ಎಲ್ಲಿದೆ ಸುಖ?
ಯಾವುದು ಸುಖ?
ಒಂದುಡುವುದರಲ್ಲಿದೆಯಾ?
ಒಂದುಂಬೋದರಲ್ಲಿದೆಯಾ?
ಚೆನ್ನಾಗಿ ಸಾಗಾಗಿರುವ
ಗೊಬ್ಬರ, ಗೋಡು ತಿಂದ,
ಮೇಲೆ ತಣ್ಣಗೆ ನೀರು ಹಾದ,
ಭೋಗವಾದ ನೆಲದಲ್ಲಿ ಕಸುಬುದಾರನೊಬ್ಬ ಬೆಳೆಸಿದ
ರಂಗುಳಿಸುವ ತೋಟದ ನಾಗವಳಿ ಬಳ್ಳಿ ಕೊನೆ ಇಕ್ಕುವ
ಚಿನ್ನದ ಮುಂಜಿಗಿರಿನಂತೆ ನಾನು
ಕಡೆ ಹುಟ್ಟಿನವಳಾಗಿ ಹುಟ್ಟಿದೆ.
ಅನ್ನುವವರೇ ಇಲ್ಲ!
ಆದರಿಸುವವರೇ ಎಲ್ಲಾ!
ಕೇಳಬೇಕೆ ಇನ್ನು ನನ್ನ-
ಎಳೆಗರಿಕೆ ಮೆಲ್ಲುತ್ತ, ತಿಳಿನೀರ ಕುಡಿಯುತ್ತ,
ರಕ್ಷಿತ ದ್ವೀಪದ ಚಿಗರೆ ಮರಿಯಂತೆ ಬೆಳೆದೆ.
ಅಲ್ಲಿಗೆ ಮುಗಿಯಿತು ನನ್ನ ಪುಣ್ಯ
ಹೆತ್ತಮ್ಮ ಹೋದಳು
ಅವಳೊಂದಿಗೆ ಹೋಯಿತು ನನ್ನೆಲ್ಲಾ ಸುಖ ಸೌಭಾಗ್ಯ.
ಅಕ್ಕ, ಅತ್ತಿಗೆ ಆದರೆ ಮಾಡುತ್ತಿದ್ದರು
ಯಾರೇನೇ ಮಾಡಿದರೂ ಹೆತ್ತಮ್ಮನ ಜಾಗ ತುಂಬೋಕಾಗುತ್ತಾ?
ಆ ತೂಕ ಯಾರಾದರೂ ತೂಗೋಕಾಗುತ್ತಾ?
ಹೆತ್ತಮ್ಮ ಮರೆವಿಗೆ ಬರಲಿಲ್ಲ
ತಬ್ಬಲಿ ಅನ್ನೋ ಭಾವನೆ ಅಳಿಲಿಲ್ಲ.
ಒಂದೊಂದು ಕಾಲದ್ದು ಒಂದೊಂದು ನಂಬಿಕೆ
ಆ ಕಾಲದಲ್ಲಿ
ಆಸುಪಾಸಿನಲ್ಲಿ ಹೆಣ್ಣ ಕೊಡಬಾರದೆಂಬುದು ನಂಬಿಕೆ.
ಅದಕ್ಕೆ ಹಟಮಾಡಿ ಕೊಟ್ಟರು ನಮ್ಮಪ್ಪ
ದೂರಕ್ಕೆ, ಹೊಸ ಸಂಬಂಧ ವೊಂದಕ್ಕೆ
ನನಗೆ ಗುದ್ದಿನ ಮೇಲೆ ಗುದ್ದು
ಉಸಿರು ತಿರುಗಿಸಿಕೊಳ್ಳಲೂ ಅವಕಾಶವಿಲ್ಲ
ಇನ್ನೂ… ಹೆತ್ತಮ್ಮನನ್ನೇ ಮರೆಯಾಕಿಲ್ಲ
ಕಟ್ಟಿ ನಡೆ ಅಂದರು ದೂರಕ್ಕೆ ನನ್ನ
ಆಗ ಏನು ಹೇಳಲಿ ನನ್ನ…!!
