ನನ್ನೊಳಗಿದ್ದು ಹೋದೆಯೆಲ್ಲಿಗೆ
ಹೊಳೆಯಲೇ ಇಲ್ಲ
ತಿಳಿಯಲೇ ಇಲ್ಲ.
ಒಂದಿನಿತು ಸೂಚನೆ ಕೊಡದೆಯೆ
ಹೋದುದರ ಮರ್ಮವೇನು.
ಆಕಾಶಕ್ಕೊಮ್ಮೆ ದಿಗಂತಕ್ಕೊಮ್ಮೆ
ದಿಟ್ಟಿ ಮಿಟುಕದೆ,
ಮೋಡಗಳಾಚೆಗೊಮ್ಮೆ
ನೋಡಿದ್ದೆ ಬಂತು
ನಿನ್ನ ಸುಳಿವು ಸಿಗಲಿಲ್ಲ
ಮಳೆ ಹನಿಗಳನ್ನು ನಿಲ್ಲಿಸಿ
‘ನೀವು ಕಂಡಿರಾ, ನೀವು ಕಂಡಿರಾ’
ಎಂದು ವಿಚಾರಿಸಿದರೂ
ಗಿಡಗಂಟಿಗಳೆಡೆಯಲ್ಲಿದ್ದ
ಹೂ ಪಕಳೆಗಳ ಕಿವಿಯಲ್ಲಿ
ಮೇಲುದನಿಯಲ್ಲಿ ಉಸುರಿದರೂ,
ರುಯಿಂಗುಡುವ ಗಾಳಿಯಲೆಯಲ್ಲಿ
ಸುಮದ ಮಧುರ ರಂಗಿನಲ್ಲಿ
ಹಣ್ಣು-ಕಾಯಿಗಳ ಸಿಹಿ ಕಹಿಗಳಲ್ಲಿ
ನಿನ್ನಿರುವಿಕೆಯನ್ನು ಹಾರಯಿಸಿದರೂ,
ಕೆಲವೊಮ್ಮೆ ನೀನು ನನ್ನೊಳು
ಇದ್ದುದು ಹೌದೆ,
ಎನ್ನುವುದರ ಗುಮಾನಿಯಾಗುತ್ತದೆ.
ಆಗ ನಿನಗಾಗಿ ಕೂಗುವ
ಧನಿಯೆತ್ತಿ ಮೊರೆಯಿಡುವ
ಗ್ರಹ – ವಿಗ್ರಹಗಳ ಕೃಪೆಯನ್ನು ಕೋರುವ
ನರನಾರಿಯರ ನಡುವಿನಲ್ಲಿ
ನಿನ್ನನ್ನು ಹುಡುಕುವ ಮನವಾಗುವುದು.
ಆದರೆ ಕಾಣದೆ ಎದ್ದ ಸವಾಲು ಮತ್ತೆ ಅದೇ
ಎಲ್ಲಿರುವೆ ನೀನು ಎತ್ತ ಹೋದೇ…..?
*****