ಅಮ್ಮಾ ತಾಯಿ ಜಗದಂಬೆ ದೇವಿ ಮಕ್ಕಳನು ಕಾಯಿ ತಾಯಿ
ನಮ್ಮ ಬಿಟ್ಟು ನೀ ಹೋಗಬೇಡ ನಾವಿನ್ನು ಎಳೆಯ ಕಾಯಿ || ೧ ||
ನಿನ್ನ ನಾಮ ನೂರಾರು ಕೋಟಿ ಕರೆಕರೆದು ಸಾಲದಮ್ಮ
ನಿನ್ನ ರೂಪ ಕೋಟ್ಯಾನುಕೋಟಿ ಎಣಿಸಲಿಕೆ ಬಾರದಮ್ಮ || ೨ ||
ಗರ್ಭದಿಂದ ಹೊರಬಂದು ಕೂಸು ತೆರಿತಾದೆ ಬಾಯಿ ಅಮ್ಮಾ
ನೋವು ಬೇವುಗಳ ಸಾವು ಕೊನೆಗೆ ತಾ ಕರೀತಾದೆ ಅಮ್ಮಾ || ೩ ||
ಹಡೆದ ತಾಯಿ ಹಾಲುಣಿಸಿ ಬೆಳೆಸಿ ಮುದ್ದನ್ನೆ ಹೊದಿಸುವಾಕಿ
ಕರುಳು ಕುಡಿಯ ಎಳೆ ಸೋಕದಂತೆ ಬೆಳೆಸೀಯಿ ಅನ್ನ ಹಾಕಿ|| ೪ ||
ವಿಶ್ವವನ್ನೆ ನೀ ಆಡಿಸುತ್ತ ಜೋಗುಳದ ಗಾನದಲ್ಲಿ
ಪ್ರೀತಿ ತೊಟ್ಟಿಲಲಿ ತೂಗುತಿರುವೆ ಹಗಲಿರುಳು ಜೋಕೆಯಲ್ಲಿ|| ೫ ||
ತಾಯಿ ತಾಯಿ ಎಲ್ಲೆಲ್ಲು ತಾಯಿ ಮರಗಿಡದಿ ತಾಯಿ ದೇವಿ
ಜೀವ ಜೀವ ಉಸಿರಾಡುವೆಲ್ಲ ತಾಯಿಯದೆ ಒಲುಮೆ ದೇವಿ|| ೬ ||
ನೀರು ನೆಲವು ಆ ಬಾನುಗಳನು ಜೀವಿಗಳು ತುಂಬ ಹರಡಿ
ಪ್ರಾಣದೆಲ್ಲ ನಲಿದಾಟ ಲೀಲೆ ತಾಯಮ್ಮ ಹಡೆದ ಮೋಡಿ|| ೭ ||
ಪಂಚ ಪ್ರಾಣ ನೀ ಪಂಚಭೂತಗಳ ಐದು ಮುಖವ ತಾಳಿ
ಪ್ರಾಣಿ ಪ್ರಾಣಿಗಳ ಸೃಪ್ಪಿಗೊಳಿಸಿ ಅನಂತ ರೂಪಗಳಲಿ|| ೮ ||
ಗಾಳಿಯಾಗಿ ಎದೆಯುಸಿರು ಉಸಿರು ಓಡಾಡೊ ಸೂತ್ರ ನೀನೆ
ನೀರು ರಕ್ತ ಹರಿಹರಿದು ರಸದ ಜೇಂಗಡಲ ಒಡಲು ನೀನೆ|| ೯ ||
ಬೆಂಕಿಯಾಗಿ ಉರಿ ಉರಿದು ಚೈತನ್ಯದಗ್ನಿ ನೀನೆ
ಮಣ್ಣಿನಲ್ಲಿ ಧಾತುಗಳ ಸತ್ವ ಬೇರಿಳಿವ ತತ್ವ ನೀನೆ|| ೧೦ ||
ಗಗನದಲ್ಲಿ ಬಯಲಾದ ಶೂನ್ಯ ತೆರೆ ಬಾಗಿಲಾಚೆ ನೀನು
ಸೊಗದ ರಾಣಿ ಸೃಪ್ಪಿಯಲಿ ಚೆಲುವು ದಿನದಿನವು ಹೊಸತು ನೀನು|| ೧೧ ||
ಅನ್ನ ಧಾನ್ಯಗಳ ಹೂವು ಹಣ್ಣುಗಳ ಮಡಿಲ ಸಸ್ಯರಾಶಿ
ಗಿರಿಯ ಸಾನುಗಳ ವನದ ಸೀಮೆಗಳ ಹಸಿರವುಡಿಗೆಯರಸಿ|| ೧೨ ||
ಸ್ವರಗಳಲ್ಲಿ ಸಾವಿರದ ಭೇದ ಓಂಕಾರ ನಾದ ಮೂಲ
ವರ್ಣಗಳಲಿ ಅಗಣಿತ ಭೇದ ನಿರ್ವರ್ಣ ವರ್ಣ ಮೂಲ || ೧೩ ||
ಹುಟ್ಟಿ ಸತ್ತು ಹುಟ್ಟಿರುವ ಕ್ಷರಗಳಲಿ ಅಕ್ಷರಾಂಬೆ ನೀನು
ಏಳು ಬೀಳು ಅಲೆ ಲೀಲೆ ಕೆಳಗೆ ಅವಿನಾಶಿ ಕಡಲು ನೀನು || ೧೪ ||
*****