ಏನಿದು ಭಗ್ಗೆಂದು ಕೇಕೆ?
ಬೆಚ್ಚಿ ನೋಡಿದರೆ ಇಲ್ಲಿ ಕೈಕೈ ಹಿಡಿದು ಕುಣಿಯುವ
ಕತ್ತಲಕುಲ ವೃತ್ತ!
ನಡುವೆ ನಾಚನಿಂತ ಬಡ ಒಡಲ ನಗ್ನಮೊತ್ತ.
ನಡುಗಿಸುತ್ತದೆ ಮೈ; ಕಂಪಿಸುತ್ತದೆ ಕೈ
ಚಿತ್ತದಲ್ಲಿ ಕೆತ್ತಿದ ಪ್ರಶ್ನೆ ಕೆಣಕುತ್ತದೆ:
ಕಟ್ಟಿದೆವೆ ನಾವು ಹೊಸ ನಾಡೊಂದನು ರಸದ ಬೀಡೊಂದನು?
ಬುದ್ಧ ಗಾಂಧಿ ಬಂದರು
ಉತ್ತಿ ಬಿತ್ತಿ ಬೆಳೆತಂದು ಬಾಗಿಲು ಬಡಿದರು
ಮಿಲಿಟರಿ ಮಾದರಿಯಲ್ಲಿ ನಿಂತು
ಪಾದ ತೊಳೆದವರೆ ಎಲ್ಲರು!
-ಒಂದು ಕ್ಷಣ ಮೈಪುಳಕ ನೆನಪು
ಸುರುಳಿ ಬಿಚ್ಚುವ ಸಂತೋಷ ಸೆಲೆ.
ಈ ರಸದ ಬೀಡಿನಲ್ಲಿ ಹಿಂಡಿ ಹೀರಿ ಕಡೆಗೆ ಬಿಡದೆ
ಬೀಜ ಕಿತ್ತು ಬೀದಿಗೆ ಬಿಟ್ಟ ಮಾವಿನ ಓಟೆ ಸಮೃದ್ಧ ಸ್ವಾಮಿ
ಇಲ್ಲಿಗೆ ಬಂದು ನೀರು ಕೇಳಿಬಿಟ್ಟಿರಿ! ಸಿಕ್ಕುವುದಿಲ್ಲ.
ಫುಟ್‌ಪಾತಿನಲ್ಲಿ ಪ್ರಾಣಬಿಡುವ ಸತ್ಪ್ರಜೆಗೆ ಇಗೋ ತೆಗೆದುಕೊಳ್ಳಿ ತರ್ಪಣ;
ಹಂಡೆ ಹೆಂಡವುಂಟು; ವಿಸ್ಕಿ ಬ್ರಾಂದಿಯುಂಟು.
ನಮ್ಮದು ಹರೆಯದ ಹೊಚ್ಚ ಹೊಸನಾಡು
ಮಸ್ತಕಪುಸ್ತಕದಲ್ಲಿ ಮಿಂಚಿದ್ದರೆ ದಫ್ತರಿನಲ್ಲಿ ಬಚ್ಚಿಟ್ಟುಕೊ
ಜೋಪಾನ! ತೆರೆದಪುಸ್ತಕಗಳಿಗಿಲ್ಲಿ ಬೆಂಕಿಕಡ್ಡಿ; ಬೂದಿಗುಡ್ಡೆ.
ಕುಪ್ಪುಗತ್ತಿಗೆ ಒಂದೊಂದೇ ಬೀಳುತ್ತೆ ಧುತ್ತೆಂದು ಬೊಡ್ಡೆ.
ಕಡೆಗೆ ಕಾಣಿಸುವುದು ಮುಂಡೆಯಾದ ಮೂಗಿಮರ.
ಹಾಗಾದರೆ ಈ ನಾಡು ಬಂಜೆ?
ಈ ನೆಲದ ಜಲದಲ್ಲಿ ಇರುವುದೆಲ್ಲ ನಂಜೆ?
ಬಂದರಲ್ಲ ಸಿದ್ಧರು ಗೆದ್ದರಲ್ಲ ಬದ್ಧರು?
ಪಾರಿವಾಳಗಳ ಸಂತತಿಯೇ ಇಲ್ಲಿ ಸಂದಿತ್ತಲ್ಲ?
ಕೋಗಿಲೆಯಿಂಚರದಲ್ಲಿ ನವಿಲು ನಲಿದಿತ್ತಲ್ಲ?
