ಸ್ಫೋಟದ ಶಬ್ದದೊಡನೆಯೇ ನಿಂತವು ಸೈಕಲ್ ಮೋಟರುಗಳು. ಅದರ ಸವಾರರು ಹಿಂತಿರುಗಿ ನೋಡಿದಾಗ ಆ ದೃಶ್ಯ ಅವರುಗಳ ಮೈ ನಡುಗಿಸಿತು. ಕೂಡಲೇ ರಾಮನಗರಕ್ಕೆ, ಪಟ್ಟಣದ ಮುಖ್ಯಾಲಯಕ್ಕೆ ಮೆಸೇಜ್‌ಗಳು ಹೋದವು. ವಾಹನಗಳನ್ನು ಹಿಂತಿರುಗಿಸಿ ಬಂದ ಅವರು ದೂರದಿಂದಲೇ ಆ ಘೋರ ದೃಶ್ಯವನ್ನು ನೋಡುತ್ತಾ ನಿಂತರು. ಸುಡುತ್ತಿದ್ದ ಕಾರಿನ ಶಾಖದ ಕಾರಣ ಅವರು ಹತ್ತಿರ ಹೋಗುವಹಾಗಿರಲಿಲ್ಲ. ಆ ಭೀಕರ ದೃಶ್ಯವನ್ನು ನೋಡುತ್ತಾ ಸ್ತಂಭೀಭೂತನಾದಂತೆ ನಿಂತುಬಿಟ್ಟಿದ್ದ ಅವನ ಬಂಟ. ಹಾಗೇ ಹಲವು ಕ್ಷಣಗಳು ಕಳೆದ ಮೇಲೆ ತಾನು ಒಮ್ಮೆಲೆ ಏಕಾಕಿಯಾಗಿ ಹೋಗಿರುವಂತಹ ಭಾವ ಹುಟ್ಟಿತವನಲ್ಲಿ. ಕಾರಿನಲ್ಲಿ ದೇವಿಯಾದವನಲ್ಲದೇ ಅವನ ತೀರಾ ಹತ್ತಿರದ ನಾಲ್ವರು ಬಂಟರಿದ್ದರು. ಅವರಲ್ಲಿ ಒಬ್ಬನಾದರೂ ಉಳಿದಿದ್ದರೆ ತಾನು ಮತ್ತೆ ವ್ಯವಹಾರವನ್ನು ಸರಿಪಡಿಸಲು ಶ್ರಮಿಸಬಹುದಾಗಿತ್ತು. ಈಗ ಮುಂದೆ ತಾನೇನು ಮಾಡಬೇಕೆಂಬುವುದು ತೋಚದಂತಹ ಸ್ಥಿತಿ. ಈ ಕಲ್ಲಕ್ಕ ಸಾಮಾನ್ಯ ಹೆಣ್ಣಲ್ಲ ಎಂದುಕೊಳ್ಳುತ್ತಿದ್ದ ಇನ್ಸ್‌ಪೆಕ್ಟರ್, ಅವಳ ತಂಡದವರು ಬಂಡೇರಹಳ್ಳಿಯ ಆಸುಪಾಸಿನಲ್ಲೇ ಇರಬಹುದೆಂದು ಇಡೀ ಪೋಲೀಸ್ ಖಾತೆ ನಂಬಿತ್ತು.
ದೇವನಹಳ್ಳಿಯ ಪ್ರತಿ ಮನೆಯನ್ನೂ ನಡುಗಿಸಿತ್ತು ಆ ಭಯಂಕರ ಸದ್ದು. ಅಲ್ಲಿನ ಎಲ್ಲರಿಗೂ ಅದ್ಯಾರ ಕೆಲಸವೆಂಬುವುದು ಗೊತ್ತಾಗಿತ್ತು. ಅವರಿಗೆಲ್ಲಾ ಎಲ್ಲಿಲ್ಲದ ಭಯ, ಕಲ್ಲಕ್ಕನಿಂದಲ್ಲ ಪೋಲೀಸಿನವರಿಂದ. ಅನುಮಾನ ಬಂದ ಪ್ರತಿ ವ್ಯಕ್ತಿಗೂ ಅವರು ಕೊಡುವ ಹಿಂಸೆಯಿಂದ. ಪಾಪ ಆ ಹಳ್ಳಿಗರು ಯಾರು ಮರಣಿಸಿರಬಹುದೆಂಬುವುದು ಊಹಿಸುವ ಸ್ಥಿತಿಯಲ್ಲಿ ಇರಲಿಲ್ಲ. ಅದಕ್ಕೆ ಯಾವ ಮನೆಯದಾಗಲಿ, ಗುಡಿಸಲಿನದಾಗಲಿ ಬಾಗಿಲು ತೆಗೆದುಕೊಂಡಿರಲಿಲ್ಲ.
ಅಪಘಾತದ ಮೊದಲ ಹೊಡೆತದಿಂದ ಚೇತರಿಸಿಕೊಂಡ ದೇವಿಯ ಬಂಟ ಸುತ್ತೂ ನೋಡಿದ. ಅವನಿಗೀಗ ತಾವು ಗಂಟೆಗಟ್ಟಲೆ ಕಾಯಬೇಕೆಂಬುವುದು ಗೊತ್ತಾಗಿತ್ತು. ಒಂದು ಹೋಟೆಲಿನ ಅಂಗಡಿ ಅವನ ಗಮನ ಸೆಳೆಯಿತು. ಅತ್ತ ಹೆಜ್ಜೆ ಹಾಕಿದ. ಅವನನ್ನು ಅನುಸರಿಸಿದ ಇನ್ಸ್‌ಪೆಕ್ಟರ್. ತನ್ನ ಎಲ್ಲಾ ಕೋಪವನ್ನು ಕಾರುವಂತೆ ಆ ಹೋಟಲಿನ ಬಾಗಿಲು ಬಡಿದ. ಇಂತಹದು ಆಗುವದೆಂದು ನಿರೀಕ್ಷಿಸಿದ ಅದರ ಒಡೆಯ ಕೂಡಲೇ ಬಾಗಿಲು ತೆಗೆದ. ಪೋಲಿಸಿನವರ ಕೋಪಕ್ಕೆ ಗುರಿಯಾಗುವುದು ಅವನಿಗೆ ಇಷ್ಟವಿರಲಿಲ್ಲ.
“ಎರಡು ಕುರ್ಚಿಗಳು ಹಾಕು. ಕಾಫಿ ಮಾಡು” ಅಪರಾಧಿಯೊಬ್ಬನನ್ನು ಸಂಬೋಧಿಸುತ್ತಿರುವಂತೆ ಆಜ್ಞಾಪಿಸಿದ ಇನ್ಸ್‍ಪೆಕ್ಟರ್, ಲಗುಬಗೆಯಿಂದ ಕುರ್ಚಿಗಳನ್ನು ತಂದು ಹಾಕಿದ ಹೋಟೆಲಿನವ, ಭಯಪಡುತ್ತಲೇ ವಿನಯದಿಂದ ಹೇಳಿದ.
