ಯಾವುದೇ ಸಂಸ್ಕೃತಿ ಮತ್ತು ಇತಿಹಾಸವು ಎರಡು ಜನವರ್ಗಗಳನ್ನು ಹೊಂದಿರುತ್ತದೆ. ಒಂದು, ಆಳುವ ವರ್ಗ. ಇನ್ನೊಂದು, ಆಳಿಸಿಕೊಳ್ಳುವ ವರ್ಗ. ಆಳುವ ವರ್ಗದಲ್ಲಿ ಪ್ರಭುಗಳು, ಶ್ರೀಮಂತರು, ಪುರೋಹಿತಶಾಹಿ ವಕ್ತಾರರು ಕಾಣಿಸಿಕೊಂಡರೆ, ಆಳಿಸಿಕೊಳ್ಳುವ ವರ್ಗದಲ್ಲಿ ಶ್ರಮ ಸಂಸ್ಕೃತಿ ಪ್ರಧಾನವಾದ ಬಹುಜನ ಸಮುದಾಯವು ಕಾಣಿಸಿಕೊಳ್ಳುತ್ತದೆ. ಆದ್ದರಿಂದ ಇವರ ಸಮಷ್ಠಿ ರೂಪದ ನಿಜದ ಕಥಾನಕವನ್ನು ನಾವು ಇತಿಹಾಸ ಎಂದು ಕರೆಯಬೇಕಾಗುತ್ತದೆ. ಹೀಗಿರುವಾಗ ನಾವು ಇದುವರೆಗೂ ರೂಪಿಸಿಕೊಂಡಿರುವ ಯಾವುದೇ ಪ್ರದೇಶದ ಇತಿಹಾಸವಾಗಲೀ ಅದು ಉಳ್ಳವರನ್ನು ಕುರಿತ ಇತಿಹಾಸವಾಗಿದೆಯೇ ಅಥವಾ ಬಹುಜನ ಸಮುದಾಯವನ್ನು ಕುರಿತ ಇತಿಹಾಸವಾಗಿಯೇ ಅಥವಾ ಇವರೆಲ್ಲರನ್ನು ಕುರಿತ ಸಮಗ್ರ ಇತಿಹಾಸವಾಗಿದೆಯೇ ಎಂಬುದನ್ನು ಪರಿಶೀಲಿಸಬೇಕು.
ನಾವು ಬಹುತೇಕವಾಗಿ ನಮ್ಮ ಶಿಕ್ಷಣದ ಪಠ್ಯಗಳ ಮೂಲಕ ಕರ್ನಾಟಕದ, ಭಾರತದ… ಇತಿಹಾಸವನ್ನು ತಿಳಿಯುತ್ತಾ ಬಂದಿದ್ದೇವೆ. ಇದರ ಭಾಗವಾಗಿ ಕರ್ನಾಟಕದ ರಾಜಕೀಯ ಇತಿಹಾಸವೆಂದಾಗ ಅಲ್ಲಿ ಕದಂಬರು, ಗಂಗರು, ಚಾಲುಕ್ಯರು, ರಾಷ್ಟ್ರಕೂಟರು…ಹೀಗೆ ಕೆಲವು ಪ್ರಧಾನ ಪ್ರಭುತ್ವಗಳನ್ನು ಲಕ್ಷಿಸುತ್ತೇವೆ. ಧರ್ಮದ ಇತಿಹಾಸದಲ್ಲಿ ಜೈನ, ಬೌದ್ಧ, ಶೈವ, ಬ್ರಾಹ್ಮಣ ಮೊದಲಾದ ಕೆಲವೇ ಧರ್ಮಗಳನ್ನು ಗುರುತಿಸುತ್ತೇವೆ. ಇದಕ್ಕೆ ಅನುಬಂಧದ ರೂಪದಲ್ಲಿ ಕೆಲವು ಸ್ಥಳೀಯ ರಾಜವಂಶಗಳ ಇತಿಹಾಸವನ್ನು ತೇಲಿಸುತ್ತೇವೆ. ಇದರ ಒಟ್ಟು ಪರಿಣಾಮವೆಂದರೆ, ಸದರಿ ಪ್ರದೇಶದ ರಾಜಕೀಯ ಮತ್ತು ಧಾರ್ಮಿಕ ಇತಿಹಾಸವು ಸಮಗ್ರವಾಗಿ ವ್ಯಕ್ತಗೊಂಡಿದೆ ಎಂದು ಮೂಡಿ ಬಿಡುವ ಪ್ರಜ್ಞೆ. ಹಾಗೆ ಮೂಡುವ ನಿಟ್ಟಿನಲ್ಲಿ ಇತಿಹಾಸದ ಪಠ್ಯಗಳು ಸಹ ನಮಗೆ ಹಿನ್ನೆಲೆಯಾಗಿವೆ.
