ಸಾಕಾತ ಸಾಕಾತ ಇವ್ನ ಸಂಗ ಸಾಕಾತ
ಸಾಕಾದ್ರು ತುಸು ತುಸು ಬೇಕಾತ ||ಪಲ್ಲ||
ನನಪೂರ್ತಿ ನಾನಿದ್ರ ಬುಸರ್ಬುಳ್ಳಿ ಅಂತಾನ
ಹೆಸರ್‍ಹೇಳಿ ಕಿಡಿಕ್ಯಾಗ ಹಾಡ್ತಾನ
ಬಾರಾಕ ನಿನಗ್ಯಾಕ ಪಡಿಪಾಕ ಧೀಮಾಕ
ಬಾರಂದ್ರ ಜೋರ್‍ಮಾಡಿ ಓಡ್ತಾನ ||೧||
ನಿದ್ರ್ಯಾಗ ನೀರಾಗ ಮುದ್ದಾಮು ಬರತಾನ
ಸುದ್ದಾಗಿ ಸರದಾರ ಕೂಡ್ತಾನ
ಎಲೈತಿ ನಿನಮನಿ ಪಡಿಜಂತಿ ಕಡಿಜಂತಿ
ತೋರಂದ್ರ ಕೇಳ್ದಂಗ ಓಡ್ತಾನ ||೨||
ನೀನ್ಯಾರು ನಿನಗ್ಯಾರು ನಿನ್ಹೆಸರು ಇಟ್ರ್ಯಾರು
ಎಂದಾರ ಹುಚಮಾರಿ ಮಾಡ್ತಾನ
ನಾನ್ಯಾರು ನನಗ್ಯಾರು ನನಗ್ಯಾಕ ನಿನಜೋರು
ಹೇಳಂದ್ರ ಮಕಮಾರಿ ನೋಡ್ತಾನ ||೩||
ಹಾಲ್ಗಡಗಿ ಕುಡಿತಾನ ಕಟಬೆಣ್ಣಿ ತಿಂತಾನ
ದುಡ್ಡಂದ್ರ ಧೀಮಾಕು ಬಡಿತಾನ
ಮನಿಯಾಗ ಸೂರಣ್ಣ ಅಗಸ್ಯಾಗ ಕಾಮಣ್ಣ
ಬಯಲಾಗ ಬೋರಣ್ಣ ಓಡ್ತಾನ ||೪||
ತಾಳೀಯ ಕಟ್ಟಂದ್ರ ಕಂಗಾಲು ಆಗ್ತಾನ
ರಾತ್ರ್ಯಾಗ ರಂರಾಡಿ ಮಾಡ್ತಾನ
ಹಗಲೊಂದು ಥರಮಾಡಿ ಇರುಳೊಂದು ಥರ ಆಡಿ
ನನಜೀವ ಜಿರ್ಲೆಂಗ ಕಾಡ್ತಾನ ||೫||
*****