ಹನಿ ಹಾಕಲು ