ಇಲ್ಲಿದ್ದವರೆ ನೀವು
ಹಿಂದೆ ಒಮ್ಮೆ
ಈಗ ಅಲ್ಲಿದ್ದೀರಿ ದೂರ, ಅಷ್ಟೆ
ಎಲ್ಲೋ ಮೇಲಿದ್ದರೂ,
ಇಲ್ಲದ ಗಾಂಬೀರ್‍ಯ, ಹೊತ್ತು ದಿಕ್ಕಿಂದ ದಿಕ್ಕಿಗೆ
ಒಂದೇ ಸಮನೆ ನೀವು
ಠಳಾಯಿಸುತ್ತಿದ್ದರೂ
ನಿಮ್ಮ ಗುರುತಿದೆ ನಮಗೆ ಖಿಚಿತವಾಗಿ
ಹೇಳಬೇಕೆ ಪೂರ್ವಕಥೆಯನೆಲ್ಲ
ಉಚಿತವಾಗಿ ?
ಇಲ್ಲಿದ್ದಾಗ ನೀವು
ತುಂಬಿಕೊಂಡದ್ದು ಹೇಗೆ, ಎಲ್ಲ ಗೊತ್ತಲ್ಲ !
ಎಲ್ಲ ದಿಕ್ಕಿನಿಂದಲೂ ತೊರೆ ಹಳ್ಳ ಕೊಳ್ಳ
ಕೂಡಿ ಹರಿದವು ಒಂದೆ ಮೈಯಾಗಿ ನಿಮ್ಮೆಡೆಗೆ,
ನೀವಿದ್ದ ತಗ್ಗಿಗೆ.
ಬಂದು ತಲುಪಿದ್ದೆಲ್ಲ ನಿಮ್ಮದೆಂದಾಯಿತು,
ಡೊಡ್ಡ ತಗ್ಗಾಗಿದ್ದೆ ನಿಮಗೆ ವರವಾಯಿತು.
ಸಲ್ಲದ್ದು ಬೇಕಾದಷ್ಟಿತ್ತು ನಿಮ್ಮಲ್ಲಿ
ತುಂಬಿಕೊಂಡಿದ್ದರೂ ದೊಡ್ಡಕಡಲಲ್ಲಿ
ಯಾರಿಗೂ ಹನಿ ನೀರು
ಕೊಡಲಾಗಲಿಲ್ಲ
ನೀವು ಇದ್ದದ್ದೆ ಹಾಗೆ, ಕೊಡುವಂತಿರಲಿಲ್ಲ
ಉಪ್ಪುನೀರನ್ನು ಯಾವ ಬೆಪ್ಪ ಕುಡಿದಾನು ?
ಎಷ್ಟೇ ವಿಶಾಲವಾಗಿ ಕಂಡರೂ ಏನಂತೆ
ಚಿಕ್ಕ ಕೆರೆಗಿಂತಲೂ,
ನಲ್ಲಿಬಾಯಲ್ಲಿ ಬರುವ ಕಿರುಬೆರಳ ದಪ್ಪದ
ಜಲಧಾರೆಗಿಂತಲೂ ಕನಿಷ್ಠವಾಗಿದ್ದಿರಿ,
ಬಾಯಾರಿದವರನೂ ತಣಿಸಲಾಗದ ಹಾಗೆ
ಅನಿಷ್ಟವಾಗಿದ್ದಿರಿ.
ಸುತ್ತ ಮುತ್ತ ಎಲ್ಲ ತುರುಗಿಕೊಂಡಿದ್ದರೂ
ಮುಟ್ಟಲಾಗದ ನಿಮ್ಮ
ಉಪ್ಪು ಬದುಕಿಗೆ ಮರುಗಿ
ಕರಗಿದನು ಭಾನು.
ಪ್ರಖರ ಬಿಸಿಲಿನ ಶಾಖ ಬಿದ್ದು ಮೇಲೆದ್ದಿರಿ ;
ಅದೃಷ್ಟವಿದ್ದುದರಿಂದ
ಗಾಳಿಯ ಬೆನ್ನು ಹತ್ತಿ
ನಿಮ್ಮನ್ನೇ ಬೆಚ್ಚಿಸುವ ಬಾರೀ ಎತ್ತರಕೆ
ಯಾರೂ ಕಾಣದ ಹಾಗೆ
ಹೋಗಿ ಸೇರಿದಿರಿ.
ಈಗ ಹರಡಿದ್ದೀರಿ ಆಗಸದ ತುಂಬ
ಆದರೇನು ?
ಬೆರಗಾಗುವರು ಯಾರು ಸುಳ್ಳು ದಂಭಕ್ಕೆ ?
ನೀರೇ ಇಲ್ಲದ ಖಾಲಿ ಮುಗಿಲ ಠೀವಿಯನು
ಬಯ್ಯುವವರೇ ಎಲ್ಲ – “ಏನೆಂದರೇನೂ ಇಲ್ಲ”
ತೇವವಿಲ್ಲದ ಮುಗಿಲು ನೀಲಿ ಬಾಲಿನ ಮೈಗೆ
ತೊನ್ನು ಎನುವಂತಿದೆ.
ಒಳಗೆ ಜಲವಿಲ್ಲ, ಕೊಡುವ ಬಲವಿಲ್ಲ,
ಕೆಳಗೆ ದಡದಡ ಸುರಿದು
ಮಣ್ಣೊಳಗೆ ಇಳಿದು
ಬೆಳೆವ ಕಸುವಿಲ್ಲ.
ಎಳೆಗಾಳಿ, ತೆಳುಗಾಳಿ ಎಂಥ ಕ್ಷುದ್ರವೆ ಇರಲಿ
ಅದು ಎಳೆದ ದಿಕ್ಕಿಗೇ ಇದರ ಓಟ,
ಆಡಿಸುತ್ತಿದ್ದಾರೆ ಎಲ್ಲ ಆಟ!
ಇಲ್ಲದ್ದು ಹೋಗಿ ಇರುವುದೆಂದು ಬಂದೀತೋ
ಎಂದು ಕೊರಗುತ್ತಿದೆ ಕೆಳಗೆ ಜನವೆಲ್ಲ.
ಜಲಸುರಿವ ಮೋಡಕ್ಕೆ ಕಾಯುತ್ತ ನಿಂತಿವೆ
ಬಾಯ್ತೆರೆದುಕೊಂಡಿರುವ ಹಳ್ಳ ಕೊಳ್ಳ!
*****