ನಾನು ಯಾರೆಂದಿರಾ?
ನಾನು ಬುದ್ಧಿವಂತ
ಬುದ್ಧನ ಜಾತಿಯಲಿ ಹುಟ್ಟಿ
ಸಾರಸ್ವತ ಲೋಕವನು
ಕೈಯಿಂದ ತಟ್ಟಿ
ಜ್ಞಾನ ಭಂಡಾರವನು
ಗಂಟಾಗಿ ಕಟ್ಟಿ
ಅಜ್ಞಾನ ಅಂಧಕಾರವನು
ಹೆಮ್ಮೆಯಿಂದ ಮೆಟ್ಟಿ
ಪಡೆದ ಬುದ್ಧಿ ಸ್ವಂತ
ನಾನು ಬುದ್ಧಿವಂತ.
ಶಿಕ್ಷಕರ ಶಿಕ್ಷಿಸ ಬಲ್ಲೆ
ಪ್ರಿಂಸಿಪಾಲನ ಕ್ಯಾಬಿನ ಖಿಂಡಿಗೆ
ಕಲ್ಲು ಹೊಡೆದು ಕನ್ನಡಿ ಮುರಿಯ ಬಲ್ಲೆ
ಲ್ಯಾಬಿನಲ್ಲಿ ಸಿಲಿಂಡರಿ
ನ ದ್ರವಗಳ ಚೆಲ್ಲಿ
ಪ್ರಯೋಗ ನಡೆಸ ಬಲ್ಲೆ
ಪರೀಕ್ಷೆಯ ಹಾಲಿನಲಿ
ಅರ್ಧ ಗಂಟೆಯೆ ಕುಳಿತು
ಪಾಸಾಗ ಬಲ್ಲೆ
ಪಾಸಾಗದೆಯು ಮುಂದಿನ ಕ್ಲಾಸಿಗೆ
ಹೋಗ ಬಲ್ಲೆ
ವಿಶ್ವವಿದ್ಯಾಲಯಗಳು
ನನ್ನ ಅಂಕಿತದಲ್ಲಿ
ಮೂರು ವಿಷಯಗಳ ಮೇಲೆ
ಎಮ್ಮೆ ಕಟ್ಟಿ
ನನ್ನ ಹೆಸರಿನ ಮುಂದೆ
ಡಿಗ್ರಿಗಳ ಕಂತೆ ನಿಲ್ಲಿಸ ಬಲ್ಲೆ
ದೇಶದಲ್ಲಿ ನನ್ನ ಯೋಗ್ಯತೆಗೆ
ಸರಿಯಾದ ನೌಕರಿಯೆ ಕಡಿಮೆ
ಅದಕ್ಕೆಂದೆ ನನಗಿಲ್ಲ ದುಡಿಮೆ
ನಾನು ಸಾಧು ಸಂತ
ನಾನು ನಿರ್ಧನವಂತ.
ತರುಣರ ಗುಂಪಿಗೆ ನಾನು ನಾಯಕ
ಸಂಪು, ಗುಲ್ಲು ಗಲಾಟೆಗಳೆ ನನ್ನ ಕಾಯಕ
ಕ್ಯೂಮುರಿ, ಫ್ಲರ್ಟ್ ಮಾಡು
ಧೂಮಪಾನ, ಬೀರಕುಡಿ
ವುದು ನನ್ನ ನಿತ್ಯಮನರಂಜನೆಗಾಗಿ
ಇಂದ್ರಮಾಡಿದ್ದ. ಕೃಷ್ಣ ಆಡಿದ್ದ
ನಾನು ಭಾಗವತ, ವೇದಗಳ
ಓದಿರುವ ಬುದ್ಧಿವಂತ
ನಾನು ಅಜ್ಞಾನಿ ಅನಂತ.
ಕಸ್ಮೈದೇವಾಯ ಎಂಬ ಸವಾಲಿಗೆ
ಸವಾಲಾಗಿ ನೂರು ದೇವರ
ಸಮನಾಗಿ ಪೂಜಿಸ ಬಲ್ಲೆ
ಮಂದಿರ ಮಸೀದಿ ಚರ್ಚ್
ಸಾಯಿಬಾಬಾ, ಶಿರಡಿ ಬಾಬಾ
ರಜನೀಶ ಬ್ರಹ್ಮಚಾರಿ ಬಾಬಾ
ಎಲ್ಲಿರುವೆ ತಂದೆ ಬಾ. ಬಾ.
ಎನ್ನುತ
ಹರದಾರಿ ಹರಿದ್ವಾರಗಳ ಸುತ್ತಿ
ದೇವರ ಪತ್ತೆ ಹಚ್ಚಬಲ್ಲೆ.
ನಾನು ಸಾಹಿತಿ-ಕವಿ,
ದತ್ತಾಡಿಗ ಪುಟಪ್‌ಗಳ
ಕಾವ್ಯದ ಹಿಂಡುವೆನು ಕಿವಿ
ನಾಕು ತಂತಿಯಲಿ ಒಂದನು ಮುರಿದು
ರಾಮಾಯಣ ದರ್ಶನದ ಶಿಲ್ಪದ ಮೇಲೆ
“ಕಟ್ಟುವೆನು ನಾನು ಹೊಸನಾಡೊಂದನು
ರಸದ ಬೀಡೊಂದನು”
*****