“ಹಾಲಿಲ್ಲ ಸ್ವಾಮಿ”
“ಎಲ್ಲಿಂದಲಾದರೂ ತಾ! ಇಡೀ ಹಳ್ಳಿಯಲ್ಲೇ ಹಾಲಿಲ್ಲವೇ!” ಗರ್ಜಿಸಿದ ದೇವಿಯಾದವನ ಬಂಟ.
“ಸರಿ ಸ್ವಾಮಿ” ಎಂದ ಹೋಟೆಲಿನವ ಹಾಲಿಗಾಗಿ ಹುಡುಕಾಟ ಆರಂಭಿಸಿದ. ಅವನಿಗೆ ಕಲ್ಲಕ್ಕನಂತಹವರು ಇನ್ನೂ ಹತ್ತು ಜನ ಇರಬೇಕೆನಿಸಿತು.
ಒಂದು ಗಂಟೆಯನಂತರ ರಾಮನಗರದಿಂದ ಫೈರ್ ಇಂಜಿನ್‌ಗಳೆರಡು ಬಂದವು. ಆಗಲೇ ರೋಡಿನ ಆ ಭಾಗದಲ್ಲಿ ವಾಹನಗಳ ಓಡಾಟ ನಿಂತುಹೋಗಿತ್ತು. ಪಟ್ಟಣಕ್ಕೆ ಹೋಗುವ ರಾಮನಗರಕ್ಕೆ ಹೋಗುವ ವಾನಹಗಳು ಸುತ್ತು ಬಳಸು ದಾರಿಯನ್ನು ಉಪಯೋಗಿಸಲಾರಂಭಿಸಿದ್ದವು. ಇನ್ನೂ ಉರಿಯುತ್ತಿದ್ದ ವಾಹನವನ್ನು ನಂದಿಸುವ ಕೆಲಸ ಆರಂಭಿಸಿದ್ದವು ಫೈರ್ ಇಂಜಿನ್‌ಗಳು.
ರಾಮನಗರದಿಂದ ಕಲೆಕ್ಟರ್ ಮತ್ತು ಎಸ್.ಪಿ. ತಮ್ಮ ತಮ್ಮ ಸಹಾಯಕರೊಡನೆ ಬಂದ ಅರ್ಧ ಗಂಟೆಯ ಬಳಿಕ ಪಟ್ಟಣದಿಂದ ಕಮೀಷನರ್, ಆಂಟೀ ರೆವಲ್ಯೂಷನರಿ ಸ್ಕ್ವಾಡ್ ಮುಖ್ಯಸ್ಥ ಶ್ರೀವಾಸ್ತವ ಮತ್ತು ಕೆಲ ರಾಜಕಾರಣಿಯರೂ ಬಂದಿದ್ದರು. ಬಂಡೇರಹಳ್ಳಿಯಲ್ಲಿದ್ದ ತೇಜಾನಿಗೆ ಈ ವಿಷಯವನ್ನು ಪಟ್ಟಣದಿಂದ ಸ್ಕ್ವಾಡ್‌ನ ಮುಖ್ಯಸ್ಥರು ತಿಳಿಸಿದ್ದರು. ರಾಮನಗರದ ಎಸ್.ಪಿ. ಸಾಹೇಬರು ಹೊಸದಾಗಿ ಬಂದ ಅವನಿಗೆ ಈ ವಿಷಯ ತಿಳಿಸುವುದು ಮುಖ್ಯವೆಂದುಕೊಂಡಿರಲಿಲ್ಲ. ಫೈರ್ ಇಂಜಿನ್ ಬಂದ ಕೆಲ ನಿಮಿಷಗಳ ನಂತರ ಬಂದ ಅವನು ಸುತ್ತಲಿನ ಪರಿಸರವನ್ನು ಪರೀಕ್ಷಿಸುವುದರಲ್ಲಿ ಮಗ್ನನಾಗಿದ್ದ. ರೋಡಿನ ಎರಡೂ ಕಡೆ ಕಾಡು, ಕಲ್ಲಕ್ಕನ ತಂಡದವರು ಯಾವ ಕಡೆಯಿಂದ ಬಂದು ಈ ಕೆಲಸ ಮಾಡಿಹೋಗಿದ್ದಾರೆಂಬುವುದು ಊಹಿಸುವದೂ ಕಷ್ಟ. ಅಲ್ಲಿನ ದೃಶ್ಯ ನೋಡಿದರೆ ಆರ್.ಡಿ.ಎಕ್ಸ್. ಉಪಯೋಗಿಸಿದ್ದಾರೆಂಬುವುದರಲ್ಲಿ ಸಂದೇಹವಿಲ್ಲ. ತಾನು ಬಂಡೇರಹಳ್ಳಿಗೆ ಬಂದ ಮೊದಲನೆಯ ದಿನವೇ ಇಂತಹ ಘಟನೆ ಆಗಬೇಕೆ ಎಂದವನು ಅಂದುಕೊಳ್ಳುತ್ತಿದ್ದ.
ಫೈರ್ ಇಂಜಿನ್‌ಗಳು ಬಂದಾಗ ಹೋಟಲಿನ ಎದುರು ಕುಳಿತ ಇನ್ಸ್‌ಪೆಕ್ಟರ್ ಮತ್ತು ಯಾದವನ ಬಂಟ ಅಲ್ಲಿಂದ ಎದ್ದಿರಲಿಲ್ಲ. ಅವರು ತೇಜಾನನ್ನೂ ಗಮನಿಸಿದ್ದರು. ಪೋಲೀಸ್ ಜೀಪಿನಲ್ಲಿ ಬಂದ ಕಾರಣ ಅವನು ತಮ್ಮ ಖಾತೆಗೆ ಸೇರಿದವನೆಂದು ಗೊತ್ತಾಗಿತ್ತು ಇನ್ಸ್‌ಪೆಕ್ಟರ್‌ನಿಗೆ. ಅವನೊಡನೆ ಏನು ಮಾತಾಡುವುದೆಂಬ ತಾತ್ಸಾರದ ಕಾರಣ ಅವನು ತೇಜಾನ ಕಡೆ ಗಮನ ಕೊಡದಂತೆ ವರ್ತಿಸಿದ್ದ.
ಪಟ್ಟಣದಿಂದ ಬಂದ ಕಮೀಶನರ್ ಮತ್ತು ಸ್ಕ್ವಾಡಿನ ಮುಖ್ಯಸ್ಥರು ಬಂದ ಕೂಡಲೇ ಮೊದಲು ಅವನನ್ನೂ ಮಾತಾಡಿಸಲು ಹೋದಾಗ ಎಚ್ಚೆತ್ತಿದ್ದ ಯಾದವನ ರಕ್ಷಣೆಗಾಗಿ ಬಂದ ಇನ್ಸ್‌ಪೆಕ್ಟರ್, ರಾಮನಗರದ ಕಲೆಕ್ಟರ್ ಮತ್ತು ಎಸ್.ಪಿ.ಯರಿಗಿಂತ ಈ ವ್ಯಕ್ತಿಯೇ ಹೆಚ್ಚಿನವನ್ನು ಎಂಬ ಭಾವ ಹುಟ್ಟಿತ್ತು.