ಯಾರೂ ಅರ್ಥಮಾಡಿ ಕೊಳ್ಳಲಿಲ್ಲ, ನನ್ನ ಬನ್ನ
ನನ್ನದು ಶೋಕ…. ಶೋಕ… ಸೀತೆಯ ಶೋಕ!
ಇಲ್ಲಿ
ಉರಿದು ಮುಕ್ಕಿದರು ಅತ್ತೆ ನಾದಿನಿಯರು
ಚಲಾಯಿಸಿ ತಮ್ಮ ಹಕ್ಕನ್ನ
ಶೋಕದ ಮುದ್ದೆಯಾದ ನನ್ನ
ತೀರಾ ಮಂಕು, ಮಂಕಾದವಳ್ನ
ಈ ಹಾಳಾದ ರೂಪವೂ ಕೂಡ
ನನ್ನ ಕಾಡುವುದರಲ್ಲಿ
ಹಿಂದೆ ಬೀಳಲಿಲ್ಲ
ಸುಂದರ ಹೆಂಡಿರಿಗೆ ಸಡಿಲ ಕೊಡಬಾರದು,
ಸಲುಗೆ ಕೊಡಬಾರದು
ಕೊಟ್ಟರೆ ಕೆಟ್ಟೆನೆಂಬ ನಂಬಿಕೆಯ ‘ಇವರು’
ಮಿದುವಾಗಿ ಇರುವಂತ ಕಡೆಯಲ್ಲೂ
ಕಠಿಣವಾಗಿಯೇ ನಡೆಸಿಕೊಂಡರು.
ಸಾಲದಕ್ಕೆ ಬಡತನದ ಬದುಕು-
ದುಡಿದರೆ ಉಂಟು ಇಲ್ಲದಿದ್ದರೆ ಇಲ್ಲ.
ಜಾರುತ್ತ ಹೋಯಿತು ಬದುಕು
ತುಂಬುತ್ತ ನಡೆಯಿತು ಬಂಡಿ
ನಿಧಾನವಾಯಿತು ರೊಂಡಿ.
ಆಷಾಡದ ಬದುಕಿನಲ್ಲಿ ಕಲ್ಲು ಮಣ್ಣು ಹೊತ್ತು
ನೆತ್ತಿ ಕೂದಲೆಲ್ಲಾ ಉದುರಿ ಹೋಯಿತು ಮಂಡೆ ಬೋಳಾಯಿತು
ಭೀಕರಕ್ಕೆ ಆಟ ಸಾಗಿತ್ತು.
ನನಗೆ ಕಷ್ಟ ಒಂದು ತೂಕವಾದರೆ
ಮುಂಗೋಪದ ಗಂಡ ಇನ್ನೊಂದು ತೂಕವಾದ
ಮೈನೊಂದರೆ ಸುಧಾರಿಸಿಕೊಳ್ಳಬಹುದು
ಮನಸು ನೊಂದರೆ…?
ಮನುಷ್ಯನಾಗ ಬೇಕಾದರೆ ಸುಲಭದಲ್ಲಾಗುವುದಾ?
ನನ್ನ ರಾಯ
ಎರಡನ್ನೂ ಹಿಂಡಿದರು
ಎಲ್ಲಾ ಆಟವನ್ನೂ ಆಡಿದರು
ಕಲಿತಿದ್ದೆಲ್ಲವನ್ನೂ ನಾಟಕಮಾಡಿ ತೋರಿಸಿದರು.
ಊಹಿಸುವಿರಾ!
