ರಜೆಯಲ್ಲಿ ಹಳ್ಳಿಯ ಮನೆಗೆ ಹೊರಟಿದ್ದೆ.
ಹಳೆಮನೆ, ಅಮ್ಮ ಮುದುಕಿ, ಇಲ್ಲೇ ಸಾಯುತ್ತೇನೆ ಎನ್ನುವ ಹಟ,
ತಾನೇ ಬೇಯಿಸಿಕೊಂಡು
ಮೈಕೈ ನೋಯಿಸಿಕೊಂಡು
ಒಂದೆಮ್ಮೆಯನ್ನೂ ಮೇಯಿಸಿಕೊಂಡು
ಅಲ್ಲೇ ಅವಳ ಬಿಡಾರ.
ಹಳ್ಳಿಯಲ್ಲಿ ಕಾಲಿಡುತ್ತ ತೀರುವ ಸಂಜೆ.
ಸುತ್ತಲ ನೋಟ-
ಹಗಲಿನ ಬೆನ್ನಿನ ಮೇಲಿನ ಇರುಳಿನ ಬರವಣಿಗೆ.
ಹಸು ಎಮ್ಮೆಯಾಗಿ
ರಂಗ ತಿಮ್ಮನಾಗಿ
ದಾರಿಯ ಹಳೆ ಅರಳಿ
ಮಾರಿಯ ತಲೆಯಾಗಿ
ಬುದ್ದಿಗೆ ಲೆಕ್ಕ ತಪ್ಪುವ ತಿಕ್ಕಲು ಗಳಿಗೆ.
ಮನೆ ಬಳಿ ಬಂದಾಗ
ಕಪ್ಪಗೆ
ಅಷ್ಟೆತ್ತರ
ಯಾರೋ ಒಳಹೊಕ್ಕಿದ್ದು ನೋಡಿ
‘ಯಾರಿರಬಹುದೇ, ಜವರನಾ?’ ಎಂದೆ ಇವಳಿಗೆ.
‘ಎಲ್ಲಿ, ಯಾವಾಗ? ಸುಮ್ಮನೆ ಬನ್ನಿ’ ಎಂದಳು ತಿನ್ನುವ ದನಿಯಲ್ಲಿ.
ನಗರದ ಹುಡುಗಿ ಹಳ್ಳಿಗೆ ರೇಗಿದ್ದಾಳೆ ಎನ್ನಿಸಿ
ತೆಪ್ಪಗೆ ನಡೆದು ಸೀದಾ ಮನೆಬಾಯಿಯಲ್ಲಿ ತಲೆ ಇಟ್ಟೆ
ರಾತ್ರಿ ಮಲಗಿದ್ದೇವೆ. ಎಲ್ಲರಿಗು ನಿದ್ದೆ.
ನನಗೆ ಆಯಾಸ, ಮಂಪರು
ಕೊಟ್ಟಿಗೆಯಲ್ಲಿ ಏನೋ ಸದ್ದು ಕಾಳಗ.
ಬೀಸಿದ ಹಾಗೆ
ಬಿದ್ದಹಾಗೆ
ಒಪ್ಪದೆ ಎದ್ದು ಗುದ್ದಿದ ಹಾಗೆ
ಕಟ್ಟು ಕಳಚಲು ಕಾಳಿ
ಹಿಗ್ಗಾಮುಗ್ಗಾ ಎಗರುವ ಹಾಗೆ.
ಇವಳನ್ನು ಎಬ್ಬಿಸಿ ‘ಕೊಟ್ಟಿಗೆ ಸದ್ದು ಕೇಳುತ್ತೇನೇ?’ ಎಂದೆ.
‘ಯಾಕೆ ಏನೇನೋ ಆಡುತ್ತೀರಿ ಸುಮ್ಮನೆ ಮಲಗಿ’ ಎಂದಳು
ಯತ್ನಿಸಿದೆ. ಇಲ್ಲ. ಗದ್ದಲ ಹೆಚ್ಚುತ್ತ ನಡೆದು
ಹತ್ತಿಕ್ಕಲಾಗದೆ ಎದ್ದೆ. ಹೊರಟೆ.
ಇವಳೋ
ಕತ್ತಲೆಯಲ್ಲೂ ಬೆನ್ನು ಹತ್ತಿದಳು ಸಾವಿತ್ರಿ
ಲಾಟೀನು ಹಿಡಿದು ಪಿರಿಪಿರಿ ಗೊಣಗುತ್ತ.
ಕೊಟ್ಟಿಗೆ ಹೊರಗಿನಿಂದ ಕಿವಿಕೊಟ್ಟು ಆಲಿಸಿದೆ
‘ಏನೋ ಪಿಸು ಪಿಸು ಶಬ್ದ.
ಕೇಳುತ್ತಾ?’ ಅಂದೆ ಕಿವಿಯಲ್ಲಿ.
ಅಚ್ಚರಿಯಲ್ಲಿ ನನ್ನನ್ನೇ ದಿಟ್ಟಿಸಿ
‘ಇನ್ನೂ ನಿದ್ದೆಯಾ,
ಯಾರು ಪಿಸುಗುಟ್ಟಬಹುದು ಈ ಎಂ.ಎ. ಜೊತೆ?’
ಎಂದು ನಕ್ಕಳು.
ಪಿಯುಸಿ ಫೇಲಾದವಳ ವ್ಯಂಗ್ಯ!