ಫೈರ್ ಇಂಜಿನ್‌ಗಳು ತಮ್ಮ ಕೆಲಸ ಮುಗಿಸಿ ಸರಿಯುತ್ತಿದ್ದಂತೆ ಪ್ರಖರ ಟಾರ್ಚುಗಳನ್ನು ಹಿಡಿದು ಕಾರಿನ ಅವಶೇಷವನ್ನು ನೋಡಲಾರಂಭಿಸಿದರು ಅಲ್ಲಿದ್ದ ಅಧಿಕಾರಿಯರು.
ಕಾರಿನಲ್ಲಿ ದೇವಿಯಾದವರನ್ನು ಸೇರಿ ಆರು ಜನರಿದ್ದರಂತೆ. ಎಲ್ಲರನ್ನೂ ಉದ್ದೇಶಿಸಿ ಎಂಬಂತೆ ಹೇಳಿದರು ಕಲೆಕ್ಟರ್ ಸಾಹೆಬರು. ಅದಕ್ಕೆ ಅಲ್ಲಿದ್ದವರು ಯಾರೂ ಯಾವ ರೀತಿಯಲ್ಲೂ ಪ್ರತಿಕ್ರಿಯಿಸಲಿಲ್ಲ. ತಮ್ಮ ಅನ್ವೇಷಣೆಯಲ್ಲಿ ತೊಡಗಿದ್ದರು. ಕಾರಿನಲ್ಲಿದ್ದವರ ದೇಹಗಳು ತುಂಡು ತುಂಡಾಗಿ ಸುತ್ತಮುತ್ತಣ ಪ್ರದೇಶದಲ್ಲೆಲ್ಲಾ ಹರಡಿದಂತೆ ಕಂಡುಬಂತು. ಒಂದು ಕಡೆ ಕೈ ಇದ್ದರೆ, ಇನ್ನೊಂದು ಕಡೆ ಕಾಲು, ಒಂದು ಕಡೆ ರುಂಡವಿದ್ದರೆ ಮತ್ತೊಂದು ಕಡೆ ಅರೆಬೆಂದ ಮಾಂಸದ ತುಂಡು, ಸುಟ್ಟ ಆವಶೇಷಗಳು ತಮ್ಮ ಗುರುತನ್ನೇ ಕಳೆದುಕೊಂಡಿದ್ದವು. ಆ ಪ್ರದೇಶದಲ್ಲೆಲ್ಲಾ ದೇವಿಯಾದವನೇ ತುಂಡು ತುಂಡಾಗಿ ಹರಡಿ ತನ್ನ ಕೊನೆಯ ತಾಂಡವನೃತ್ಯವನ್ನು ಆಡಿದಂತೆ ಕಂಡುಬರುತ್ತಿತ್ತು. ಆ ಕೆಲಸ ಮುಗಿಸಿದ ಅಧಿಕಾರ ವೃಂದ ಮತ್ತೆ ಹಳ್ಳಿಯ ಕಡೆ ನಡೆಯತೊಡಗಿದಾಗ ಸ್ಕ್ವಾಡ್‌ನ ಮುಖ್ಯಸ್ಥರ ಗಮನ ದೇವಿಯಾದವನ ಬಂಟನ ಕಡೆ ಹರಿಯಿತು.
“ಇವರಾರು?” ಕೇಳಿದರವರು.
“ದೇವಿಯಾದವರ ಪಾರ್ಟಿಯವರು. ಇವರೂ ನಮ್ಮ ಇನ್ಸ್‍ಪೆಕ್ಟರರೊಡನೆ ಅವರಿಗೆ ಎಸ್ಕಾರ್ಟ್ ಆಗಿ ಬರುತ್ತಿದ್ದರು” ವಿವರಣೆ ನೀಡಿದ ಇನ್ಸ್‌ಪೆಕ್ಟರ್.
ಆ ಮಾತು ಮುಗಿಯುತ್ತಿದ್ದಂತೆ ಅವನನ್ನು ಒಂದು ಹುಳುವನ್ನು ನೋಡುವಂತೆ ನೋಡಿ ಕಟುವಾದ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ.
“ನಿಮಗೀಗ ಇಲ್ಲೇನೂ ಕೆಲಸವಿಲ್ಲ. ನೀವು ಹೋಗಬಹುದು.”
ಅವರ ಮಾತು ಆಜ್ಞೆಯಂತೆ ಧ್ವನಿಸಿತು. ಅವಮಾನ ಸಿಟ್ಟುಗಳು ತುಂಬಿಬಂತವನ ಮುಖದಲ್ಲಿ. ಆದರೆ ಏನೂ ಮಾಡುವ ಹಾಗಿಲ್ಲ. ತನ್ನ ಒಡೆಯ ಬದುಕಿದ್ದರೆ ತನ್ನದೀಗತಿ ಆಗುತ್ತಿರಲಿಲ್ಲವೆಂದುಕೊಂಡ ಅವನು ತನ್ನ ವಾಹನದ ಕಡೆ ನಡೆಯತೊಡಗಿದ. ಅವನು ಹೋದನಂತರ ಮತ್ತೆ ತಾವೇ ಮಾತಾಡಿದರು ಸ್ಕ್ವಾಡಿನ ಮುಖ್ಯಸ್ಥರು.
“ಈ ಹಳ್ಳಿಯ ಗಣ್ಯರ ಮನೆ ಎಲ್ಲಿದೆ?”
“ಶ್ಯಾಮರಾವ್ ಪಟುವಾರಿಯವರ ಮನೆ ಇಲ್ಲೇ ಇದೆ. ಅವರು ನಮಗೆ ಸಹಾಯ ಮಾಡಬಹುದು” ಕೂಡಲೇ ಹೇಳಿದ ರಾಮನಗರದ ಎಸ್. ಪಿ.
“ಎಂತಹ ಸಹಾಯ… ತೇಜಾ ನೀನವರೊಡನೆ ಮಾತಾಡು. ಈಗಿಂದೀಗಲೇ ನಾವು ಕೆಲವು ಮುಖ್ಯ ನಿರ್ಣಯಗಳನ್ನು ತೆಗೆದುಕೊಳ್ಳಬೇಕು. ನಮಗವರ ಮನೆಯಲ್ಲಿ ಈ ಹೊತ್ತಿನಲ್ಲಿ ಕೂತು ಮಾತಾಡಲು ಅವಕಾಶ ಒದಗಿಸಿಕೊಡಲು ಸಾಧ್ಯವೇ ಕೇಳು” ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು.
“ಅದರಲ್ಲಿ ಅವರನ್ನು ಕೇಳುವುದೇನು ಬಂತು. ನಾ ಹೇಳಿದರೆ…”
“ನೀವು ತೇಜಾನಿಗೆ ಬರಿ ಮನೆ ತೋರಿಸಿ ಅಷ್ಟೇ! ಅವನೇ ಎಲ್ಲಾ ಮಾತಾಡುತ್ತಾನೆ. ಯಾರೂ ಇಲ್ಲಿ ಪೋಲೀಸ್ ಖಾತೆಯ ಅನಿಯಮಿತ ಅಧಿಕಾರ ತೋರಿಸುವ ಅವಶ್ಯಕತೆ ಇಲ್ಲ” ಎಸ್.ಪಿ.ಯವರು ಮಾತು ಮುಗಿಸುವ ಮುನ್ನ ಖಡಾಖಂಡಿತ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು. ಎಸ್.ಪಿ. ಯವರೊಡನೆ ತೇಜಾ ಮುಂದೆ ನಡೆಯಲಾರಂಭಿಸಿದಾಗ ಕಮೀಶನರ್ ಒಬ್ಬರಿಗೆ ಮಾತ್ರ ಕೇಳಿಸುವಂತೆ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು.
