ಸೋನೆ ಮಳೆಯ ಸಂಜೆ…
ಒಲೆಯ ಮೇಲೆ ಚಹಾ ಕುದಿಯುತ್ತಾ ಇತ್ತು
ದೀಪ ಹಚ್ಚಿ, ಧೂಪ ಹಾಕಿ, ದೇವರನ್ನು ಬೆಚ್ಚಗಾಗಿಸಿ
ಸ್ವೆಟರ್ ಏರಿಸಿ ಹಾಳೂರು..
ಎಂದು ಇಲ್ಲದ ಕರೆಂಟಿಗೆ ಬಾಯ್ತುಂಬ ಬಯ್ದು
ದೀಪ ಧಾರಿಣಿಯಾದೆ,
ಗಾಳಿ ಬಾಗಿಲ ತಳ್ಳಿತು
ಎದುರಲ್ಲಿ ತೊಯ್ದು ತೊಪ್ಪೆಯಾಗಿ ನಿಂತಿತ್ತು ಹೆಣ್ಣು ಜೀವ
ಆತುಕೊಂಡಿದ್ದ ಎಳೆಯ ಕಂದಮ್ಮಗಳ ಜೋಡಿ
ಹಾಕಿದವು ಮೋಡಿ, ತುಸುವೆ ಮೆದುವಾಯಿತು ಭಾವ
ಕೇಳದೆಯೇ ಹೇಳದೆಯೇ
ಎಲ್ಲವೂ ಅರ್ಥವಾದಂತೆ, ಭಾಷೆಯ ಹಂಗಿಲ್ಲದೆ
ನೇರ ಹೃದಯವನೆ ಮುಟ್ಟಿದಂತೆ.
ಏನೂ ಮಾಡಲು ತೋಚದೆ…
ಆರಿ ಹೋಗಲಿದ್ದ ದೀಪಕ್ಕೆ ಅಡ್ಡ ಕೈ ಹಿಡಿದು
ಒಳಗೆ ಬಂದೆ, ಹೊರಗೆ ಹೋದೆ…
ದೀಪ ಹೊಯ್ದಾಡುತ್ತಾ ಇತ್ತು
ತೀರಿಕೊಂಡ ಅಜ್ಜಿ, ದೊಡ್ಡವ್ವ, ಶಕ್ಕು….
ಯಾರೆಲ್ಲ ನಿಂತಂತಾಗಿ ಕಣ್ಣೆದುರು –
ಜಗುಲಿಯ ಮೂಲೆಗೆ ಗೋಣಿ ಹಾಸಿ
ಬಟ್ಟಲಿಗೆ ಬಿಸಿ ಹಾಲು ಅನ್ನ ಸುರಿದು
ಬಾಗಿಲು ಮುಚ್ಚಿ ಕಿಟಕಿ ತರೆದೆ
ಇದೀಗ-
ಕಂದಮ್ಮಗಳು ಸಮರೋಪಾದಿಯಲ್ಲಿ
ಅಮ್ಮನ ಮೊಲೆಗೆ ಬಾಯಿಟ್ಟು
ಹಾಲು ಹೀರುತ್ತಿದ್ದವು
ತಾಯಿ ಬೆಚ್ಚಗೆ ಕಣ್ಮುಚ್ಚಿ ಮಲಗಿತ್ತು
ವಾಸನೆ ಹಿಡಿದು ತುಸುವೆ ಬಾಲ ಅಲ್ಲಾಡಿಸಿ
ನನ್ನ ಗುರುತಿಸಿತು!
*****