ವಾಸ್ತವವಾಗಿ ಇದಿಷ್ಟೇ ರಾಜಕೀಯ ಮತ್ತೂ ಧಾರ್ಮಿಕ ಇತಿಹಾಸವಲ್ಲ. ಕಾರಣ, ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಮೇಲ್ಕಾಣಿಸಿದ ವಂಶಗಳ ಅರಸರಷ್ಟೇ ಸ್ಥಳೀಯ ಅರಸರು ಸಹ ನಿರ್ಣಾಯಕವಾದ ಪಾತ್ರವನ್ನು ನಿರ್ವಹಿಸಿದ್ದಾರೆ. ಅದರಲ್ಲೂ ಪ್ರಧಾನ ಪ್ರಭುತ್ವಗಳ ವಕ್ತಾರರಿಗಿಂತಲೂ ಸ್ಥಳೀಯ ಪ್ರಭುತ್ವಗಳ ವಕ್ತಾರರೇ ಸ್ಥಳೀಯ ರಾಜಕೀಯ ಇತಿಹಾಸದ ನಿರ್ವಹಣೆಯಲ್ಲಿ ಪ್ರಭಾವಿಯಾದ ಪಾತ್ರವನ್ನು ವಹಿಸಿರುವುದು. ಉದಾಹರಣೆಗೆ, ಬೆಂಗಳೂರು ಪ್ರದೇಶದ ಇತಿಹಾಸ. ಈ ಪ್ರದೇಶವನ್ನು ೧೬ನೆಯ ಶತಮಾನದ ಆದಿಭಾಗದಲ್ಲಿ ಕೃಷ್ಣದೇವರಾಯ, ರಾಮರಾಯ ಮೊದಲಾದ ವಿಜಯನಗರದ ಅರಸರು ಆಳಿದ್ದಾರೆ. ಇವರಿಗೆ ಅಧೀನನಾಗಿ ಕೆಂಪೇಗೌಡ ಈ ಪ್ರದೇಶವನ್ನು ನೇರವಾಗಿ ಆಳಿದ್ದಾನೆ. ಆದ್ದರಿಂದಲೇ ಈ ಪ್ರದೇಶದಲ್ಲಿ ಇಂದಿಗೂ ಕೆಂಪೇಗೌಡ, ಅವನ ಸೊಸೆ ಲಕ್ಷ್ಮಿ ಮೊದಲಾದವರಿಗೆ ಸಂಬಂದಿಸಿದ ಕೋಟೆ, ದೇವಾಲಯ, ಐತಿಹ್ಯ, ಜನಪದ ಗೀತೆ ಮೊದಲಾದವು ದೊರೆಯುತ್ತವೆಯೇ ವಿನಃ ಇಂತಹ ವಿಫುಲ ಸಾಮಗ್ರಿ ವಿಜಯನಗರದ ಅರಸರನ್ನು ಕುರಿತು ದೊರೆಯುವುದಿಲ್ಲ. ಅಂತೆಯೇ ಹಂಪೆಯ ಪರಿಸರದಲ್ಲಿ ಕೃಷ್ಣದೇವರಾಯ ಮತ್ತು ಕುಮಾರರಾಮ.
ಆದ್ದರಿಂದ ಒಂದು ಪ್ರದೇಶದ ಇತಿಹಾಸದಲ್ಲಿ ಸ್ಥಳೀಯ ಅರಸರ ಪಾತ್ರವನ್ನು ವಿಶೇಷವಾಗಿ ಗಮನಿಸಬೇಕಾಗುತ್ತದೆ. ಅಂತೆಯೇ ಧರ್ಮಗಳ ಇತಿಹಾಸವನ್ನು ಕೂಡ. ಕರ್ನಾಟಕದ ಧರ್ಮಗಳು ಎಂದು ಕೆಲವೇ ಧರ್ಮಗಳನ್ನು ಕುರಿತು ನಾವು ಮಾತನಾಡುತ್ತೇವೆ. ಅವುಗಳೆಂದರೆ, ಮೇಲ್ಕಾಣಿಸಿದ ಮೂರು-ನಾಲ್ಕು ಧರ್ಮಗಳು. ವಾಸ್ತವವಾಗಿ ಕರ್ನಾಟಕದಲ್ಲಿ ಇವಿಷ್ಟೇ ಧರ್ಮಗಳಿಲ್ಲ, ನೂರಾರು ಧರ್ಮಗಳಿವೆ. ಅವುಗಳಲ್ಲಿ ಎಷ್ಟೋ ಧರ್ಮಗಳಿಗೆ ಹೆಸರುಗಳೇ ಇಲ್ಲ. ಹೆಸರೂ ಇರುವ ಇನ್ನು ಕೆಲವು ಧರ್ಮಗಳಲ್ಲಿ ದೈವಗಳ ಕಲ್ಪನೆಯೇ ಇಲ್ಲ. ಧರ್ಮದ ಪರಿಕಲ್ಪನೆಯನ್ನೇ ತಿಳಿಯದ ಜೀವನ ವಿಧಾನವು ಅನೇಕ ಬುಡಕಟ್ಟುಗಳಲ್ಲಿ ಇದೆ. ಹೀಗೆ ಸಂಸ್ಕೃತಿ ಮತ್ತು ಭಾಷೆಯ ಬಹುಮುಖತ್ವವನ್ನು ಹೊಂದಿರುವ ಕರ್ನಾಟಕವೊಂದರಲ್ಲಿಯೇ ಅನೇಕ ಜಾತಿಗಳು, ಬುಡಕಟ್ಟುಗಳು ಅಸ್ತಿತ್ವದಲ್ಲಿವೆ. ಅವುಗಳಲ್ಲಿ ಲPಂತರ ದೇವರುಗಳು, ಅಷ್ಟೇ ಸಂಖ್ಯೆಯ ನಂಬಿಕೆಗಳು-ಆಚರಣೆಗಳು ಇವೆ. ಅದರಲ್ಲೂ ಪ್ರಧಾನ ಧರ್ಮಗಳ ಕಲ್ಪನೆಯನ್ನೇ ತಿಳಿಯದ ಬುಡಕಟ್ಟುಗಳನೇಕ ನಮ್ಮ ಒಳನಾಡಿನಲ್ಲಿವೆ. ಒಟ್ಟಾರೆ ಇವೆಲ್ಲವೂ ಈ ನೆಲದ್ದೇ ಆಗಿವೆ. ಹೀಗಿರುವಾಗ ಕರ್ನಾಟಕದ ಧರ್ಮಗಳ ಇತಿಹಾಸವು ಇವನ್ನು ಲಕ್ಷಿಸದಿರುವುದು ತನ್ನ ಯಾವ ದೃಷ್ಟಿಯನ್ನು ತೋರಿಸುತ್ತದೆ? ಏನೇ ಆಗಲಿ ಈ ಮೂಲಕವಾಗಿ ತನ್ನ ಅಸಮಗ್ರತೆಯನ್ನು ಸೂಚಿಸುವುದಿಲ್ಲವೆ?
