೧
ನಾಲ್ಕು ಮೂಲೆಯ ಅಟ್ಟದಲ್ಲಿ ಮಾವು ಸಂಭ್ರಮ ತೋರಣ
ಬತ್ತಲೆ ನಿಂತಿದ್ದ ಒಗರು ಬೆಟ್ಟದಲ್ಲಿ ಸುಖಸಂಜೀವಿನಿ ಚಿಗುರು
ಗೊತ್ತಿಲ್ಲವೆ ನಿಮಗೆ? ಇದು ರಸಗಳಿಗೆ
ಮಫ್ತಿಯಲ್ಲಿ ಗಸ್ತು ಹೊಡೆಯುವ ಚರಂಡಿಗಳ ರಾಡಿ ತೆರೆದ ಕಣ್ಣಮುಂದೇ ಗಾಡಿಬಿಟ್ಟು
ತಿಳಿಜುಟ್ಟು ನಿಮಿರಿಸಿ ನಗುತ್ತವೆ; ಊರ ಮರಮುಂಡೆಯರ
ಮಂಡೆಗಳು ಮುತ್ತೈದೆ ಮಲರುಟ್ಟು ಕನಸುತ್ತವೆ
ಗಣಪಸ್ತುತಿಯಾಯಿತು; ಅಪ್ಪಟ ನಮ್ಮದೇ ಮುಖವೇಣಿ
ನಮ್ಮದೇ ಶಾಸ್ತ್ರೀಯ ಸ್ವರ; ತಾಳಹಿಡಿದ ನಮ್ಮ ಜನ ಎರಡು ಸಾಲು
ಕೊಳೆ ತೊಳೆದ ಕೋಟು ತೊಟ್ಟ ಭಾಗವತನ ಹೆಗಲ ಮೇಲೆ ಶಾಲು
ನಾಯಿಕೊಡೆ ಅಂಗಡಿ ಹೋಟೆಲ್ಲುಗಳ ಮುಂದೆ ಹತ್ತೆಂಟು ಬಾಯಿಬೆಲ್ಲು.
ಕರಿಯುವ ಪಕೋಡ ಊದಿದಂತೆ ಎದೆ; ಉಸಿರೆಲ್ಲ ಹೂವು
ಅದೋ ಅತ್ತ ಭಾಗವತಬಾಯಿ ಇಷ್ಟಿಷ್ಟೇ ತೆರೆದಂತೆ ತೆರೆಯೇಳುತ್ತದೆ. ಕತ್ತೆತ್ತಿದ ತೆನೆಗಣ್ಣನೋಟ ಅಟ್ಟದ ಮೇಲಿನ ಪಟ್ಟಕ್ಕೆ ಬೀಳುತ್ತದೆ;
ಪಾಂಡ-ವರ ಪಾಳೆಯದಲ್ಲಿ ಧರ್ಮರಾಜನ ದರಬಾರು ಮೊದಲ ಸೀನು.
ಈ ನಟ್ಟನಡು ರಾತ್ರಿಯಲ್ಲಿ ನೆಟ್ಟಸಸಿಯ ತಲೆಯಲ್ಲಿ ಅರಳಿನಿಂತ ಹಣ್ಣ ಆಸೆ
ಮೇಲೆ ಶುಭ್ರ ತಿಳಿನೀಲ ಬಾನು
ನಲಿವ ನೆಲ ನೆಲವನ್ನು ತಬ್ಬಿ ಕೆಲವೊಮ್ಮೆ ಉಬ್ಬಿ
ಬಯಲಲ್ಲಿ ತೋಳು ಚಾಚಿ ಭರತ ಶಾಸನ ಬರೆಯ ಬಯಸುವ ಬದುಕು.
ಆಗಿನ್ನೂ ಸೈಡ್‌ವಿಂಗ್ಸ್ ಸರಿಮಾಡುವ ತಕ್ಕಸ್ಥಳಕ್ಕೆ ಶ್ವೇತಚ್ಛತ್ರಿ ಸಿಕ್ಕಿಸುವ
ಮರೆತ ಮಾತನ್ನು ಎತ್ತಿಕೊಡುವ ಅವರಿವರ ಹೆಸರುಹೇಳಿ ಹಾರಹಾಕುವ ತರಾ-
ತುರಿ ಬಾಳು ಬರೆಯುವ ಭಾಗವತತಾಳದಲ್ಲಿ ಬಾಯಲ್ಲಿ ಬಂದ ಗಾನಾವಳಿಯ ಗುಂಗಿ-
ನಲ್ಲಿ ನಿಂತ ನೀಲಿ ಕನ್ನಡಕದ ರಾಜನದು ಎಂಥ ಭಂಗಿ!