“ಹಿಂದೆ ರಾಜಕಾರಣಿಗಳ ಹಿಂಡಿದೆ. ಅವರು ನಮ್ಮ ಜತೆ ಬರುವುದು ಬೇಡ. ಕ್ರಾಂತಿಕಾರಿಯರನ್ನು ಹಿಡಿಯಲು ನಾವು ಒಂದು ಗುಪ್ತಸಮಾವೇಶ ನಡೆಸುತ್ತಿರುವುದಾಗಿ ಹೇಳಿ ಅವರನ್ನು ಕಳಿಸಿಬಿಡಿ”
ಆ ಕೆಲಸ ಮಾಡಲು ಹಿಂದುಳಿದರು ಕಮೀಶನರ್ ಸಾಹೇಬರು. ಅಲ್ಲಿಗೆ ಆ ಸಮಯದಲ್ಲಿ ಬಂದ ಹೆಚ್ಚು ಜನ ರಾಜಕಾರಣಿಯರು ದೇವಿಯಾದವನ ಪಾರ್ಟಿಗೆ ಸೇರಿದವರಿದ್ದರು. ಅವರು ವಾದವಿವಾದಕ್ಕೆ ಇಳಿದಾಗ ಸಂಯಮದಿಂದ ಅವರಿಗೆ ಪರಿಸ್ಥಿತಿಯ ಗಂಭೀರತೆಯನ್ನು ವಿವರಿಸಿದರು ಕಮೀಷನರ್ ಸಾಹೇಬರು. ಕೊನೆಗೂ ಮನಸ್ಸಿಲ್ಲದ ಮನಸ್ಸಿನಿಂದ ಅವರ ಮಾತನ್ನು ಒಪ್ಪಿಕೊಂಡರು ರಾಜಕಾರಣಿಯರು.
ಅವರ ಬರುವಿಗಾಗೇ ಕಾದಂತೆ ತೆಗೆದುಕೊಂಡಿತು ಪಟುವಾರಿಯವರ ಮನೆಯ ದೊಡ್ಡ ಬಾಗಿಲು, ಆಳು ಅವರಿಗೆ ಕೂಡುವಂತೆ ಹೇಳಿ ತನ್ನ ಒಡೆಯರನ್ನು ಕರೆಯಲು ಹೋದ. ಆಂಟಿ ರೆವಲ್ಯೂಷನರಿ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವರ ಪರಿಚಯ ಚೆನ್ನಾಗಿತ್ತು ರಾಮನಗರದ ಎಸ್.ಪಿ.ಯವರಿಗೆ ಅವರು ಹೇಳಿದಂತೆ ಕೇಳುವುದೇ ಉತ್ತಮವೆಂದುಕೊಂಡು ತೇಜಾನನ್ನು ಅಲ್ಲಿ ಬಿಟ್ಟು, ಮಿಕ್ಕವರನ್ನು ಸೇರಿಕೊಳ್ಳಲು ಹೋದರವರು.
ಸಿಲ್ಕಿನ ಪಂಚೆ, ಜುಬ್ಬಾ ತೊಟ್ಟು ಬಂದ ಪಟುವಾರಿಯವರ ವಯಸ್ಸು ಎಪ್ಪತ್ತನ್ನು ದಾಟಿರಬಹುದು. ಕೆಂಪನೆಯ ಮುಖದಲ್ಲಿ ಎಂತಹದೋ ಆಕರ್ಷಣೆ. ಅವರು ಹತ್ತಿರ ಬರುತ್ತಿದ್ದಂತೆ ನಿಂತ ತೇಜಾ ವಿನಯವಾಗಿ ಹೇಳಿದ.
“ನಿಮ್ಮನ್ನು ಈ ಹೊತ್ತಿನಲ್ಲಿ ಎಬ್ಬಿಸುತ್ತಿದ್ದೀವಿ ಕ್ಷಮಿಸಿ…”
“ಕೂಡಿ! ಕೂಡಿ! ನೀವ್ಯಾರಾದರೂ ಬಂದೇ ಬರುತ್ತೀರೆಂದು ನನಗೆ ಗೊತ್ತಿತ್ತು… ನಿವ್ಯಾರು ಗೊತ್ತಾಗಲಿಲ್ಲ.”
“ಉತೇಜ್, ಇನ್ಸ್‌ಪೆಕ್ಟರ್ ಉತೇಜ, ಬೆಂಗಳೂರಿನಿಂದ ನಿನ್ನೆ ತಾನೆ ಬಂಡೇರಹಳ್ಳಿಗೆ ಬಂದೆ. ಎಲ್ಲಾ ಮುಖ್ಯ ಅಧಿಕಾರಿಯರೂ ಬಂದಿದ್ದಾರೆ. ನಾವಿಲ್ಲಿ ಅರ್ಧ ಮುಕ್ಕಾಲು ಗಂಟೆ ಒಂದು ಗೌಪ್ಯ ಮೀಟಿಂಗ್ ನಡೆಸಬೇಕೆಂದು ಕೊಂಡಿದ್ದೇವೆ. ಅದಕ್ಕೆ ನಿಮ್ಮಲ್ಲಿ…”
“ಅದಕ್ಕೇನಂತೆ ಬನ್ನಿ, ಇದು ದೊಡ್ಡ ಮನೆ ಪ್ರಶಸ್ತವಾದ ಕೋಣೆ ಇದೆ. ನೀವು ಬೆಳಗಿನವರೆಗೆ ಮಾತಾಡುತ್ತಾ ಕೂಡಬಹುದು. ಎಲ್ಲರನ್ನೂ ಕರೆದುಕೊಳ್ಳಿ” ಅವನು ಮಾತು ಮುಗಿಸುವ ಮುನ್ನ ಹೃದಯಪೂರ್ವಕವಾಗಿ ಹೇಳಿದರು ಪಟುವಾರಿಯವರು.
“ಧನ್ಯವಾದ! ಅವರಿಗೆ ಹೇಳುತ್ತೇನೆ” ಎಂದ ತೇಜಾ ಮನೆಯಿಂದ ಹೊರಬಿದ್ದ.
ನಿಧಾನವಾಗಿ ಮಾತಾಡುತ್ತಾ ಅತ್ತ ಕಡೆಯೇ ಬರುತ್ತಿದ್ದರು ಕಮೀಶನರ್, ಕಲೆಕ್ಟರ್, ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವ ಮತ್ತು ಎಸ್.ಪಿ. ಸಾಹೇಬರು, ತೇಜಾ ಅವರನ್ನು ಸೇರಿಕೊಂಡು ಮತ್ತೆ ಪಟುವಾರಿಯವರ ಮನೆಯ ಕಡೆ ನಡೆಯತೊಡಗಿದ.