ಹೀಗೆ ಕರ್ನಾಟಕದ ಸಂಸ್ಕೃತಿ-ಇತಿಹಾಸವನ್ನು ಉದಾಹರಣೆಯನ್ನಾಗಿ ತೆಗೆದುಕೊಂಡು ಇಲ್ಲಿಯವರೆಗಿನ ಪರಿಶೀಲನೆ ಇದೆ. ಇಂತಹ ಇತಿಹಾಸ ಕ್ರಮದ ಇತಿಮಿತಿಗಳೇನು? ಎಂಬುದೇ ಕುತೂಹಲಕರ ಪ್ರಶ್ನೆ.
ನಾವು ಈಗಾಗಲೇ ಪರಿಚಯಿಸಿಕೊಂಡಿರುವ ಇತಿಹಾಸದ ಶಿಸ್ತು ಬ್ರಿಟಿಷ್ ಭಾರತದಲ್ಲಿ ರೂಪುಗೊಂಡಿರುವಂಥದ್ದು. ಇದು ಪಾಶ್ಚಾತ್ಯ ಶಿಕ್ಷಣದ ಮೂಲಕವಾಗಿ ನಮಗೆ ಲಭ್ಯವಾಗಿದೆ. ಇಂತಹ ಲಭ್ಯತೆಯಲ್ಲಿ ಅನೇಕ ಅಹಂಗಳು ಸೇರಿಕೊಂಡಿವೆ. ಉದಾಹರಣೆಗೆ, ಪಾಶ್ಚಾತ್ಯರು ತಮ್ಮ ದೇಶಗಳ ಇತಿಹಾಸಗಳನ್ನು ಕಟ್ಟುವಾಗ ’ಬಿಳಿ’ ಬಣ್ಣದ ಪರವಾದ ಅಹಂ ಅನ್ನು ಉಸಿರಾಗಿಸಿಕೊಂಡಿದ್ದಾರೆ. ಆದ್ದರಿಂದಲೇ ಇವರಿಂದ ಕಟ್ಟಲ್ಪಟ್ಟ ಜಾಗತಿಕ ಇತಿಹಾಸದಲ್ಲಿ ಪಾಶ್ಚಾತ್ಯವು ಶ್ರೇಷ್ಠವಾಗಿ, ಪೌರ್ವಾತ್ಯವು ಎರಡನೆಯ ದರ್ಜೆಯದಾಗಿ ನಿರ್ವಚನ ಗೊಂಡಿರುವುದು. ಇಂತಹ ಅಹಂಕಾರಗಳು ವಸಾಹತು ಶಿಕ್ಷಣದ ಮೂಲಕ ನಮ್ಮ ವಿದ್ವಾಂಸರನ್ನೂ ಹೊಕ್ಕಿವೆ. ಇನ್ನೂ ದುರದೃಷ್ಟವೆಂದರೆ, ಅದು ಇಂದಿನ ನವವಸಾಹತು ಕಾಲದಲ್ಲೂ ಮುಂದುವರೆದಿರುವುದು. ಅಂತಹ ಗುಪ್ತಗುಲಾಮಗಿರಿ ನಮ್ಮಲ್ಲಿ ಇಂದಿಗೂ ಇರುವುದರಿಂದಲೇ ಇಂದಿನ ಭಾರತವೂ ಒಂದಲ್ಲದ ಅನೇಕ ರಾಷ್ಟ್ರಗಳಿಗೆ ಆರ್ಥಿಕ ವಸಾಹತುವಾಗಿ ಮಾರ್ಪಡುತ್ತಿರುವುದು. ಇಂತಹ ಮನಸ್ಥಿತಿ ಭಾರತೀಯ ಬೌದ್ಧಿಕತೆಯಲ್ಲಿಯೂ ಇದೆ. ಆದ್ದರಿಂದಲೇ ಅಂತಹವರ ದೃಷ್ಟಿ ಹಕ್ಕಿಯ ಕಣ್ಣಾಗಿ ಆಕಾಶದಲ್ಲಿ ಹರಿದಾಡುತ್ತಾ ಈ ನೆಲದಲ್ಲಿ ಕೆಲವೇ ಪ್ರಭುತ್ವಗಳನ್ನು ಕಾಣುತ್ತದೆ; ಕೆಲವೇ ಧರ್ಮಗಳನ್ನು ಗುರುತಿಸುತ್ತದೆ. ಹೀಗೆ ಕಂಡದ್ದನ್ನೇ ಸಮಗ್ರ ಎಂದು ಬಹುತೇಕ ಭ್ರಮಿಸಿ, ಸ್ಥೂಲ ಪಾಠಗಳನ್ನು ನಮ್ಮ ಮೂಲಕ ಗಿಳಿಪಾಠಗಳನ್ನಾಗಿಸುತ್ತದೆ. ಇದಕ್ಕೆ ಪರ್ಯಾಯವಾಗಿ ಇದೇ ದೃಷ್ಟಿ ನೆಲದ ಕಣ್ಣಾಗಿ ಹಾವಿನಂತೆ ನೆಲದಲ್ಲಿ ಹರಿದಾಡಿದಾಗ ಈ ನೆಲದ ಅನೇಕ ಸೂಕ್ಷ್ಮಗಳು ಕಣ್ಣಿಗೆ ರಾಚುತ್ತವೆ. ಆಗ ಸಾವಿರಾರು ಬಣ್ಣಗಳ ಕರ್ನಾಟಕ, ಭಾರತ ಮತ್ತು ಜಗತ್ತು ಇತಿಹಾಸದ ಪುಟಗಳಲ್ಲಿ ಮೂಡುತ್ತದೆ. ಈ ಕ್ರಿಯೆಯಲ್ಲಿ ವಿವರಗಳನ್ನು ನಮೂದಿಸಬೇಕೆಂದು ನಾನು ಹೇಳುತ್ತಿಲ್ಲ. ಆದರೆ ಇಂತಹ ಸಮಗ್ರತೆಯನ್ನು ವಿವಕ್ಷಿಸಿದ ತಾತ್ವಿಕ ಇತಿಹಾಸ ನಮ್ಮದಾಗಬೇಕೆಂದು ಇಚ್ಫಿಸುತ್ತೇನೆ. ಬಹುಮುಖಿ ಭಾರತದಲ್ಲಿ ಇದು ನೈಜವೂ ಪ್ರಜಾಸತ್ತಾತ್ಮಕವೂ ಆಗುತ್ತದೆಂಬುದು ನನ್ನ ಆಶಯ.
