ಶರದ ಚಂದ್ರನ ವಿರಹ ಗಾನಕೆ
ಸುರಿಸಿ ಹಿಮಜಲವೆಂಬ ಕಂಬನಿ
-ಚಿರ ಕಳಂಕಿಯ ಭಾವವರಿವಾ ಶಿಲೆಯೆ- ಭುವಿಯಲಿ ರಸಿಕನು-
ಅಣುವು ಕಣಗಳ ಚಿತ್ರ ಕೂಟದ!
ಕಣಕೆ ಕಣಗಳ ನೂತ ನಾದದ
-ಬೆಣಚು! ಕರೆಯಲು ಪೋಗಿ ಮುತ್ತುವ ಲೋಹ-ಕಣಿಕವೆ ರಸಿಕನು-
ಹರಿದ ಬೆಳಕನು ಹೀರಿಕೊಳ್ಳದೆ
ತಿರುಗಿ ತಿರುಗಿಸಿ ಮಧುರ ಛವಿಗಳ
-ಹರಿಸಿ ಭುವಿಗನುರಾಗಿಯಾಗುವ ರತ್ನ ಶಲಕವೆ ರಸಿಕನು-
ಸಲಿಲ ಗರ್ಭನು ಬಳಸಿ ಬರುತಲೆ
ಚಲಿಸೆ ಜೋತಿಯ ಜಿಹ್ವೆಯಾಗಲೆ
-ವಲಿದು ವೂಟೆಯೊಳರ್ಘ್ಯ ವೀಯುವ ಶೈಲಶಿಖರವೆ! ರಸಿಕನು-
ಅರಳೆ ದಳಗಳು ಹರಿಯೆ ಸೌರಭ
ಕರೆಸಿ ಕೊಳ್ಳದೆ ಬಂದು ರಸವನು
-ನಿರುತ ಹೀರುತ ಧೂಳೊಳದ್ದುವ ಮತ್ತ ಬಂಭರ ರಸಿಕನು-
ಪದವ ಕಂಡೊಡೆ ಪದವು ಮೊಳೆಯಲು
ಮುದವದುಕ್ಕಲು ಓದಿಯೋದುತ
-ಚದುರ ಹೃದಯವು ಬಿರಿದು ಕಂಪಿಡಲಗಗೊ! ನೋಡದೊ! ರಸಿಕನು-
ಶಿಖಿಯನೆತ್ತುತಲಿರಲು ಸೊಡರು!
ಮುಖವ ಪಂಖವ ನೀಯುತಾಹುತಿ
-ಸುಖವೆ ಲಯವೆಂದೆಣಿಸಿ! ಮುತ್ತುವ ಆ ಪತಂಗವೆ ರಸಿಕನು-
ಕವಿಯ ಕಮಲಕೆ ಮಿತ್ರ ರಸಿಕನು!
ಕವಿ ಸುಧಾರಸವುಣುವ ರಸಿಕನು!
-ಕವನ ಲಹರಿಯ ಕರೆವ ರತ್ನಾಕರನೆ ನಿರುಪಮ ರಸಿಕನು!-
*****