ರಸ್ತೆ ನಡುವೆ ರಾಗಿ ಚೆಲ್ಲಿಕೊಂಡು
ಬಾಚಿ ಎತ್ತಲೂ ಆಗದೆ ನಿಂತಿದ್ದಾನೆ ಹುಡುಗ.
ಬಾಯೊಡೆದ ಚೀಲ ಬಿದ್ದಿದೆ ಬೀದಿನಡುವೆ;
ಹಾಯುತಿದೆ ಅದರದೆಯ ಮೇಲೆಯೇ ಒಂದೆ ಸಮ
ಕಾರು ಸ್ಕೂಟರ್ ಲಾರಿ,
ಈಟಿದನಿಯಲಿ ಮೈಲಿ ಎಚ್ಚರಿಕೆ ಚೀರಿ.
ಬಿದ್ದ ಕಾಳಿನ ಮೇಲೆ ಒದ್ದೆ ದೃಷ್ಟಿಯ ಚೆಲ್ಲಿ
ನಿಂತ ಹುಡುಗನ ದೀನ ನೋಟ,
ಎದುರೆ ಬಿದ್ದಿದೆ ಮಣ್ಣು ಪಾಲಾಗಿ ಮನೆಯವರ
ಅಂದಿನೂಟ,
ಏನೊ ತಲ್ಲಣ ಭೀತಿ ಕಲೆಸಿ ಕರಿಗಪ್ಪಾದ
ನೋವಿನ ಮುಖ,
ಗಾಜಿನಾಲಿಗಳಂಥ ಕಣ್ಣು ಜಿನುಗುತ್ತಿದೆ
ಅನಂತದುಃಖ.
ರಾಗಿ ಚಲ್ಲಿದ್ದಕ್ಕೆ ಕೂಗಿ ಗದರಿಸುತ್ತಿರುವ
ಪೋಲೀಸು ಪೇದೆ,
ಬರಲಿರುವ ಕತ್ತಲೆಯ ಕೂಗಿ ಕರೆಯುತ್ತಿರುವ
ಗಿರಣಿ ಕೊರಳಿನ ಕಪ್ಪುಬೇಗೆ,
ಬಾನ ಮೈತುಂಬೆಲ್ಲ ಬಿಳಿ ತೊನ್ನ ಹಚ್ಚಿರುವ
ತೇವವಿಲ್ಲದ ಮುಗಿಲ ಕ್ರೌರ್ಯ,
ಬಡವರೊಡಲಿನ ಕಿಚ್ಚೆ ಅಚ್ಚಾಗಿ ಆಗಸದ
ಅಂಚಿನಲಿ ಸಂಜೆ ಸೂರ್ಯ
*****