ಈ ತಾತ್ವಿಕ ನೆಲೆಯಲ್ಲಿ ನಾವು ಈಗಾಗಲೇ ರಚಿಸಿಕೊಂಡಿರುವ ಇತಿಹಾಸವನ್ನು ಮರು ವ್ಯಾಖ್ಯಾನಕ್ಕೆ ಈಡು ಮಾಡುವುದು ಸಮಕಾಲೀನ ಸಂದರ್ಭದ ಅಗತ್ಯವೆಂದು ಭಾವಿಸಿದ್ದೇನೆ. ಕಾರಣ, ನಿನ್ನೆ ಇದ್ದ ಕ್ಯಾಲೆಂಡರ್ ಇಂದು ಇಲ್ಲ. ಈ ನಿಟ್ಟಿನಲ್ಲಿ ಇತಿಹಾಸಕ್ಕೆ ಆಕರಗಳಾಗುವ ಸ್ಮಾರಕ, ಶಾಸನ, ಕಾವ್ಯ ಮೊದಲಾದ ದಾಖಲೆಗಳ ಇತಿಮಿತಿಗಳ ಪರ್ಯಾಲೋಚನೆಯ ಅಗತ್ಯವಿದೆ.
ಶಾಸನಗಳಾಗಲೀ ಸ್ಮಾರಕ, ಕಾವ್ಯಗಳಾಗಲೀ ನಿರ್ಮಾಣಗೊಳ್ಳುವುದಕ್ಕೆ ಆರ್ಥಿಕ ಬೆಂಬಲ ಬೇಕು. ಇಂತಹ ಬಲ ಇರುವುದು ಹೊಟ್ಟೆ ತುಂಬಿದವರಲ್ಲಿ ಮಾತ್ರ ಮತ್ತು ಅವುಗಳ ಅಗತ್ಯವು ಸಹ ಅವರದ್ದೇ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಹುಟ್ಟಿಕೊಳ್ಳುವ ಶಾಸನಗಳು ಸಹಜವಾಗಿಯೇ ಅವರನ್ನು ಕುರಿತು ಮಾತನಾಡುತ್ತವೆ. ಇಂತಹ ಮಾತುಗಳಲ್ಲಿ ಅವರ ಆಶಯಗಳೇ ಆಧರಿಸಿ ನಾವು ಆಡುವ ಮಾತುಗಳು ಅವರನ್ನು ಕುರಿತ ಮಾತುಗಳೇ ಆಗಿರುತ್ತವೆ. ಅದರಲ್ಲೂ ಈ ಮಾತುಗಳಿಗೆ ಮೂಲವಾದ ಶಾಸನಗಳು ಅವರಿಂದಲೇ ಕೊರೆಯಿಸಲ್ಪಟ್ಟಿದ್ದರಿಂದ ನಮ್ಮ ಅಕ್ಷರಗಳು ಸಹ ಅವರನ್ನು ಗುಣಾತ್ಮಕವಾಗಿಯೇ ಕಂಡರಿಸುತ್ತವೆ. ಇಂತಹ ಅಕ್ಷರಗಳ ಸಮಷ್ಟಿರೂಪದ ಇತಿಹಾಸವು ಆ ಪ್ರಭುತ್ವಗಳ ವಕ್ತಾರರನ್ನು ಕುರಿತು ದಿವ್ಯತೆಯ ನೆಲೆಯಲ್ಲಿಯೇ ಗ್ರಹಿಸುತ್ತದೆ. ಉದಾಹರಣೆಗೆ, ವೇಣೂರಿನ ಗೊಮ್ಮಟೇಶ್ವರನನ್ನು ಕುರಿತ ಶಾಸನ. ಇದು ಅಲ್ಲಿಯ ಗೊಮ್ಮಟನ ನಿರ್ಮಾಣದ ಆ ಕಾಲದಲ್ಲಿ ಅದರ ನಿರ್ಮಾಪಕನಿಂದಲೇ ಕೊರೆಯಿಸಲ್ಪಟ್ಟದ್ದಾಗಿದೆ. ಅದರ ಮಾತಿನಂತೆ ಈ ಗೊಮ್ಮಟವನನ್ನು ಕೆತ್ತಿಸಿದ ರಾಜ ಅನೇಕ ಗುಣಾವಳಿಗೆ ವಸ್ತುವಾಗುತ್ತಾನೆ. ಹೀಗಿರುವಾಗ ಆ ಶಾಸನವನ್ನು ಆಧರಿಸಿ ಅಲ್ಲಿಯ ಪ್ರಭುವನ್ನು ಕುರಿತು ನಾವು ಮಾತನಾಡಿದ್ದೇ ಆದರೆ ಗುಣಾತ್ಮಕವಾದ ಇತಿಹಾಸವನ್ನೇ ಬರೆದು ಬಿಡುತ್ತೇವೆ. ಕಾರಣ, ಇದರಿಂದಾಚೆಗೆ ಯಾವುದೇ ಮೂರ್ತವಲ್ಲದ ದಾಖಲೆಗಳು ಪಾಶ್ಚಾತ್ಯ ಶಿಸ್ತು ಕಲಿಸಿದ ಇತಿಹಾಸದ ಭಾಗವಾಗಿ ನಮಗೆ ಅಲ್ಲಿ ಲಬಿsಸುವುದಿಲ್ಲ. ಆದರೆ ಗೊಮ್ಮಟನ ಅದೇ ಪ್ರದೇಶದ ಜನಸಂಸ್ಕೃತಿಯಲ್ಲಿ ಇಂದಿಗೂ ಕೆಲವು ಜನಪದ ಗೀತೆಗಳು ಲಭ್ಯ ಇವೆ. ಯಾವುದೇ ಜಾನಪದೀಯ ಘಟಕ ಕೇವಲ ವರ್ತಮಾನದ್ದಾಗಿರುವುದಿಲ್ಲ. ಅದು ಮೂರ್ತ ಅಥವಾ ಅಮೂರ್ತ ಘಟಕವಾಗಿರಬಹುದು. ಉದಾಹರಣೆಗೆ ವರ್ತಮಾನದ ಗಾದೆಯೊಂದು ಇತಿಹಾಸದ ಸಂದರ್ಭದಲ್ಲಿ ಅಲಿಖಿತ ಹಾಗೂ ಜಾನಪದೀಯ ಶಾಸನವೂ ಹೌದು. ಹೀಗಾಗಿ ಯಾವುದೇ ಜಾನಪದೀಯ ಸೃಷ್ಟಿಗೆ ಪರಂಪರೆಯ ಹಿನ್ನೆಲೆ ಇರುವುದರಿಂದ ಇತಿಹಾಸದ ಕಟ್ಟುವಿಕೆಗೆ ಇದು ಸಹಾಯಕವಾಗುತ್ತದೆ. ಅದರಲ್ಲೂ ಇಂತಹ ಸೃಷ್ಟಿಗಳು ಜನರಿಂದ ಮತ್ತು ಜನರ ಮಧ್ಯೆ ಸಂಭವಿಸಿ ಪರಂಪರಾಗತವಾಗಿ ಗಾಳಿ-ಬೆಳಕಿನಲ್ಲಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಬಂದಿರುತ್ತವೆಯಾದ್ದರಿಂದ ಸೂಕ್ತ ಬೌದ್ಧಿಕ ತರಬೇತಿಯುಳ್ಳ ಕಣ್ಣಿಗೆ ಇವು ಇತಿಹಾಸದ ಪುನಾರಚನೆಗೆ ಸ್ವೀಕಾರಾರ್ಹವೂ ಅಮೂಲ್ಯವೂ ಆಗಿ ಪರಿಣಮಿಸುತ್ತವೆ. ಈ ಹಿನ್ನೆಲೆಯಲ್ಲಿ ವೇಣೂರಿನಲ್ಲಿ ಇಂದಿಗೂ ಪ್ರಚಲಿತವಿರುವ ಕೆಲವು ಜನಪದ ಗೀತೆಗಳು ಅದೇ ಗೊಮ್ಮಟ ನಿರ್ಮಾಪಕನಾದ ದೊರೆಯನ್ನು ನೇತ್ಯಾತ್ಮಕವಾಗಿ ಚಿತ್ರಿಸುತ್ತವೆ. ಅವನು ಹೆಚ್ಚು ತೆರಿಗೆ ಹಾಕುತ್ತಿದ್ದನು, ಪ್ರಜಾಕಂಟಕನು ಆಗಿದ್ದನು ಎಂದೆಲ್ಲಾ ಈ ಜನಪದ ನುಡಿಗಳು ಆಡುತ್ತವೆ. ಈ ನುಡಿಗಳು ತಲೆಮಾರುಗಳ ಮೂಲಕ ಹರಿದು ಬಂದಿರುವುದರಿಂದ ಇವು ಎಲ್ಲಾ ಕಾಲಕ್ಕೂ ಸಲ್ಲುವ ಅಮೂರ್ತ ಸಾಂಸ್ಕೃತಿಕ ದಾಖಲೆಗಳಾಗುತ್ತವೆ. ಆದ್ದರಿಂದ ಆ ಪ್ರದೇಶದ ಒಂದು ಭಾಗವಾದ ಪ್ರಭುತ್ವದ ಇತಿಹಾಸವನ್ನು ಕಟ್ಟುವಾಗ ಅಥವಾ ಇಂತಹ ದಾಖಲೆಗಳನ್ನು ಸಹ ಆಕರಗಳನ್ನಾಗಿ ಪರಿಶೀಲಿಸಿದಾಗ ಬೇರೆಯದೇ ಆದ ಇತಿಹಾಸ ಮೂಡುತ್ತದೆ. ’ದಿವ್ಯತೆ’ಯೇ ಸಮಗ್ರವಲ್ಲದ ನಿಜದ ಇತಿಹಾಸವಾಗಿ ಅದು ಅನಾವರಣ ಗೊಳ್ಳುತ್ತದೆ.
