ಗೆಳತಿ,
ಅಂದು ಅಮವಾಸ್ಯೆ ಕಳೆದು
ಹುಣ್ಣಿಮೆ ಬರುತ್ತಿತ್ತು
ಹೊಳೆವ ಚಿಕ್ಕಿಗಳ ಮಧ್ಯ
ಚಂದ್ರನ ಹಾಲು ಬೆಳದಿಂಗಳು,
ಹೊಗಳಿ ವಣ್ಣಿಸುತ್ತಿದ್ದೆ-
ಚುಕ್ಕೆ ಚಂದ್ರಮನು,
ಭಾವುಕಳಾಗಿದ್ದೆ,
ಮೈಮರೆತು ನೋಡುತ್ತಿದ್ದೆ.
ಏನು ಹೊಳೆಯಿತೋ ನಿನಗೆ
ಚುಚ್ಚಿ ಎಬ್ಬಿಸಿ ನನ್ನ
ಉಪ್ಪರಿಗೆ ಕೆಳಗಿದ್ದ
ಕಪ್ಪು ಜನಗಳ ತೋರಿದ್ದೆ ನನ್ನ.
ಆಕಾಶದಡಿಯಲ್ಲಿ ಅಂಗಾತ
ಮಲಗಿದ್ದ ನನ್ನಕ್ಕ ತಂಗಿಯರು
ತೊಟ್ಟ ಸೀರೆ-ಕುಪ್ಪಸಗಳಿಗೆ
ನೂರೆಂಟು ತೇಪೆಗಳ
ತೆರೆದು ತೋರಿದೆ ನನ್ನ,
ಕೊರೆವ ಚಳಿ, ಬಿರುಗಾಳಿ
ಬಿರುಸಾಗಿ ಬೀಳುವ
ಮಳೆಯಾಲಿ ಕಲ್ಲುಗಳಿಗೆ
ನಡುಗಿ – ನರಳಾಡಿ
ಉರುಳಿ – ಬೀಳುವ ನನ್ನವರ
ಜೋಪಡಿಯ ಸಾಲುಗಳನ್ನು,
ಊರ ಮುಂದುಗಡೆ
ಉಳ್ಳವರ ದನಗಳಿಗೆ ಮೇವಾಗಿ
ಬೆಳೆದಂಥ ಜನಗಳನು
ದಣಿಯ ಗದ್ದೆಯ ಒಳಗೆ
ದುರಿದು ಹಣ್ಣಾದಂಥ
ಹೂತು ಹೋಗಿರುವಂಥ
ಮೂಳೆಗಳನು.
*****