ಮತ್ತೆ ಹುಟ್ಟವುದಾದರೆ
ಈ ನೆಲವೇ ಇರಲಿ
ಹುಟ್ಟಿದ ಮೇಲೆನ್ನ ನುಡಿಯು
ಕನ್ನಡವೇ ಆಗಿರಲಿ
ತುಂಗೆಯಲಿ ನಾನಿರಲು
ಗಂಗೆಯೂ ಬರಲಿ
ಕೃಷ್ಣ-ಗೋದಾವರಿ
ಗೆಳತಿಯರು ಸಿಗಲಿ
ಹಿಮಾಲಯವು ಮುಡಿಯಲ್ಲಿ
ಸಹ್ಯಾದ್ರಿಯು ಅಡಿಯಲ್ಲಿ
ಅಲ್ಲಲ್ಲಿಯೇ ಇರಲಿ
ಕಲ್ಕತ್ತೆಯ ಕಾಳಿ
ಶೃಂಗೇರಿಯ ಶಾರದೆಗೆ
ಹೂವು-ಕುಂಕುಮ ಕೊಡಲಿ
ದೂರದಲ್ಲೇಕೆ ಇರಬೇಕು ದೆಹಲಿ
ಶಿವಮೊಗ್ಗೆಗೇ ಬರಲಿ
ಮತ್ತೆ ಹುಟ್ಟುವುದಾದರೆ
ಈ ನೆಲವೇ ಇರಲಿ
ಮಂಗಳೂರಿನ ಕಡಲು
ಮಡಿಕೇರಿಯ ಮಂಜಿನೊಡಲು
ನನಗೊದಗಿ ಬರಲಿ
ಹಟ್ಟಿ ಚಿನ್ನದ ಬುಗುಡಿ
ಕಾರವಾರದ ಸೀಗಡಿ
ತುಟ್ಟಿಯಾಗದೇ ಇರಲಿ
ಸೊರಗದಿರಲಿ ಬೇಲೂರಿನ ಬಾಲೆ
ಒಣಗದಿರಲಿ ಜೋಗದ ಮೋರೆ
ಇಳಕಲ್ಲಿನ ಸೀರಗೆ
ಕಾಶ್ಮೀರದಲ್ಲೂ ಬೆಲೆ ಸಿಗಲಿ
ಮತ್ತೆ ಹುಟ್ಟುವುದಾದರೆ
ಈ ನೆಲವೇ ಇರಲಿ
ಮೇಲುಕೋಟೆಯ ಚೆಲುವ
ನನಗೊಲಿದು ಬರಲಿ
*****