ಇಂತಹ ಶಾಸನ ಮತ್ತು ಸ್ಮಾರಕಗಳನ್ನು ಆಶ್ರಯಿಸಿ ನಾವು ಇತಿಹಾಸವನ್ನು ಕಟ್ಟಿಕೊಂಡಿದ್ದೇವೆ. ಇವುಗಳ ಭಾಗವಾಗಿ ಬರುವ ಶಿಲ್ಪಕಲೆಯನ್ನು ಮೆರೆಸುವ ದೇವಾಲಯಗಳು, ವಾಸ್ತು ಪ್ರವೀಣತೆಯ ಕೋಟೆ ಕೊತ್ತಲಗಳು ನಮ್ಮ ಇತಿಹಾಸದ ಪಠ್ಯಗಳಲ್ಲಿ ತುಂಬಿಕೊಂಡಿವೆ. ಇವುಗಳನ್ನು ಕುರಿತ ಅರಿವು ಇತಿಹಾಸವೆಲ್ಲವೂ ಭವ್ಯ ಎಂಬ ಪ್ರeಯನ್ನು ವಿದ್ಯಾವಂತರಲ್ಲೂ ಮೂಡಿಸಿಬಿಟ್ಟಿದೆ. ಇದಕ್ಕೆ ಚಾರಿತ್ರಿಕವಾದ ಕಾರಣವೂ ಇಲ್ಲ ಎನ್ನುವಂತಿಲ್ಲ.
ಇತಿಹಾಸವನ್ನು ಕುರಿತ ಇಂತಹ ದೃಷ್ಟಿ ನಮ್ಮಲ್ಲಿ ಹುಟ್ಟಿಕೊಂಡದ್ದು ಸ್ವಾತಂತ್ರ್ಯ ಪೂರ್ವ ಭಾರತದಲ್ಲಿ. ಆಗ ಭಾರತೀಯರು ಬ್ರಿಟಿಷರ ಎದುರಿನಲ್ಲಿ ದಾಸ್ಯವನ್ನು ಅನುಭವಿಸುತ್ತಿದ್ದರು. ಅವರ ಪ್ರಭಾವದಲ್ಲಿ ಭಾರತೀಯವಾದ ಸಾಂಸ್ಕೃತಿಕ ವಿಸ್ಮೃತಿಯು ಅನೇಕ ಆತಂಕಗಳಿಗೆ ನೆಲೆಯಾಗುತ್ತಿತ್ತು. ಇದನ್ನು ಗ್ರಹಿಸಿದ ಇಲ್ಲಿಯ ಚಿಂತಕರು ಭಾರತೀಯರಲ್ಲಿ ತಮ್ಮ ಪರವಾದ ಕೀಳರಿಮೆ ಮತ್ತು ಪಾಶ್ಚಾತ್ಯ ಪರವಾದ ಮೇಲರಿಮೆಯನ್ನು ತೊಲಗಿಸುವ ನಿಟ್ಟಿನಲ್ಲಿ ಸ್ವದೇಶೀ ಪರವಾದ ಸಾಂಸ್ಕೃತಿಕ ಹುಡುಕಾಟವನ್ನು ನಡೆಸಿದರು. ಆಗ ನಮ್ಮ ಪುರಾಣಗಳು ಹೊಸ ತಾತ್ವಿಕ ವಿನ್ಯಾಸದಲ್ಲಿ ಪ್ರತ್ಯಕ್ಷವಾದವು. ಇತಿಹಾಸವೂ ಖಡ್ಗ ಹಿಡಿದು ಬಂದಿತು. ಮಂದಿರ-ಮಹಲುಗಳು ಮುಗಿಲು ಮುಟ್ಟಿ ನಿಂತವು. ಶಿಲಾ ಬಾಲಿಕೆಯರು ಕರ್ನಾಟಕದಾದ್ಯಂತ ನರ್ತಿಸತೊಡಗಿದರು. ಕಾವ್ಯಗಳು ಹಾಡಿದವು. ಶಾಸನಗಳು ವೀರವಾಣಿಯನ್ನು ಮೊಳಗಿಸಿದವು. ಇವುಗಳ ಲಹರಿ ಹಳ್ಳಿ-ನಗರಗಳ ಅಡುಗೆ ಮನೆಗಳಿಗೂ ಪ್ರವೇಶಿಸಿತು.
