-ರವಿ ಕೋಟಾರಗಸ್ತಿ
ಮಾತು ಮೌನವಾಗುತ್ತಿದೆ
ದಿನ.. ದಿನವು ಕ್ಷಣ.. ಕ್ಷಣವು
ಜಗದೆಲ್ಲೆಡೆ ಬಾಯಿ ಚಾಚುತಿಹ
ಕೋಮು-ಮತೀಯ ವಿಷ ಜಂತುವಿನ
ಉದ್ದನೆಯ ಕರಿ ನಾಲಗೆಯ ಕಂಡು…
ಮಾತು ಮೌನವಾಗುತ್ತಿದೆ
ನಾಡಿನ ಉದ್ದಗಲು…
ಶಾಂತಿ… ಸೌಹಾರ್ದತೆ ದೂಡಿ ಧರ್ಮದ
ಹೆಸರಲಿ ಜಾತಿ-ರಾಜಕೀಯ ಬೀಜ
ಬಿತ್ತಿ, ಕಳೆಯ ಬೆಳೆಯುವದನ್ನು ಕಂಡು.
ಮಾತು ಮೌನವಾಗುತ್ತಿದೆ
ಬದುಕಿನ ಹಸಿರು ಉಸಿರಾಗಿರುವ
ಪ್ರಕೃತಿ ಸಿರಿ ಪರಿಸರಕೆ
ಬೆಂಕಿಯಿಡುತ ಬೆಂದು
ಬರಡಾಗುತಿಹ ಮನುಕುಲ ಕಂಡು
ಮಾತು ಮೌನವಾಗುತ್ತಿದೆ.
ಜನನಿ… ಸಹೋದರಿ…
ಒಡಲ ಕುಡಿ… ಬಾಂಧವ್ಯ ಸವಿ ಅರಿಯದ
ಕ್ಷಣ… ದೇಹದ ತೃಷೆಗಾಗಿ
ಮಾರಾಟ ಮಾಡುವ ಭಂಡರ ಕಂಡು.
ಮಾತು ಮೌನವಾಗುತ್ತಿದೆ
ಕೆಂಪು ದೀಪದಡಿ ನಲುಗುತಿಹ
ಕಣ್ಣುಮುಚ್ಚಿ ಬೇಯುತಿಹ
ತನು… ಮನಗಳ ಆಳದ ನೋವು
ಕೇಳದ… ಕುರುಡಾಗಿಹ ಸಮಾಜ ಕಂಡು.
*****