‘ಅಂದರೆ ಎಲ್ಲ ಕಲ್ಪನೆಯಾ?’ ಎಂದೆ.
‘ಕವಿಗಳಲ್ಲವಾ? ರವಿ ಕಾಣದ್ದೆಲ್ಲ….’
ಎಂದು ತಿವಿದು ಅರಳಿದಳು.
ಕೊಟ್ಟಿಗೆ ಬಳಿಯೂ ಸರಸ,
ಇರುಳಿಗೇ ಹಾಗೆ
ಜೀವ ನೆಕ್ಕುವ ಚಪಲ ಎನ್ನಿಸಿ
ಲಾಟೀನು ಹಿಡಿದು ಒಳಕ್ಕೆ ಕಾಲಿಟ್ಟೆ.
ಯಾರೋ ದೀಪಕ್ಕೆ ಗುರಿಯಿಟ್ಟು ಉಫ್ ಎಂದಂತೆ
ಹುಷ್ಷನೆ ಉಸಿರು ನುಗ್ಗಿ ಗುರಿ ತಪ್ಪಿ ಬೆಳಕು ಆಡಿತು.
ಒಂದೇ ಗಳಿಗೆ
ನಾನು, ಎಮ್ಮೆ, ಕಂಬ, ಕಲಗಚ್ಚಿನ ಬಾನಿ-ಎಲ್ಲಕ್ಕೂ
ಈ ತುದಿಯಿಂದ ಆ ತುದಿತನಕ
ನೆರಳಿನ ತೂಗುಯ್ಯಾಲೆ.
ನಿಂತಿರುತ್ತ ಎದುರೇ ನನ್ನ ಬಿಂಬದ ಪರಿಭ್ರಮಣ.
ಆಹಾ! ಎನ್ನಿಸಿ ನೋಡಿದೆ
ನೋಡುತ್ತ ನೋಡುತ್ತ –
ಎಲ ಎಲ ಏನದು!
ನಮ್ಮ ನೆರಳಿನ ಜೊತೆಗೂ ತೂಗುವ
ಕೆದರಿದ ಕೂದಲ
ಆ ಭಯಂಕರ ತಲೆ ಯಾರದು?
ಹೊರಳಿ ನೋಡುವ ಸೆಳೆತ, ಕಾತರ
ಆಗದ ಭಯ
ನೆತ್ತರು ಹೆಪ್ಪಾಗಿ
ಅಮ್ಮಾ ಎಂದು ಚೀರಿ
ಹಠಾತ್ತನೆ ಜಿಗಿದೆ ಹೊರಕ್ಕೆ
ಹಣೆಬಡಿಸಿಕೊಂಡು ಬಾಗಿಲ ಚೌಕಕ್ಕೆ.
‘ಏನ್ರೀ’ ಎಂದಳು ಬೆದರಿ
‘ಏನಿಲ್ಲ ಕಪ್ಪೆ’ ಎಂದೆ ತೊದಲಿ.
ನಗುತ್ತಿದ್ದವಳ ಕಣ್ಣು ತಪ್ಪಿಸಿ
ನಿಧಾನ ಓರೆಗಣ್ಣಲ್ಲಿ
ಕೊಟ್ಟಿಗೆ ಮೂಲೆಗೆ ದೃಷ್ಟಿ ಹರಿಸಿದೆ
ಹುಲ್ಲು ಉಚ್ಚೆ ಸಗಣಿ ಹೊಂಡಗಳ ನರಕದಲ್ಲಿ
ಸವಾರಿ ಹೊರಟು ನಿಂತಂತಿದ್ದ ರಾವುಗಣ್ಣಿನ ಮಹಿಷ!
* * *
ಬೆಳಿಗ್ಗೆ ಕಣ್ಣುಬಿಟ್ಟಾಗ ಗಂಟೆ ಒಂಬತ್ತು
ಮೈ ಸಣ್ಣಗೆ ಸುಡುತ್ತಿತ್ತು
ಕಾಫಿ ಕೊಟ್ಟ ಅಮ್ಮನ ಕಣ್ಣ ಅತ್ತು ಕೆಂಪಾಗಿತ್ತು
ಅಮ್ಮ ಹಣೆ ಸವರುತ್ತ –
‘ಏನೋ ರಾಮು ಇದೆಲ್ಲ?
ಬಂದವನೇ ತಲೆ ಬಡಿಸಿಕೊಂಡೆಯಲ್ಲ’ ಎಂದಳು.
ನಿಟ್ಟುಸಿರು ಬಿಟ್ಟು ಮತ್ತೆ
‘ಸದ್ಯ ಇಷ್ಟಕ್ಕೇ ಮುಗಿಯಿತಲ್ಲ
ಹೇಗಿದೆ ನೋಡು ಗುರುತು
ಥೇಟು ಕೈಬೆರಳ ಹಾಗೆ!’ ಎಂದಳು.
ನಾನು ‘ಅಮ್ಮ, ರಾತ್ರಿ ಕಾಳಿ…’ ಎಂದದ್ದೇ ತಡ
ಬಿಕ್ಕುತ್ತ
‘ಬಂಡೆ ಹಾಗಿತ್ತು ಮುಂಡೇದು’
ಯಾರದ್ದು ಇದಕ್ಕೆ ಬಡಿಯಿತೋ
‘ಋಣ ಮುಗಿಸಿ ಹೋಯಿತು’ ಎಂದು
ಗಳಗಳ ಅತ್ತಳು.
*****