ಹೀಗೆ ಸ್ವಾಬಿsಮಾನದ ಕಿಡಿಯನ್ನು ಹೊತ್ತಿಸುವ ವರ್ಣರಂಜಿತ ಇತಿಹಾಸವು ಅಂದು ಕಾಗದದ ಕಾರ್ಖಾನೆಯ ಎಲ್ಲ ಹಾಳೆಗಳ ಮೇಲೂ ಮೂಡಿತು. ಯಶಸ್ವಿಯೂ ಆಯಿತು. ಆದರೆ ಉಜ್ವಲ ’ಭವಿಷ್ಯ’ದ ಜಾಗದಲ್ಲಿ ’ಭೂತ’ದ ಶವವೇ ಅಲಂಕೃತವಾಗಿ ಸ್ವಾತಂತ್ರ್ಯೋತ್ತರ ಕಾಲದಲ್ಲೂ ಮೆರೆಯತೊಡಗಿದ್ದು ಸಮಕಾಲೀನ ಭಾರತದ ವಿಪರ್‍ಯಾಸವಾಗಿ ಮಾರ್ಪಟ್ಟಿತು.
ಶಾಸನಗಳಂತೆ ಶಿಲ್ಪ-ವಾಸ್ತುಶಿಲ್ಪದ ಸ್ಮಾರಕಗಳು ಸಹ ಉಳ್ಳವರ ಮತ್ತು ಉಳ್ಳವರ ಪರವಾದ ಹಾಗೂ ಅವರ ಆಶೋತ್ತರಗಳನ್ನು ಪ್ರತಿಮಿಸುವ ಚಾರಿತ್ರಿಕ ಸೃಷ್ಟಿಗಳಾಗಿವೆ. ಇವರ ನೆಲೆ ಮತ್ತು ಇವರ ದೃಷ್ಟಿಕೋನಗಳನ್ನಿರಿಸಿಕೊಂಡ ದೇವಾಲಯಗಳ ದರ್ಶನವು ಸಂಭ್ರಮದ ಪ್ರತೀಕಗಳಾಗಿಯೇ ಕಾಣುತ್ತವೆ. ಇಂತಹ ತೇಲುನೋಟದ ದೃಷ್ಟಿಯಲ್ಲಿ ಸಂಭ್ರಮದ ಆಚೆಗಿನ ಮತ್ತೊಂದು ಸಂಕಟದ ಲೋಕವು ಕಾಣುವುದು ಸಾಧ್ಯವೇ ಆಗುವುದಿಲ್ಲ. ಕಾರಣ, ಅಂತಹ ’ಸಂಕಟ’ದ ಮೂರ್ತಸ್ಮಾರಕಗಳಿಗೆ ಅವನತಿಯು ಬೇಗ ಒದಗುತ್ತದೆ. ಆದ್ದರಿಂದ ಸೀಮಿತ ಸಂಖ್ಯೆಯ ಉಳ್ಳವರು ಮತ್ತು ಅವರ ಸ್ಮಾರಕಗಳೇ ಒಳಗಣ್ಣನ್ನು ಕುರುಡಾಗಿಸುತ್ತವೆ. ಹಾಗೂ ಒಮ್ಮೆ ಎರಡು ಕಣ್ಣುಗಳು ತಮ್ಮ ಒಳಗಣ್ಣನ್ನು ತೆರೆದದ್ದೇ ಆದರೆ, ಅಂತಹ ಸ್ಮಾರಕಗಳ ಒಳಗಡೆಗೆ ಬೆವರನ್ನು ಹರಿಯಿಸಿರುವ ದೊಡ್ಡ ಜನಸಮುದಾಯವು ಇತಿಹಾಸದಲ್ಲಿ ಹೇಳಲು ಹೆಸರಿಲ್ಲದಂತಾಗಿದ್ದು ಕಾಣಿಸಿಕೊಳ್ಳುತ್ತದೆ. ಆಗ ಅದೇ ಸಂಭ್ರಮದ ಸ್ಮಾರಕಗಳು ಬಹುಜನ ಸಮುದಾಯದ ಭವ್ಯ ಗೋರಿಗಳಾಗುತ್ತವೆ. ನಮ್ಮ ಇತಿಹಾಸದ ಬಹುಪಾಲು ಪುಟಗಳನ್ನು ತಾವೇ ಆಕ್ರಮಿಸಿಕೊಳ್ಳುತ್ತವೆ. ಇಂತಹ ಹುನ್ನಾರಗಳು ಹಾವಿನಂತೆ ನೆಲದಲ್ಲಿ ಹರಿದಾಡುವ ಕಣ್ಣಿಗಲ್ಲದೆ ಆಕಾಶದಲ್ಲಿ ಹಾರಾಡುವ ಹಕ್ಕಿಯ ಕಣ್ಣಿಗೆ ಕಾಣುವುದಿಲ್ಲ ಎಂಬುದು ಬೆತ್ತಲೆ ಸತ್ಯ. ಆದ್ದರಿಂದಲೆ ಆ ಬೆತ್ತಲೆಗೆ ಮುಚ್ಚಿರುವ ಜರತಾರಿ ವಸ್ತ್ರವನ್ನು ಕಳಚಿ, ನಿಜವನ್ನು ಕಾಣುವ ಕಣ್ಣುಗಳು ನಮ್ಮದಾಗಬೇಕು.