ಅವರೆಲ್ಲರನ್ನೂ ಅಪರಾತ್ರಿಯಲ್ಲಿ ಆಹ್ವಾನಿಸುವಂತೆ ಮುಂಬಾಗಿಲಲ್ಲೇ ನಿಂತಿದ್ದರು ಪಟುವಾರಿ. ಅವರಿಗೆ ಕಲೆಕ್ಟರ್ ಮತ್ತು ಎಸ್.ಪಿ. ಸಾಹೇಬರ ಪರಿಚಯವಿದ್ದಂತಿತ್ತು. ತೇಜಾ ಅವರಿಗೆ ಮಿಕ್ಕಿಬ್ಬರನ್ನು ಪರಿಚಯಿಸಿದ. ಅವರೆಲ್ಲರನ್ನೂ ಅಟ್ಟದ ಮೇಲಿದ್ದ ಒಂದು ದೊಡ್ಡ ಕೋಣೆಗೆ ಕರೆದೊಯ್ದರವರು. ಅಲ್ಲಿ ಸೋಫಾ ಕುರ್ಚಿಗಳು ಓರಣವಾಗಿ ಜೋಡಿಸಿಡಲಾಗಿದ್ದವು. ಗೋಡೆಗಳಿಗಿದ್ದ ಶೆಲ್ಫ್‌ಗಳಲ್ಲಿ ದಪ್ಪ ದಪ್ಪನೆಯ ಗ್ರಂಥಗಳು. ಆಳು ಅಲ್ಲಿ ನೀರಿನ ದೊಡ್ಡ ತಂಬಿಗೆ ಮತ್ತು ಗ್ಲಾಸುಗಳನ್ನು ತಂದಿಟ್ಟು ಹೋದ. ಬಂದವರೆಲ್ಲಾ ಅಲ್ಲಿ ಕೂಡುತ್ತಿದ್ದಂತೆ ಹೇಳಿದರು ಪಟುವಾರಿ.
“ನೀವಿಲ್ಲಿ ಆರಾಮವಾಗಿ ಮಾತಾಡುತ್ತಾ ಕೂಡಬಹುದು! ಯಾರೂ ನಿಮ್ಮ ಮಾತನ್ನು ಕೇಳಿಸಿಕೊಳ್ಳುವುದಿಲ್ಲ. ನಿಮಗೇನಾದರೂ ಬೇಕಾದರೆ ಇವನನ್ನು ಕರೆಯಿರಿ. ಇವನ ಹೆಸರು ಮಲ್ಲ. ಕೆಳಗೇ ಇರುತ್ತಾನೆ.”
“ಧನ್ಯವಾದ” ಎಂದರು ಸ್ಕ್ವಾಡಿನ ಮುಖ್ಯಸ್ಥರು.
“ಅಂತಹ ಮಾತಾಡಬೇಡಿ, ಇದು ನನ್ನ ಕರ್ತವ್ಯ” ಎನ್ನುತ್ತಾ ಹೊರಟುಹೋದರವರು. ಅವರು ಹೋಗುತ್ತಿದ್ದಂತೆ ಬಾಗಿಲು ಹಾಕಿ ಅದಕ್ಕೆ ಬೋಲ್ಪನ್ನು ಎಳೆದ ತೇಜಾ.
“ಈ ಸ್ಫೋಟಕ್ಕೆ ಆರ್.ಡಿ.ಎಕ್ಸ್‌ನ್ನು ಬಳಸಲಾಗಿದೆ” ಹೇಳಿದರು ರಾಮನಗರದ ಎಸ್.ಪಿ. ಅವರ ಕಡೆ ಒಮ್ಮೆ ನೋಡಿ ಕಲೆಕ್ಟರ್ ಕಡೆ ತಿರುಗಿದರು ಕಮೀಶನರ್ ಸಾಹಬೇರು.
“ಈ ಕಲ್ಲಕ್ಕನ ಚಟುವಟಿಕೆ ದಿನದಿನಕ್ಕೆ ವಿಸ್ತಾರಗೊಳ್ಳುತ್ತಿದೆ. ಅದನ್ನು ಆದಷ್ಟು ಬೇಗ ನಿಯಂತ್ರಿಸದಿದ್ದರೆ ಇಡೀ ರಾಜ್ಯದಲ್ಲೇ ಅಲ್ಲೋಲಕಲ್ಲೋಲ ಪರಿಸ್ಥಿತಿ ಹುಟ್ಟಬಹುದು….”
“ಅದಕ್ಕಾಗಿ ನಾವು ನಮ್ಮಿಂದಾದಷ್ಟು ಮಾಡುತ್ತಿದ್ದೇವೆ! ಆದಷ್ಟು ಬೆಗ ಸಫಲರಾಗುವುದೆಂಬ ನಂಬಿಕೆಯೂ ನಮಗಿದೆ” ಕಮೀಷನರ ಮಾತನ್ನು ನಡುವೆಯೇ ತಡೆದು ಮಾತಾಡಿದರು ಎಸ್.ಪಿ. ಕಮೀಷನರ್ ಅವರ ಕಡೆ ಒಮ್ಮೆ ಕೋಪದಿಂದ ನೋಡಿ, ಕಲೆಕ್ಟರರ ಕಡೆ ತಲೆ ತಿರುಗಿಸಿದರು.
“ನೀವು ಮಾತಿನ ನಡುವೆ ಬಾಯಿ ಹಾಕುವ ಅಭ್ಯಾಸ ಬಿಡಿ! ಕೇಳಿದ ಪ್ರಶ್ನೆಗೆ ಉತ್ತರಿಸಿ ಅಷ್ಟೆ!” ಕಟುವಾದ ದನಿಯಲ್ಲಿ ಎಸ್.ಪಿ.ಯವರಿಗೆ ಅದೇಶಿಸಿದರು ಕಲೆಕ್ಟರ್. ತಪ್ಪು ಮಾಡಿದವರಂತೆ ಅವರು ತಲೆ ಕೆಳಹಾಕಿಕೊಂಡಾಗ ತಮ್ಮ ಮಾತನ್ನು ಮುಂದುವರೆಸಿದರು ಕಮೀಷನರ್.