ಎರಡೂ ತಿಳಿಯದ
ಆಡುವ ಮಕ್ಕಳ ಉಡಿಯಲ್ಲಿ ಹಿಡಿದ
ಬಡತನವೆಂಬ ಕುದಿವ ಕೊಪ್ಪರಿಗೆ ಎಣ್ಣೆಯಲ್ಲಿ ಬಿದ್ದ
ಹೆಣ್ಣೂಬ್ಬಳ ಕಷ್ಟವನ್ನಾ…!
ಶಿವಾ…!
ನನ್ನ ಕಣ್ಣಲ್ಲಿ ನೀರು ಸುರಿಯಲಿಲ್ಲ
ನೆತ್ತರು ಸುರಿಯಿತು.
ಹ್ಞಾಂ…! ಅದೆಲಾ ಹೇಗೋ… ಆಯಿತು.
ಆಗ ಜನವೂ ಕೂಡ ಅಂತವರಿದ್ದರು
ಈಗ…?
ಥುತ್! ನನ್ನದಿನ್ನೆಂತಾ ಕರ್ಮ
ತಡಾಯ ಮೊದಲು ಇದೇನಾ?
ಕಣ್ಣು ದೊಡ್ಡದು ಮಾಡ್ಕೊಂಡು
ಹೊಟ್ಟೆ ಸಣ್ಣದು ಮಾಡ್ಕೊಂಡು
ಹೀಗಿದ್ದಕಾಲ ಹೀಗೆ ಇರುತ್ತಾ ಅಂಡ್ಕೊಂಡು…
ಆಲೆಸೊಪ್ಪು, ಅತ್ತಿಕಾಯಿ, ಬೇಲದಕಾಯಿ, ಹುಣಸೇ ಬೀಜದಾಗೆ
ಜೀವ ಹೊರಕೊಂಡು
ಕಾಲ ಹಾಕ್ತ
ಇಷ್ಟು ತಲೆ ಅಷ್ಟು ಮಾಡಿ ಓದಿಸಿ, ಮಾಡಿಸಿ
ಮುಂದೆ ತಂದ್ವಿ ಮಗನ್ನ.
ಏನು ಬಂತು?
ಇಗ! ಅವರು ಗಂಡ ಹೆಂಡತಿ ಸುಖವಾಗಿದ್ದಾರೆ
ನಮಗೆ ಪಾಪಿ ಸಮುದ್ರಕ್ಕೊದರೂ ಮೊಣಕಾಲು ತನಕ ನೀರು
ಅಂದಂಗಾಯ್ತು
ಎಲ್ಲೇ ಗಂಡನೋ, ಎಲ್ಲೇ ಮಕ್ಕಳೋ…!
ಇಲ್ಲಿಗೆ ಎಲ್ಲರದೂ ನೋಡ್ದಂಗಾತು
ಯಾರಿಗೆ ಯಾರೂ ಇಲ್ಲ.!
ತಾನು ಸಾಯ್ಬೇಕು ಸುಡುಗಾಡು ಕಾಣ್ಬೇಕು.
ಇದೂ ಸಾಲದ್ದಕ್ಕೆ ಅರೆ ತಲೆನೋವು ಬೇರೆ
ಅತ್ತ ಸಾಯೋದು ಇಲ್ಲ ಇತ್ತ ಬದುಕೋಕು ಬಿಡಲ್ಲ
ಅಸಹ್ಯ ನೋವು!
ತಲೆ ಸೀಳುಗೊಯ್ದಂಗಾಗುತ್ತೆ.
ಶಿವಾ..! ಶಿವಾ..!
ನಿನಗೆ ಕಣ್ಣಿಲ್ಲಪ್ಪ! ನಿನಗೆ ಕಣ್ಣಿಲ್ಲ!
ನಿನಗಿನ್ನೂ ಸಮಾಧಾನ ಆಗಿಲ್ವೇನಪ್ಪಾ!
ಇನ್ನೆಷ್ಟು ಕೊಡ್ತಿಯಪ್ಪಾ..!
ಪಾರು ಮಾಡಪ್ಪಾ…! ಪಾರುಮಾಡು.
*****