ನನ್ನಮ್ಮ ಬೆಂಗಳೂರಿಗೆ ಬಂದವಳಲ್ಲ
ಮೆಜೆಸ್ಟಿಕ್‌ನ ವಾಕಿಂಗ್‌ಸ್ಟಿಕ್ಕಾಗಿ ಸಿಕ್ಕಾಗಿ
ತನ್ನತನ ಮುಕ್ಕಾಗಿ ಸಿನಿಮಾ ಮಹಲು
ರಸ್ತೆಯಮಲಿಗೆ ಸಿಕ್ಕಿದವಳಲ್ಲ.
ಸೀಳುಹಾದಿಯಲ್ಲಿ ಕೂಳೆಹೊಲದಲ್ಲಿ ಕಾಲುಬಲಿತು
ಕೂದಲು ನರೆತವಳು.
ಸದಾ ಸೌದೆ ಬುತ್ತಿ ನೆತ್ತಿಮೇಲಿಟ್ಟು ಕರ್ಮಿಸುವ
ನೀತಿ ನಿಯತ್ತು ನಿರ್ಮಿಸುವ
ನಿದರ್ಶನವಾದವಳು.
ಭೂತ ಗರ್ಭದಲ್ಲಿ ಹೊತ್ತು ವರ್ತಮಾನದಲ್ಲಿ ಹೆತ್ತು
ಭವಿಷ್ಯದ ಬಾಗಿಲಿಗೆ ನನ್ನ ಬಿಟ್ಟವಳು.
ಬಗಲಲ್ಲಿ ಜಗಲಿಯಲ್ಲಿ ಹರಿಸುವ ತೊದಲಲ್ಲಿ
ತಣಿದು ಕೈಹಿಡಿದು ನಡೆಸಿದವಳು
ಮೌನಗೌನಿನಲ್ಲಿ ಅರಳುಮನವಾದವಳು.
ಆಕೆ ಬಿತ್ತಿದ ಬಯಲು ಮಮತೆ ಮಡಿಲು
ಸುಳಿಯಾಗಿ ಬಿಡುತ್ತೆ.
ಕುರ್ಜಿಗೆಯಿಂದ ಕಳೆ ತೆಗೆದು ಪೈರು ಮುದ್ದಿಸುವ
ಸಹಜ ಸ್ಫುರಣ ಹೂರಣ ಒಳಗೆಳೆಯುತ್ತೆ.
ಅಲ್ಲಿ ಹಬ್ಬಿದಾಲದ ನೆರಳು; ತಬ್ಬಿ ತಣಿಯುವ ಕರುಳು
ಆಳದ ಹೆಜ್ಜೆಯೊತ್ತುಗಳು; ಭೂತ ಬದ್ಧಗಳು;
ಭಟ್ಟಂಗಿ ಸ್ವಾ-ಗತ ಶೈಲಿ ಮೈಲಿಗಲ್ಲುಗಳು.
ಅಮ್ಮನ ಬಾಳ ಬೇಲಿಯಲ್ಲಿ ಬೆಳೆದೆ.
ತೋಳುತಲ್ಪದಲ್ಲಿ ಒಂದೊಂದೇ ತುತ್ತು ತಿಂದೆ.
ನೆರಳು ಕರುಳು ಕರೆದ ಸುಖಕ್ಕೆ ಸಂದೆ.
ಬರಬರುತ್ತ ಬೇಲಿಯಾಚೆ ಬದುಕಿನ ಬೆದಕು; ಚುರುಕು.
ಗೇಟು ದಾಟಿ ಹೊರಗೆ ಹೂದೋಟ ನೋಟ; ಸಿದ್ದಾರ್ಥಮಾಟ.
ಬಿಸಿಲ ಟಿಸಿಲಲ್ಲಿ ಹೂ ಹಣ್ಣಿನಾಸೆ; ಬುದ್ಧಪಿಪಾಸೆ.
ಹುಡುಕುತ್ತ ಹೊರಟವನನ್ನು ಬೇಲಿಬಿಟ್ಟು-
ನೋಡುತ್ತಾಳೆ; ಭವಿಷ್ಯ ತಿನಸು ಕನಸುತ್ತಾಳೆ.
ಹೋಗುತ್ತಲೇ ಇರುವ ನಾನಲ್ಲೇ ಕರಗುವುದನು
ಕಾಣಲಾರದೆ ಕೈಬೀಸಿ ಧ್ವನಿಸುತ್ತಾಳೆ.
ಓಡಿಬಂದು ಗೇಟಿನ ಬಳಿ ತಾಯ ತೆಕ್ಕೆಗೆ ಬಿದ್ದ
ನನಗೆ ಹೂದೋಟದಾಸೆ.
ತಾಯ ಬೇಲಿ-ನನ್ನ ಹೂದೋಟಗಳ
ಗೇಟು ಒಂದಾಗಿಸುವಾಸೆ.
*****