“ನಮಗೆ ಬಂದ ಇಂಟೆಲಿಜೆನ್ಸ್ ರಿಪೋರ್ಟ್‌ಗಳ ಪ್ರಕಾರ ಕಲ್ಲಕ್ಕನ ಜನಪ್ರಿಯತೆ ಹೆಚ್ಚುತ್ತಿದೆ. ದಿನದಿಂದ ದಿನಕ್ಕೆ ಅವಳ ಸಹಾನುಭೂತಿಪರರು ಹೆಚ್ಚುತ್ತಿದ್ದಾರೆ. ಅದಕ್ಕೆ ಈಗ ನಡೆದ ಘಟನೆಯೇ ಉದಾಹರಣೆ. ದೇವಿಯಾದವರು ರಾಮನಗರಕ್ಕೆ ಬರಲಿದ್ದಾರೆಂದು ಅವರು ಇಂತಹ ಸಮಯದಲ್ಲಿ ಈ ದಾರಿಯ ಮೂಲಕ ಹೋಗುವರೆಂದು ಅವರಿಗೆ ಹೇಗೆ ಗೊತ್ತಾಯಿತು. ಈ ವಿಷಯವನ್ನು ಪಟ್ಟಣದಲ್ಲಿರುವ ಅಥವಾ ರಾಮನಗರ ದಲ್ಲಿರುವ ಅವಳ ಸಹಾನುಭೂತಿಪರರೇ ಅವರಿಗೆ ತಿಳಿಸಿರಬಹುದು. ಈ ಭಯಂಕರ ಕಾಡಿನಲ್ಲಿ ಅವಳನ್ನು ಅಟ್ಟಿ ಬಂಧಿಸುವುದು, ಮುಗಿಸುವುದು ಅಸಾಧ್ಯ. ಅದಕ್ಕೆ ಸಿ.ಎಂ. ಸಾಹೇಬರ ಆಜ್ಞೆಯ ಪ್ರಕಾರ ನಾ ಒಂದು ಹೊಸ ಯೋಜನೆ ರೂಪುಗೊಳಿಸಿದ್ದೇವೆ. ಅದರ ಪ್ರಕಾರ ನಾವೀಗ ಕೆಲಸ ಮಾಡಬೇಕು. ಅದೇನೆಂಬುದು ನಿಮಗೆ ಸ್ಕ್ವಾಡಿನ ಮುಖ್ಯಸ್ಥರು ವಿವರಿಸುತ್ತಾರೆ.”
ಭಾಷಣದಂತಹ ಮಾತನ್ನು ದಣಿದವರಂತೆ ನಿಲ್ಲಿಸಿದರು ಕಮೀಷನರ್. ಹತ್ತಿರದಲ್ಲೇ ಇದ್ದ ತಂಬಿಗೆಯಿಂದ ಗ್ಲಾಸಿಗೆ ನೀರನ್ನು ಹಾಕಿ ಅವರಿಗೆ ಕೊಟ್ಟ ತೇಜಾ, ರಾಮನಗರದ ಹಿರಿಯ ಅಧಿಕಾರಿಯರ ಕಡೆ ಒಮ್ಮೆಲೇ ನೋಡಿ ಹೇಳಿದರು ಸ್ಕ್ವಾಡ್‌ನ ಮುಖ್ಯಸ್ಥರು.
“ನಾನು ನಿಮಗೆ ಇನ್ಸ್‌ಪೆಕ್ಟರ್ ಉತೇಜ್ ಬಂಡೇರಾಹಳ್ಳಿಗೆ ಯಾಕೆ ಬರುತ್ತಿದ್ದಾನೆ. ಅಲ್ಲಿ ಪೊಲೀಸ್ ಸ್ಟೇಷನ ಹಾಕುವ ಯೋಜನೆ ಇದೆ ಎಂದು ಮೊದಲೇ ಹೇಳಿದ್ದೆ. ಆದರೂ ನಿವ್ಯಾರೂ ಅವನಿಗೆ ಸರಿಯಾಗಿ ಸಹಕಾರ ನೀಡಲಿಲ್ಲ ಸರಿ ತಾನೆ.”
ಅದಕ್ಕೆ ಏನು ಹೇಳಬೇಕೆಂಬುವುದು ರಾಮನಗರದ ಅಧಿಕಾರಿಗಳಿಗೆ ಕೂಡಲೇ ಹೊಳೆಯಲಿಲ್ಲ. ಅವರಿಗೆ ಯೋಚಿಸುವ ಅವಕಾಶ ಕೊಡದೇ ಮತ್ತೆ ಮಾತನ್ನು ಮುಂದುವರೆಸಿದರು ಸ್ಕ್ವಾಡಿನ ಮುಖ್ಯಸ್ಥರು.
“ಇಲ್ಲಿ ಇಂತಹ ಘೋರ ಘಟನೆ ನಡೆದಿದೆ. ನೀವದನ್ನು ಮೊದಲು ಅವನಿಗೆ ತಿಳಿಸಬೇಕಾಗಿತ್ತು. ಆದರೆ ನೀವು ಹಾಗೆ ಮಾಡಲಿಲ್ಲ. ನಾನೇ ಬೆಂಗಳೂರಿನಿಂದ ಅವನಿಗೆ ವಿಷಯ ತಿಳಿಸಿದ್ದು. ಇದು ಸಿ.ಎಂ. ಸಾಹೇಬರಿಗೆ ಗೊತ್ತಾದರೆ ಅವರು ಸುಮ್ಮನಿರುವವರಲ್ಲ.”
“ನಾನು ಅದು ಅಷ್ಟು ಮುಖ್ಯವೆಂದುಕೊಳ್ಳಲಿಲ್ಲ ಸರ್” ಅವರೆಗೆ ಏನಾದರೂ ಹೇಳಬೇಕೆಂದು ತನ್ನ ಯೋಚನೆಗಳನ್ನು ಕಲೆ ಹಾಕುತ್ತಿದ್ದ ಎಸ್.ಪಿ. ಹೇಳಿದ.
“ಅಂದರೆ ನೀವು ಕಲ್ಲಕ್ಕನನ್ನು ಅವಳ ಕ್ರಾಂತಿಕಾರಿ ಚಟುವಟಿಕೆಗಳನ್ನು ಮುಖ್ಯವೆಂದುಕೊಂಡಿಲ್ಲವೇ? ಅವನ ಮಾತು ಮುಗಿಯುತ್ತಲೇ ಕೇಳಿದರು ಸ್ಕ್ವಾಡಿನ ಮುಖ್ಯಸ್ಥರು.
“ಹಾಗಲ್ಲ ಸರ್! ಇದೆಲ್ಲದಕ್ಕೂ ಇನ್ಸ್‌ಪೆಕ್ಟರ್ ಉತ್ತೇಜ್ ಅಷ್ಟು ಮುಖ್ಯವೆಂದುಕೊಂಡಿರಲಿಲ್ಲ.” ಗೊಂದಲದಲ್ಲಿ ತಮ್ಮ ಸೃಷ್ಟಿಕರಣ ನೀಡಿದರು ಎಸ್.ಪಿ. ಸಾಹೇಬರು.
“ಅಂದರೆ ನಿಮಗೆ ನನ್ನ ಮಾತು ಮುಖ್ಯವೆನಿಸಲಿಲ್ಲವೆಂದರ್ಥ” ಸಿಟ್ಟಿನ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು.
