ಲಿ ಹೋಲಿಕೆಗಾಗಿ ಫ್ಯೂಡಲ್ ಸಂಸ್ಥೆಯನ್ನು ಇಷ್ಟರಮಟ್ಟಿಗೆ ವಿವರಿಸಿದ್ದೇ ಸಾಕಾಗಿದೆ. ಮುಂದೆ ಅದರ ವಿವರವನ್ನೆಲ್ಲಾ ಅರಿಕೆಮಾಡತಕ್ಕದ್ದು ಅನಾವಶ್ಯವಾಗಿ ತೋರುವುದು. ಆದರೆ ಭೂಸಂಬಂಧದಲ್ಲಿ ಒಂದೆರಡು ಬೇರೆ ಸಂಗತಿಗಳನ್ನು ಅರಿಕೆ ಮಾಡಿ ಅಲ್ಲಿಗೆ ಬಿಟ್ಟುಬಿಡುತ್ತೇನೆ. ಮಾನ್ಯದ ಹಿಡುವಳಿದಾರರ ತರುವಾಯ “ವಿಲೆನ್” ಎಂಬ ಒಂದು ವರ್ಗದವರಿದ್ದರು. ಇವರಿಗೂ, ಭೂಮಿಗೂ ಗಂಟಾಗಿತ್ತು. ಇವರು ತಂತಮ್ಮ ಹೊಲಗಳನ್ನು ಸಾಗುವಳಿ ಮಾಡಿ ಕೊಂಡು ಫಸಲನ್ನು ಅನುಭವಿಸುತ್ತಾ, ಜಮೀನ್ದಾರನ ಸೇವಾವೃತ್ತಿಯಲ್ಲಿರುತಿದ್ದರು. ಭೂಮಿಯನ್ನು ಸಾಗುವಳಿ ಮಾಡದೆ ಬಿಟ್ಟುಬಿಡುವುದಕ್ಕೆ ಅವರಿಗೆ ಹಕ್ಕಿಲ್ಲ, ಭೂಮಿಯನ್ನು ಅವರ ಕೈ ತಪ್ಪಿಸುವುದಕ್ಕೆ ಜಮೀನ್ದಾರನಿಗೆ ಹಕ್ಕಿಲ್ಲ. ವಿಲೆನ್‌ಗಳ ದರ್ಜೆಗಿಂತಲೂ ಕೀಳ್‌ಪಟ್ಟವರು ಹುಟ್ಟುಜೀತಗಾರರಾಗಿದ್ದರು. ಇವರು ಜಮೀನ್ದಾರನ ಸೇವೆ ವಿಶಿಷ್ಟವನ್ನೂ ಮಾಡಬೇಕಾಗಿತ್ತು. ಸ್ವತಂತ್ರವಾಗಿ ಆಸ್ತಿಯನ್ನು ಸಂಪಾದಿಸುವುದಕ್ಕೆ ವಿಲೆನ್ ಎಂಬ ಬಡಜನರಿಗೆ ಹಕ್ಕಿಲ್ಲ. ಜಮೀನ್ದಾರ ಯಾವ ಹಿಂಸೆಯನ್ನು ಮಾಡಿದಾಗ, ಅವರು ಸಹಿಸಿಕೊಂಡಿರಬೇಕೇ ಹೊರತು, ಇವರ ದೂರನ್ನು ಕೇಳುವುದಕ್ಕೆ ಯಾವ ಅಧಿಕಾರಸ್ಥಾನವೂ ಇರಲಿಲ್ಲ. ಗುಲಾಮರು ಎಂಬ ಮುಸಲ್ಮಾನರ ಸಂಸ್ಥೆಯನ್ನೂ ಸ್ಲೇವ್ಸ್ ಎಂಬ ಪಾಶ್ಚಾತ್ಯರ ಸಂಸ್ಥೆಯನ್ನೂ ಇದು ಹೋಲುವುದು. ಈ ಫ್ಯೂಡಲ್ ಸಂಸ್ಥೆಯನ್ನು ಕುರಿತು ಹೇಳತಕ್ಕೆ ಬೇರೆ ವಿಷಯಗಳು ಇನ್ನೂ ಇದ್ದಾಗ್ಯೂ, ಪ್ರಕೃತ ಸಂದರ್ಭದಲ್ಲಿ ಇಷ್ಟು ಹೇಳಿ ತಮಗಳಿಗೆಲ್ಲಾ ತೊಂದರೆ ಕೊಟ್ಟು ಅಸಹ್ಯ ಹಿಡಿಸಿದ್ದೇ ಸಾಕಾಗಿದೆ.
