ಒಂದು ಕಾಲದಲ್ಲಿ
ಭರಾಟೆಯಿಂದ ಹೇರು ಪೇರು ಬಂದು ಬಿದ್ದ ಹೊನ್ನು
ಒಡೆದು ವಿಂಗಡಿಸದ ಕಾತರ ಆಸೆ ಉತ್ಸಾಹ
ಮಡುಗಟ್ಟಿ ಆಹಾ!
ಯಾವ ಗಿಲೀಟಿಗೂ ಪಕ್ಕಾಗದೆ ರನ್ನಗದ್ದುಗೆಯ
ಕನಸಿನುಣಿಸು; ಭವ್ಯದೆದೆ-
ಯಲ್ಲಿ ವಾಸ್ತವ್ಯ ಮಾಡಿದ್ದ ಹಂಪೆ
ನನ್ನ ಮನಸ್ಸು ಹೊನ್ನ ಹಂಪೆ.
ದೇವರು ದಿಂಡಿರು ಭಯ ಭಕ್ತಿ ಎಂದು ನೆಲತಟ್ಟು ಸಮಮಾಡಿ
ಆ ಈ ಶಿಲ್ಪಿಗಳು ಕಡೆದ ಮೂರ್ತಿಗಳಿಗೆ ಮನೆಮಾಡಿ
ಮುಗಿಲ ಮೇರು ಮೆರೆಯುತ್ತಿದ್ದುದಕ್ಕೆ
ಕಾದಿತ್ತು ಕೊಡಲಿ ಪೆಟ್ಟು
ಕಳಚಿತ್ತು ಕುಸುರಿ ಕಟ್ಟು
ಜುಟ್ಟು
ಹಿಡಿದು ಅಳ್ಳಾಡಿಸಿತ್ತು ಕಾಲ.
ದುಷ್ಟಶಿಕ್ಷಣ ಶಿಷ್ಟರಕ್ಷಣ ಎಂದು ಮಹಾ ಆದರ್ಶದ ಹೊರೆ
ಹೊತ್ತು ಬರ್ರನೆ ಭೋರ್ಗರೆಯುವ ತೊರೆ-
ಯಾಗಿ ಹಿರಣ್ಯಗರ್ಭದ ಗುಟ್ಟೆಲ್ಲ ರಟ್ಟು ಮಾಡಿ
ಆಗ್ರತೆಯ ಪರಾಕು ಗಿಟ್ಟಿಸಿದ ಉಗ್ರನರಸಿಂಹ
ಭಿನ್ನಭಿನ್ನ ; ಕಂಡೆ
ನನ್ನ ಮನಸ್ಸು-ಬಯಲುಬಂಡೆ.
ಎಲ್ಲ ಲೂಟಿಗೂ ಲೈಸನ್ಸು ಕೊಟ್ಟು ಇನ್ನೂ ಉಳಿದಿತ್ತು
ಅಲ್ಲೊಂದು ಇಲ್ಲೊಂದು ದಿಬ್ಬ ಗೋಪುರ
ಗೆದ್ದಲು ತಿಂದ ಮರ
ಅರೆಬರೆ ಅಂಗಾತ ಅನಾಥಮರ್ತಿ ಜೀವಿ ಕಂದರ
ಕೆದಕಿ ಬೆದಕಿ ಕೂಡಿಸಬೇಕೆಂಬರಿವು ಬಲಿತು
ಒಂದು ಕಡೆ ಕೂಡಿದ್ದಾಗಿದೆ ನಿಲ್ಲಿಸಿ ಮಲಗಿಸಿ
ರಕ್ಷಿಸಿ ಮರ್‍ಯಾದೆಗೆ ತಕ್ಕಂತೆ.
*****