“ನೋಡಿ! ಈಗ ಆಗಿದ್ದೇನೋ ಆಗಿಹೋಗಿದೆ. ಮುಂದಿನ ಯೋಜನೆಯ ಬಗ್ಗೆ ಮಾತಾಡುವ” ಸಂಧಾನ ಒಂದಕ್ಕೆ ಬರುವಂತಹ ದನಿಯಲ್ಲಿ ಹೇಳಿದರು ಕಲೆಕ್ಟರ್ ಸಾಹೇಬರು. ಅವರ ಮಾತು ಮುಗಿಯುತ್ತಿದ್ದಂತೆ ಬಾಗಿಲ ಮೇಲೆ ಬೆರಳಿನಿಂದ ಬಡಿದ ಸದ್ದಾಯಿತು. ಹತ್ತಿರದಲ್ಲೇ ಕುಳಿತಿದ್ದ ತೇಜಾ ಬೋಲ್ಟು ತೆಗೆದ. ಆಳು ಟ್ರೇ ಒಂದರಲ್ಲಿ ಕಾಫಿಯ ಲೋಟಗಳನ್ನು ಹಿಡಿದು ಬಂದಿದ್ದ. ಪಟುವಾರಿಯವರು ಇನ್ನೂ ಮಲಗಿರಲಿಕ್ಕಿಲ್ಲ ಎಂದುಕೊಳ್ಳುತ್ತಾ ಟ್ರೇ ತೆಗೆದುಕೊಂಡ ತೇಜಾ, ಅದನ್ನು ನಡುವಿದ್ದ ಚಿಕ್ಕ ಟೇಬಲಿನ ಮೇಲಿಟ್ಟ. ತನ್ನ ಕೆಲಸ ಮುಗಿದಂತೆ ಆಳು ಹೊರಟುಹೋಗುತ್ತಿದ್ದಂತೆ ಮತ್ತೆ ಬಾಗಿಲಿಗೆ ಬೋಲ್ಟು ಎಳೆದ. ಅಲ್ಲಿದ್ದ ಎಲ್ಲರಿಗೂ ಆಗ ಕಾಫಿಯ ಅವಶ್ಯಕತೆ ಇದ್ದಂತೆ ಕಂಡು ಬರುತ್ತಿತ್ತು. ಅವರೆಲ್ಲಾ ತಮ್ಮ ತಮ್ಮ ಗ್ಲಾಸುಗಳನ್ನು ತೆಗೆದುಕೊಂಡರು.
ಕಾಫಿ ಕುಡಿದು ಮುಗಿಸುವವರೆಗೂ ಯಾರೂ ಏನೂ ಮಾತಾಡಲಿಲ್ಲ. ಎಲ್ಲರೂ ತಮ್ಮ ತಮ್ಮ ಯೋಚನೆಗಳಲ್ಲಿ ತೊಡಗಿರುವಂತೆ ಕಂಡುಬರುತ್ತಿತ್ತು. ತಮ್ಮ ಬರಿದಾದ ಗ್ಲಾಸನ್ನು ಕೆಳಗಿಡುತ್ತಾ ಕೊನೆಯ ಮಾತೆಂಬಂತಹ ದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು.
“ಈ ಸಮಯದಲ್ಲಿ ನಿಮ್ಮೊಡನೆ ವಾದವಿವಾದಕ್ಕೆ ಇಳಿಯುವ ಸಂಯಮ ನನಗಿಲ್ಲ. ಒಂದು ಮಾತು ಮರೆಯಬೇಡಿ ಈ ಜಿಲ್ಲೆಯ ಯಾವ ಮೂಲೆಗಾದರೂ ಯಾವುದಾದರೂ ಕ್ರಾಂತಿಗೆ ಸಂಬಂಧಿಸಿದ ಘಟನೆ ನಡೆದರೆ ಅದು ಮೊದಲು ಇನ್ಸ್‌ಪೆಕ್ಟರ್ ಉತ್ತೇಜ್‌ನಿಗೆ ತಿಳಿಯಬೇಕು. ಇಡೀ ಜಿಲ್ಲೆಯಲ್ಲಿ ಕ್ರಾಂತಿಕಾರಿ ಚಟುವಟಿಕೆಗಳನ್ನು ನಿಯಂತ್ರಿಸಲು ಅವನನ್ನು ನೇಮಿಸಲಾಗಿದೆ. ಬಂಡೇರಹಳ್ಳಿಯಲ್ಲಿ ಈಗ ಹುಟ್ಟುತ್ತಿರುವ ಪೋಲಿಸ್ ಸ್ಟೇಷನ್, ಅಲ್ಲಿ ಉತೇಜ್ ಇರುವುದು ನೆಪಮಾತ್ರಕ್ಕಷ್ಟೆ. ಅವನ ಈ ಕೆಲಸದಲ್ಲಿ ಇಡೀ ಜಿಲ್ಲೆಯ ಪೋಲಿಸ್ ಖಾತೆ, ಇನ್ನಿತರ ಡಿಪಾರ್ಟ್‌ಮೆಂಟ್‌ಗಳು ಅವನಿಗೆ ಸಹಕರಿಸಬೇಕು. ಬೇಕಾದರೆ ಈ ಕುರಿತಾದ ಪತ್ರವನ್ನು ಸಿ.ಎಂ.ರ ಕಾರ್ಯಾಲಯದಿಂದ ಕಳಿಸುತ್ತೇನೆ, ಅರ್ಥವಾಯಿತೆ.”
“ಅರ್ಥವಾಯಿತು ಇನ್ನು ಮುಂದೆ ಹಾಗೇ ಆಗುತ್ತದೆ” ಹೇಳಿದ ಎಸ್.ಪಿ.
“ಸಿ.ಎಂ. ಸಾಹೇಬರಿಂದ ಪತ್ರ ಕಳಿಸಲೇ” ಮತ್ತೆ ಒತ್ತಿ ಕೇಳಿದರು ಸ್ಕ್ವಾಡಿನ ಮುಖ್ಯಸ್ಥರು.
“ಬೇಡ! ಬೇಡ! ಅದರ ಅವಶ್ಯಕತೆ ಇಲ್ಲ” ಅವಸರದ ದನಿಯಲ್ಲಿ ಹೇಳಿದರು ಕಲೆಕ್ಟರ್ ಸಾಹೇಬರು. ರಾಮನಗರದ ಆದಾಯ ಎಲ್ಲಿ ಕಳೆದುಕೊಳ್ಳಬೇಕಾಗುವುದೋ ಎಂಬ ಭಯ ಅವರಿಗೆ.
ಹಾಗೇ ಇನ್ನೂ ಸ್ವಲ್ಪ ಸಮಯ ಕಲ್ಲಕ್ಕನ ವಿಷಯ ಮಾತಾಡಿ ಒಂದು ನಿರ್ಣಯಕ್ಕೆ ಬಂದು ಅಲ್ಲಿಂದ ಎದ್ದರವರು.
ಅವರೆಲ್ಲಾ ಅಟ್ಟವನ್ನು ಇಳಿಯುತ್ತಿದ್ದಾಗ ಪಟುವಾರಿಯವರು ಮುಂದಿನ ಕೋಣೆಯಲ್ಲಿ ಬಂದು ನಿಂತಿದ್ದರು. ಅದು ಯಾರಲ್ಲೂ ಅಚ್ಚರಿ ಹುಟ್ಟಿಸಲಿಲ್ಲ. ಆ ರಾತ್ರಿಯೇ ಅಂತಹ ರಾತ್ರಿ. ಹೊರ ಹೋಗುವ ಮುನ್ನ ಎಲ್ಲರೂ ಹಾರ್ದಿಕವಾಗಿ ಅವರ ಕೈ ಕುಲಕಿ ಧನ್ಯವಾದಗಳನ್ನು ಹೇಳಿದರು. ಕೊನೆಯಲ್ಲಿದ್ದವನು ಸ್ಕ್ವಾಡಿನ ಮುಖ್ಯಸ್ಥರು. ಪಟುವಾರಿಯವರ ಕೈಯನ್ನ ಹಿಡಿದು ನಿಂತಿದ್ದ ಅವರು ಮಿಕ್ಕವರು ಮನೆಯಿಂದ ದೂರವಾದಾಗ ಕೇಳಿದರು.