ಕಂಡ ಜನಪದವೆಲ್ಲ ಒಂದೆ ಬಣ್ಣ
ಮುದುಕ ಮುದುಕಿ ಯುವಕ ಯುವತಿ ಚಿಣ್ಣ
ಒಳಕಲ್ಲಿಗೆ ಕಡ್ಡಿ ಇಟ್ಟು ಕುಟ್ಟಿದ ಭತ್ತದ ಚಿತ್ತ
ಭಯಬಿಟ್ಟು ಹೊಸ ಹುಟ್ಟು ಪಡೆದಂತೆ ನೋಡುತ್ತದೆ:
ತಮ್ಮ ಪ್ರತಿನಿಧಿಯೊಡ್ಡೋಲಗದ ಪ್ರಾರಂಭ ಪುಳಕ ಪಥ
ತಾಳ ತುಡಿಯುತ್ತದೆ: ತಕಥೈ ತದ್ದಿತೋಂಥ
೨
ಏನು ಗಡಿಬಿಡಿ!
ದಾರಿಬಿಡಿ ದಾರಿಬಿಡಿ ದೇವರ ಗುಡಿಯಿಂದ ಬಂದ ಕೌ
ರವೇಶ್ವರ; ಸಿರೀಂಜು ಶೈಲಿಯಲ್ಲೆಳೆದ ಜನರ ಉಸಿರ
ರಕ್ಕಸರೆಕ್ಕೆಯಲ್ಲಿ ರಾಚುತ್ತ ಬಂದಂಥ ಭೂರಿ ಕಿರೀಟದ ಭಾರಿಭೂಪ
ಥಣಮಿಣಿಯ ಉಡುಪಿನೊಳಗೆ ಝಣಝಣಿಸುವ ದುರ್ಯೊ ಧನಕುರು ಕುಲಚಕ್ರವರ್ತಿ ಬಹುಪರಾಕು ಬಹುಪರಾಕು!
ಬಂದವನೆ ಭೋರೆಂದು ಬಯಲಾಟದಟ್ಟಕ್ಕೆ ನೆಗೆದ ರಭಸಕ್ಕೆ
ಭಾಗವತ ನಿಟ್ಟುಬಿದ್ದ; ಕೆಳಗೆ ಬಿದ್ದ
ತಾಳ ಹಿಡಿದು ಈಡುಗಾಯಿ ಹೊಡೆದ
ಈಗ ಬಂದವರು ದಾರೆಂದು ಕೇಳುವುದಕ್ಕೂ ಬಿಡದೆ ಕುಣಿದು ಕುಪ್ಪಳಿಸುವ ಕೌರವ
ನ ಕಾಲು ಕಂಡು ಕಾಲ ನೋಡಿಕೊಂಡ; ಕಾಲ ಮಿಂಚಿದ್ದ ಕಂಡುಕೊಂಡ
ಪಸುಗೆ ಹಾಕಿ ಅಮುಕಿಬಿಟ್ಟ ಸ್ಪ್ರಿಂಗಿನಂತೆಗರಿ ಚಾಟಿಯಿಲ್ಲದ ಬುಗುರಿ
ವಾಲ್ಕೆನೊಬಾಯಿಯ ಬಾಜಾಬಜಂತ್ರಿಯಲ್ಲಿ ಹಸಿರು ಅಟ್ಟ-
ದ ಬಸಿರಲ್ಲಿ ಬೆವರು ತರಿಸಿದ; ತಾಳಗಳಿಗೆ ತೌಡು ತಿನ್ನಿಸಿದ
ದುಡ್ಡಿದ್ದ ದಡ್ಡ ಬಂಧುಗಳು ಎದ್ದೆದ್ದು ಬಂದು ಮೆಡಲುಹಾಕಿ ದೊಡ್ಡಸ್ತಿಕೆ ಕಿಸಿದು
ಮೈದುಂಬಿಸಿದಾಗ ಹೇಗೆ ನಿಂತೀತು ಕುಣಿತ?