ಸಿಂಹ ಸೊಂಡಿಲ ಹಿಡಿದು ಆಟ ಆಡಿತ್ತಲ್ಲ?
ಕಾವಿಬಟ್ಟೆಯಲ್ಲಿ ಕಾವಿಗೆ ಕೂತ ಕೋಳಿ
ಮಾಡಿದ ಮರಿಗಳದೆಷ್ಟು ಗದ್ದಲ ಗೊಂದಲ!
‘ಹೊಟ್ಟೆಗಿಲ್ಲವೆ? ಯಾಕೆ ಯೋಚನೆ? ಗಂಟುಮೂಟೆಕಟ್ಟು
ನಾವಿಲ್ಲವೆ ಜಟ್ಟಿಗಳು? ಮುಗಿಲಿಗೆ ಮಣ್ಣುಹೊರುವ ತಟ್ಟಿಗಳು?’
ಪಾಪ! ಗದಗುಡುವಾಗಸಕ್ಕೆ ಗರಗಸ ಹಿಡಿವ ಕೆಲಸ
ಬಾನ ಕೊಯ್ಯದಿದ್ದರೂ ಬಾಳು ಕೊಯ್ಯುತ್ತದೆ
ಸುಯ್ಯುತ್ತದೆ; ತೊಟ್ಟಿಕ್ಕುವ ಬೆವರು ತೋರಿಸಿ
‘ಆಹಾ! ಮಳೆ ಬಂತು ಮಳೆ ನಮ್ಮ ಮಹಿಮೆಯ ಬೆಳೆ’
-ಹುಯ್ಯಲಿಡುತ್ತದೆ ನಿತ್ಯನಿರಂತರ ನಿರಾಕಾರ ಕಾವಿಕುಲ
ಕೇರಿಕೇರಿಯಲ್ಲಿ ಹರಿದು ಘನೀಭವಿಸಿದ ಗೊಡ್ಡು ಬೆಟ್ಟಗಳು
ಪುರ್ರನೆ ಹಾರುತ್ತವೆ; ಪಟ ಪಟ ಪುಕ್ಕ ಬಡಿದು
ರೊಪ್ಪದಲ್ಲಿ ಕುಪ್ಪೆ ಹಾಕುತ್ತವೆ; ಕುಪ್ಪಳಿಸುತ್ತವೆ.
ಪಟ್ಟದ ಮೇಲೆ ಹುಬ್ಬು ಹಾರಿಸಿ, ಮೀಸೆ ತಿರುವುತ್ತವೆ.
ಧರ್ಮದೊಡ್ಡಿಯಲ್ಲಿ ದೊಗಲೆ ಬಟ್ಟೆ ಜೇಬು ತುಂಬ
ವಿಶ್ವಕಲ್ಯಾಣ ಸರಕು, ಚುರುಕು ಮತಾಪು
ವಜ್ರಾಯುಧ ಯೋಧ ಊದುವ ಕಹಳೆಗೆ ಮೂಲ-
ಭೂತ ಹಕ್ಕು ಚ್ಯುತಿಯಾರೋಪ ರೋಪು.
ಗೂರಲು ಹತ್ತಿ ಬೋರಲು ಬಿದ್ದ ಬಾಳಿಗೆ ಬಿರಟೆ
ತೊಗಟೆ ಸುಲಿದ ಮರ ಅಜರಾಮರ
ಚಿಂದಿಬಟ್ಟೆ ಹಸಿದ ಹೊಟ್ಟೆ ಮೂಳೆಕೈಕಾಲುಗಳಿಗೆ
ವೈಶಂಪಾಯನ ಸರೋವರ.
ಚಿತ್ತ ಬುತ್ತಿ ಕಟ್ಟಿ ಅಲೆಯೊಳಗೆ ಆಸೆಹಚ್ಚಿ
ಹೊಯ್ಯುವ ಜನಗಣಕ್ಕೆ ಬಲರಾಮಾಗಮನ ಚಿಂತೆ.
ಹಾಳು ಸುರಿಯುವ ಮನೆ ಮಸಣದಲ್ಲಿ
ಇರಿಯುತ್ತಿದ್ದಾರೆ ಉರಿಸುತ್ತಿದ್ದಾರೆ ತೊಲೆ ಜಂತೆ.
ಉರಿನಾಲಗೆಯಲ್ಲಿ ಚಿಮ್ಮ ಬಾರದೆ ನವಸೃಷ್ಟಿ?
ನಮ್ಮ ಮಣ್ಣು ಅರಳಿಸಿದ ಪುಷ್ಪವೃಷ್ಟಿ?
*****