ಅನ್ಯಾಯದ
ಬೆಂಕಿಯಲ್ಲಿ ನೀನು
ಕುದಿದು ಕುದಿದು ಕೆಂಪಾಗಿ-
ಲಾವಾ ರಸವಾಗಿ-
ನಿನ್ನೆದೆಯ ಲಾವಾ
ಸ್ಫೋಟಗೊಂಡಾಗ
ಜ್ವಾಲಾಮುಖಿ-
ಅಗ್ನಿ ಪರ್ವತದಂತೆ
ಬಂಡೆಯಾದೆಯಾ?
ಗಟ್ಟಿಯಾದೆಯಾ ಬೆಂಜಮಿನ್.
ಕಪ್ಪು ದೇಶದ ಆಗಸದಲಿ
ಕೆಂಪು ಸೂರ್ಯನ ಉಗಮ
ನೆತ್ತಿಗೇರಲು ಬಿಡಲಿಲ್ಲ-
ಸೂರ್ಯನ – ಕತ್ತು
ಹಿಸುಕಿದರಲ್ಲ ಇವರು –
ಬರಿದಾದ ಹಾಳು ಹೊಡೆವ
ಧೂಳು ತುಂಬಿದ ದಾರಿಯಲಿ
ಚೈತ್ರದ ಹಸಿರಿನುಸಿರನು
ಚಿವುಟಿ ಹಾಕಿದರಲ್ಲಿ
ಬೆಂಜಮಿನ್ – ಕನಸುಗಳು
ಹರಡಿ ಹೋದವಲ್ಲ.
ಭೋರ್ಗರೆದು ಧುಮ್ಮಿಕ್ಕಿ
ಹೆದರಿಸುತ್ತ ಉಕ್ಕಿ ಬರುವ
ದೈತ್ಯ ಅಲೆಗಳಿಗೆ
ಎದೆಕೊಟ್ಟೆಯಾ ಬೆಂಜಮಿನ್
ಗಟ್ಟಿ ಬಂಡೆಯಾದೆಯಾ?
ಬಂಡವಾಳಶಾಹಿ ಶನಿ ಸಂತಾನದ
ಹುಟ್ಟಡಗಿಸಲು ಮತ್ತೇ
ಹುಟ್ಟಿ ಬಾ ಬೆಂಜಮಿನ್.
ನಿನ್ನ ಹೋರಾಟದ
ಉಸಿರ ಧಗೆಯಲಿ ಬೆಂದು
ಹುಟ್ಟಿದ ಸಿಡಿಲ ಮರಿಗಳು
ಸಾರಿ ಸಾರಿ ಹೇಳುತ್ತಿವೆ
ಭೂಗೋಳದ ಮೂಲೆ
ಮೂಲೆಗಳಿಂದ ಮೊಳಗುತ್ತಿದೆ-
“ಬೆಂಜಮಿನ್ ನೀನಿನ್ನೂ ಸತ್ತಿಲ್ಲ
ನೀನಿನ್ನೂ ಸತ್ತಿಲ್ಲ” ಎಂದು.
*****