ಮಾಸ್ತಿಕಲ್ಲುಗಳನ್ನು ನೋಡಿ ಸಂಭ್ರಮಿಸುವ ಮನಸ್ಥಿತಿ ಇಂದಿಗೂ ಅನೇಕ ’ಮನುಷ್ಯ’ರಲ್ಲಿದೆ. ಇವು ಹೆಣ್ಣಿನ ತ್ಯಾಗ, ಬಲಿ’ದಾನ’ಗಳನ್ನು ಹೇಳುತ್ತವೆಂದು, ಹೆಣ್ಣು ತನ್ನ ಮುತ್ತೈದೆತನ, ಪಾತಿವ್ರತ್ಯದಂತಹ ಮೌಲ್ಯಗಳನ್ನು ಈ ಮೂಲಕ ಪ್ರಕಟಪಡಿಸುತ್ತಿದ್ದಳೆಂದು, ಒಟ್ಟಾರೆ ಇವು ನಮ್ಮ ಸಂಸ್ಕೃತಿಯ ಹೆಮ್ಮೆಗಳೆಂದು ನಮ್ಮ ಇತಿಹಾಸ ನಮಗೆ ಕಲಿಸಿದೆ. ಯಾವ ಕಾಲದಲ್ಲಿ ಮತ್ತು ಯಾಕೆ ಎಂಬುದು ಬೇರೆ ಪ್ರಶ್ನೆ. ಆದರೆ ನಾವಿಂದು ಸೆಕ್ಯೂಲರ್ ವ್ಯವಸ್ಥೆಯಲ್ಲಿ ಬದುಕುತ್ತಿದ್ದೇವೆ ಎಂಬುದನ್ನು ಅಪ್ರeಪೂರ್ವಕವಾಗಿಯಾದರೂ ಗ್ರಹಿಸುವ ಮನಸ್ಸುಗಳು ಇದೇ ಪಾಠವನ್ನು ’ಭಜನೆಯ ಶಾಲೆ’ಯಿಂದಾಚೆಗೆ ಬಂದು ಕಲಿಯಬೇಕಾಗುತ್ತದೆ.
ವಾಸ್ತವವಾಗಿ ನಮ್ಮದು ಪುರುಷ ಪ್ರಧಾನ ಸಮಾಜ. ಇಲ್ಲಿರುವ ಮೌಲ್ಯಗಳೆಲ್ಲವೂ ಬಹುತೇಕ ಪುರುಷ ಸೃಷ್ಟಿ ಮತ್ತು ಅವನ ಪರವಾದವುಗಳೇ ಆಗಿವೆ. ಆದ್ದರಿಂದ ಈ ದೇಶದಲ್ಲಿ ಬಹುಪತ್ನಿತ್ವ ಮತ್ತು ಏಕಪತ್ನಿತ್ವಗಳು ಸಾಮಾಜಿಕವಾಗಿ ಒಪ್ಪಿಗೆ ಪಡೆದ ಸಂಸ್ಥೆಗಳೆನಿಸಿರುವುದು. ಇದರ ಭಾಗವಾಗಿಯೇ ಪತಿಯೇ ಪರದೈವ, ಪಾತಿವ್ರತ್ಯ, ಹೆಣ್ಣಿನ ಸ್ಥಾನ ಹೊಸ್ತಿಲ ಒಳಗೆ, ಅವಳು ಗಂಡಿನ ಭೋಗದ (ಖಾಸಗಿ) ಆಸ್ತಿ ಮೊದಲಾದ ವಿಚಾರ-ಮೌಲ್ಯಗಳು ಹುಟ್ಟಿಕೊಂಡಿರುವುದು. ಇದರ ಗ್ರಹಿಕೆಯಿಂದಾಗಿ ಹೆಣ್ಣು ಸಹ ಅಟ್ಟಕ್ಕೇರಿದ್ದಾಳೆ! ಅನಂತರ ಬೆಂಕಿಗೂ ಬಿದ್ದಿದ್ದಾಳೆ!!
ಒಟ್ಟಾರೆ ಪ್ರಕೃತಿದತ್ತವಾದ ಗಂಡು ತಾನು ಭೋಗಿಸಿದ ಹೆಣ್ಣು ಮತ್ತು ಹೆಣ್ಣುಗಳು ತನ್ನ ಸಾವಿನ ಅನಂತರದಲ್ಲಿ ಇತರರಿಗೆ ದಕ್ಕಬಾರದೆಂಬ ತನ್ನ ಅಥವಾ ಪುರುಷ ಪರವಾದ ಸ್ವಾರ್ಥ ಇಲ್ಲಿ ಮಾಸ್ತಿಕಲ್ಲುಗಳ ರೂಪದಲ್ಲಿ ಸ್ಫೋಟಗೊಳ್ಳುವುದಿಲ್ಲವೆ? ಇಂತಹ ಕಲ್ಲುಗಳ ಪೂಜೆಯು ಪುರುಷ ಪ್ರಧಾನ ಸಮಾಜವು ಪುರುಷ ಪರವಾಗಿಯೇ ನಿರ್ಮಿಸಿಕೊಂಡ ಮೌಲ್ಯಗಳ ಮುಂದುವರಿಕೆಗೆ ಚಾಲನಶಕ್ತಿಯಾಗಲಿಲ್ಲವೆ? ಈ ನಿಟ್ಟಿನಲ್ಲಿ ಶಾಸನಗಳೇ ಅಲ್ಲದೆ ಕಾವ್ಯಗಳೂ ದುಡಿದಿಲ್ಲವೇ? ಗಮನಿಸಬೇಕು.
ನಾವು ಬದುಕುತ್ತಿರುವ ಕಾಲ ಪ್ರಜಾಪ್ರಭುತ್ವದ ಕಾಲ. ಆದ್ದರಿಂದ ಇಲ್ಲಿಯಾದರೂ ನಮ್ಮ ಚಿಂತನೆಗಳು ಪ್ರಭುವಲ್ಲದ ಪ್ರಜಾನೆಲೆಯಲ್ಲಿ ಹರಿಯಬೇಕೆಂದು ಆಶಿಸುತ್ತೇನೆ.
*****
೨೦-೧೦-೨೦೦೦