ಹೇಗೆ ಮುಂದುವರಿದೀತು ಭಾರತ?
ಆಕಾಶಕ್ಕೇ ಅದುರುಬಂದು ಹನಿಯೊಡೆದು ತೊಟ್ಟಿಕ್ಕಿತು ಬೆವರ ಬೆಳದಿಂಗಳು
ಮಾಳಿಗೆಮನೆಗೆ ಕನ್ನ ಬಿದ್ದು ಮುರುಕು ಮಡಕೆಯ ಲೋಳಿಲೋಳಿ ಅಳು
ಬಂದಾಗ ಬಂಡವಾಳದ ತಾಟು ತುಂಬಿದ ಊಟ
ಕಾಲ ಎಷ್ಟಾದರೇನು ಕುಣಿತ ಸಾಗೇ ಇತ್ತು ಅಂತು
ಅಬ್ಬ! ಮೈಮರದಲ್ಲಿ ಹಣ ಹೂಬಿಟ್ಟು ನಿಂತ ವೈಖರಿ! ಗದಾಪ್ರಹಾರಿ ಅವರಿವರ ಹಣೆಬರಹದ ಹಲಗೆ ಮೇಲೆ ಮೃತ್ಯುಶಾಸನ ಬರೆವ ಬಣ್ಣದ ಹೆಜ್ಜೆ
ರೋಮರೋಮಗಳಲ್ಲಿ ಕಾಂಚನ ಕಾಮ ಕೆನೆದು ಎಲ್ಲೆಲ್ಲಿಂದಲೊ ಬಂದದ್ದು
ಮರವಾದದ್ದು ಇಲ್ಲಿ; ಬಿಳಲ ಕಪ್ಪುಗುರುಳು ಕೆದರಿದ್ದು ಇಲ್ಲಿ;
ಇದಕ್ಕೆ ಕೊನೆಯೆಲ್ಲಿ?
೩
ಬಂಡವಾಳದ ಬೆಟ್ಟದಲ್ಲಿ ಬಂಡೆಕರಡಿಗಳು ಬೆದರಿಸುತ್ತವೆ
ಚೀಟಿಸೀರೆಯ ಹಸಿರು ಕಂಡರೆ ಪರಪರನೆ ಹರಿಯುತ್ತವೆ
ಡಾಣಾಡುಂಗುರ ವಿಷಯ ಗೊತ್ತಲ್ಲ?
ಅದೇ ದೌಪದಿ ಕಿತ್ತಲೆಯ ಸಿಪ್ಪೆ ಸುಲಿತ
ಈಗ ಸಿಪ್ಪೆಯಿಲ್ಲದ ಕಿತ್ತಲೆ; ಕತ್ತಾಳೆ ಕಠಿಣ ಕತ್ತಲೆ
ಬಾಳಪಗಡೆಯಲ್ಲಿ ಬಿಡಿಗಾಸಿಗೂ ಬರಬಂದಾಗ
ಪತ್ನಿಯನ್ನೇ ಪಣವಿಡುವ ಪುಣ್ಯವಂತರಲ್ಲವೆ ನಾವು?
ಆಹಾ!
ವನವಾಸದೊಣಗಿನಲ್ಲಿ ಸತ್ಯಸಂಧರ ಕತೆಯ ಸಮಾಧಾನ ಗೊಣಗು;
ಕತ್ತೆ ಹೊತ್ತ ಬಟ್ಟೆಬರೆಯನ್ನು ಕೆರೆಯ ಕಲಸು ತೀರ್ಥದಲ್ಲಿ ಅದ್ದಿ
ತೆಗೆದು ಹಾಕುವ ಕೆಲಸ
ಇದ್ದಬದ್ದದ್ದೆಲ್ಲ ಹದ್ದುಪಾಲಾದಾಗ ಬೇರಿಳಿದ ಭೀಮಬವಣೆಯ ಬದುಕು
ಕತೆಗೆ ಬಗ್ಗೀತೆ? ಮುಗ್ಗಿದ ಮಾತಿಗೆ ಮಗ್ಗಿಹೇಳುವ ಮಗುವಾದೀತೆ?