“ಈ ಕಲ್ಲಕ್ಕನ ಬಗ್ಗೆ ನಿಮ್ಮ ಅಭಿಪ್ರಾಯವೇನು?”
ವಿಚಿತ್ರವೆನಿಸುವಂತಹ ನೋವಿನ ಮುಗುಳ್ನಗೆ ನಕ್ಕು ಹೇಳಿದರವರು.
“ಆಕೆ ಕ್ರಾಂತಿಕಾರಿಯಲ್ಲ. ತನ್ನದೇ ರೀತಿಯಲ್ಲಿ ಸಮಾಜವನ್ನು ಸುಧಾರಿಸಿಸಲು ಹೊರಟಿದ್ದಾಳೆನಿಸುತ್ತದೆ”
“ಅಂದರೆ ಆಕೆ ಸಮಾಜಸುಧಾರಕೆ!” ಗಂಭೀರದನಿಯಲ್ಲಿ ಹೇಳಿದರು ಸ್ಕ್ವಾಡಿನ ಮುಖ್ಯಸ್ಥರು ಶ್ರೀವಾಸ್ತವ.
ಅದಕ್ಕೆ ಹೌದೆಂಬಂತೆ ತಲೆ ಹಾಕಿದರು ಪಟವಾರಿ.
* * *
ಬಂಡೇರಹಳ್ಳಿಯ ಕಾಡಿನ ತಮ್ಮ ಬೆಟ್ಟದ ಮೇಲೆ ಬರುವಲ್ಲಿ ಬಹಳಷ್ಟು ದಣಿದುಬಿಟ್ಟಿದ್ದರು ಕಲ್ಯಾಣಿಯ ಕ್ರಾಂತಿಕಾರಿ ತಂಡದವರು. ಹೊಟ್ಟೆ ತುಂಬಾ ನೀರು ಕುಡಿದು ದಣಿವನ್ನು ಆರಿಸಿಕೊಳ್ಳುತ್ತಿರುವಾಗ ಹೇಳಿದ ಮಲ್ಲಪ್ಪ.
“ಈ ಗದ್ದಲದಲ್ಲಿ ನಾನೊಂದು ಮುಖ್ಯ ವಿಷಯ ಹೇಳಲು ಅವಕಾಶವೇ ದೊರೆತಿಲ್ಲ.”
ಕಂದೀಲಿನ ಬೆಳಕಿನಲ್ಲಿ ಅದೇನೆಂಬಂತೆ ಅವನ ಕಡೆ ನೋಡಿದಳು ಕಲ್ಯಾಣಿ. ದಣಿವಿನ ಕಾರಣ ಅವಳಲ್ಲಿ ಮಾತೂ ಬೇಸರ ಹುಟ್ಟಿಸುವ ಹಾಗಿತ್ತು.
“ಬಂಡೇರಹಳ್ಳಿಯಲ್ಲಿ ಪೋಲಿಸ್ ಸ್ಟೇಷನ್ ತೆಗೆಯಲ್ಲಿದ್ದಾರೆ ಅದಕ್ಕೆ ಬೆಂಗಳೂರಿನಿಂದ ಉತ್ತೇಜ್ ಎಂಬ ಇನ್ಸ್‌ಪೆಕ್ಟರ್ ಬಂದಿದ್ದಾನೆ”
ಇದು ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯದ ವಿಷಯವಾಗಿತ್ತು.
ಅವನು ಹೇಗಿದ್ದಾನೆ! ಯಾವ ಕಟ್ಟಡವನ್ನು ಪೋಲಿಸ್ ಸ್ಟೇಷನ್ನಿಗಾಗಿ ಉಪಯೋಗಿಸುತ್ತಿದ್ದಾರೆ? ಎಷ್ಟು ಜನ ಪೇದೆಯರು ಬಂದಿದ್ದಾರೆ?” ತನ್ನ ದಣಿವನ್ನು ಮರೆತು ಆತುರದಲ್ಲಿ ಒಂದರ ಹಿಂದೆ ಒಂದು ಪ್ರಶ್ನೆ ಹಾಕಿದ ಶಂಕರ.
“ಅದರ ಎಲ್ಲಾ ಉಸ್ತುವಾರಿಯನ್ನು ಆ ಇನ್ಸ್‌ಪೆಕ್ಟರ್ ಉತ್ತೇಜ್‌ನ ನೋಡಿಕೊಳ್ಳುತ್ತಾನಂತೆ. ಈ ದಿನವೆಲ್ಲಾ ಬಂಡೇರಹಳ್ಳಿಯಲ್ಲಿ ಇದ್ದನಂತೆ ಒಂದೆರಡು ದಿನದಲ್ಲಿ ಪೊಲೀಸ್ ಸ್ಟೇಷನ್ ಆರಂಭವಾಗಬಹುದೆಂದು ಮಾತಾಡಿ ಕೊಳ್ಳುತ್ತಿದ್ದರು” ವಿವರಣೆ ನೀಡಿದ ಮಲ್ಲಪ್ಪ.
“ಅದು ಆರಂಭವಾಗುತ್ತಲೇ ಅದನ್ನು ಎಗರಿಸಿಬಿಡಬೇಕು” ಆಗತಾನೇ ಬಾಂಬು ಮಾಡಿದ ವಿನಾಶವನ್ನು ನೆನಹಿಸಿಕೊಳ್ಳುತ್ತಾ ಹೇಳಿದ ನಾಗೇಶ.
ಅದನ್ನು ಕೇಳಿಸಿಕೊಳ್ಳದವಳಂತೆ ಮಾತಾಡಿದಳು ಕಲ್ಯಾಣಿ.
“ಹರಿ! ನನಗೆ ಉತೇಜ್‌ನ ಜಾತಕವೆಲ್ಲಾ ಆದಷ್ಟು ಬೇಗ ಬೇಕು ಅದು ಸಾಧ್ಯವೇ?”
“ಖಂಡಿತ ಸಾಧ್ಯ ಅಕ್ಕ” ಆತ್ಮವಿಶ್ವಾಸದ ದನಿಯಲ್ಲಿ ಹೇಳಿದ ಹರಿ.
“ಅದರ ಬಗ್ಗೆ ಯೋಚಿಸು!… ಇನ್ನು ಎಲ್ಲರೂ ಎಲ್ಲವನ್ನೂ ಮರೆತು ನಿಮ್ಮ ನಿಮ್ಮ ಸ್ಥಳಗಳಲ್ಲಿ ಹಾಯಾಗಿ ಮಲಗಿ.”
ಅದು ಆಜ್ಞೆ ಎಂಬಂತೆ ಯಾರೂ ಒಂದು ಮಾತೂ ಆಡದೇ ಮಲಗಲು ಹೋದರು. ದಣಿದ ಅವರ ದೇಹಗಳನ್ನು ನೋಡು ನೋಡುತ್ತಿದ್ದಂತೆ ನಿದ್ದ ತನ್ನಲ್ಲಿ ಸೆಳೆದುಕೊಂಡು ಬಿಟ್ಟಿತು.
*****