ಪಾಳಯಗಾರ, ಅಧೀನರಾಜ
ನಮ್ಮ ಭರತಖಂಡದಲ್ಲಿ ಎಲ್ಲಾ ಕಡೆಯಲ್ಲಿಯೂ ಪೂರ್ವದಿಂದಲೂ ಇದ್ದ ಜಮೀನ್ದಾರ್, ತಾಲ್ಲೂಕುದಾರ್, ಜಹಗೀರ್‌ದಾರ್, ಮಿಟ್ಠಾದಾರ್, ಮೊದಲಾದ ಸಂಸ್ಥೆಗಳನ್ನು ಫ್ಯೂಡಲ್ ಸಂಸ್ಥೆಯು ಹೋಲುವುದು. ಇವುಗಳೇ ಪಾಳಯಗಾರ ಸಂಸ್ಥೆಗೆ ಮೂಲವಾದವು. ಆದರೆ ಸ್ವತಂತ್ರನಾದ ಒಬ್ಬ ದೊರೆಗೆ ಇರುವ ಅಧಿಕಾರವೆಲ್ಲಾ ಪಾಳಯಗಾರನಿಗೆ ಅವನ ಸೀಮೆಯಲ್ಲಿರುತಿತ್ತು. ಪಾಳಯಗಾರನು ಒಬ್ಬ ಚಿಕ್ಕ ಅಧೀನರಾಜನಾಗಿಯೇ ಇರುತಿದ್ದನು. ಈ ಭಾಗದಲ್ಲಿ ಜಮೀನ್ದಾರರು, ತಾಲ್ಲೂಕುದಾರರು, ಮೊದಲಾದ ಮೇಲೆ ಹೇಳಿದ ಅಧಿಪತಿಗಳಿಗಿಂತಲೂ ಪಾಳಯಗಾರ ಹೆಚ್ಚಾದ ದರ್ಜೆಯನ್ನೂ ಅಟ್ಟಹಾಸವನ್ನೂ ಸಹಾ ಉಳ್ಳವನು.
ಒಬ್ಬ ಪುರುಷ ಯಾವ ಕಾರ್‍ಯ ಮಾಡಿದರೂ, ಅದನ್ನು ಪೂರೈಸುವ ಯೋಚನೆಯನ್ನು ಮಾಡಬೇಕು. ಆದ್ದರಿಂದ ಮೊದಲು ತಮಗೆ ಮುಕ್ಕಾಲುಪಾಲು ಬೇಜಾರನ್ನು ಹುಟ್ಟಿಸಿ, ಅದನ್ನು ಅರ್ಧಾಂತಕವಾಗಿ ಬಿಟ್ಟುಬಿಡುವುದು ನನಗೆ ಧರ್ಮವಲ್ಲ. ಬೇಜಾರು ಮಾಡುವುದನ್ನು ಪೂರೈಸಿಬಿಡುತ್ತೇನೆ. ಪ್ರಪಂಚದೊಳಗೆಲ್ಲಾ ಭಾರಿ ಜಮೀನ್ದಾರರು ವಿಶೇಷವಾಗಿದ್ದರೆಂದು ಮೇಲೆ ಅರಿಕೆಮಾಡಿದಂತಾಯಿತು. ಆದರೆ ಯೂರೊಪ್ ಖಂಡದಲ್ಲಿದ್ದ ಫ್ಯೂಡಲ್ ಸಂಸ್ಥೆಗೂ, ಭರತಖಂಡದ ಜಮೀನ್ದಾರಿ ಸಿಸ್ತಿಗೂ ಇರುವ ಹೋಲಿಕೆಯನ್ನೂ, ಭೇದವನ್ನೂ, ಹೆದ್ದಟ್ಟಾಗಿ ಈ ಕೆಳಗೆ ತೋರಿಸಿದ್ದೇನೆ.
*****
ಮುಂದುವರೆಯುವುದು