ಬಿಸಿಭವಿಷ್ಯದ ಬೋರು ಹೊಡೆಯುತ್ತ ತಂಗಳು ತಂದಿಟ್ಟರೆ ತಿಂದೀತೆ?
ಏನಾದರೇನು ನಾವು ಧರ್ಮರಾಜನ ಒಕ್ಕಲಲ್ಲವೆ?
ಧರ್ಮದೊಡ್ಡಿಯ ಸವಕಲು ಶಿಲ್ಪಗಳ ಮುಂದೆ ಪುಕ್ಕಲಲ್ಲವೆ?
ಯಾಕೆ ಚಿಂತೆ? ಕಪ್ಪು ಕರಗಿಸುವ ಕುಲುಮೆಕೃಷ್ಣ ಇಲ್ಲವೆ?
ಓಂ ಶಾಂತಿಃ ಶಾಂತಿಃ ಶಾಂತಿಃ
ಮೈನೆರೆದು ಹತ್ತಾರು ವರ್ಷವಾದರೂ ಮದುವೆಯಿಲ್ಲದ ಸಂ-
ಯಮ ಶೀಲಕ್ಕೆ ಎಷ್ಟು ದಿನ ಮಹಾಶ್ವೇತೆಯ ಮಜಲು?
ಬಿರಿದ ಬವಣೆ ಬಾಳಲ್ಲಿ ಬಾಯ್ತಗೆದ ಭೀಮ
ಬಿರಟೆ ಬಡಿಸಿಕೊಂಡು ನಿಂತದ್ದು ತಾನೆ ಎಷ್ಟು ದಿನ?
ಇರಲಿಷ್ಟು ಹಳ್ಳಿ ದಕ್ಕದಿದ್ದಾಗ ಕಡೆಗೆ ತುಕ್ಕುಹಿಡಿದ ಮಣ್ಣಿಗೆ ತಕ್ಕಿಬಿದ್ದದ್ದು ಒಂದೇ:
ಮಹಾಭಾರತ ಕುರುಕ್ಷೇತ್ರ
ಬವಣೆಭೀಮ ಬೆದೆಗೆ ಬಂದ ಕ್ಷಾತ್ರ
ಭಾಗವತ ಹೊತ್ತಾಯಿತೆಂದು ಕತ್ತೆತ್ತಿ ನೋಡಿದ:
ಪೂರ್ವ ಆಕಳಿಸಿದ ಬಾಯಲ್ಲಿ ಕೆಂಪುಬಣ್ಣ
ಬೆಳಕಿಗೆ ಕರೆನೀಡುವ ಚಿಲಿಪಿಲಿ ಚಿಣ್ಣ
ಆತುರಾತುರದಲ್ಲಿ ಅಟ್ಟಹತ್ತಿದ ಪಾತ್ರಗಳ ಮಟ್ಟು ಮಾತುಗಳಿಗೆ
ಭಾಗವತ ಕತ್ತರಿಹಾಕಿದ; ಎಷ್ಟಾದರೂ ಭಾಗವತ
ಮುಗಿಸಬೇಕಲ್ಲ ಮಹಾಭಾರತ.
ಹೊತ್ತಾಯಿತೆಂದು ರೋಸಿ ಜನ ಎದ್ದು ನಿಂತಾಗ
ಅಟ್ಟದಲ್ಲಿ ಪಕ್ಷ ಪ್ರತಿಪಕ್ಷವೇ ಪತ್ತೆಯಾಗದ ಪ್ರಗತಿಶೀಲರ ಪವಾಡ!
ಸುತ್ತ ಹತ್ತಾರು ಹದ್ದುಗಳ ಕೆಂಚನ್ನ ಕುರುಡು ನಖಗಳ ಚಕ್ರಬಿಂಬವ್ಯೂಹ
ಮಧ್ಯೆ ಅಭಿಮನ್ಯುದೇಹ!
ರಕ್ಕಸಕೊಕ್ಕು ಇಷ್ಟಿಷ್ಟೇ ತಳಮಟ್ಟ ಹೀರಿ ಬತ್ತಿಹೋದ
ಬಂಜೆಭೂಮಿ ಬಸಿರಾದೀತೆ?
ತೆನೆಯುಸಿರು ತೊನೆದಾಡೀತೆ ?
*****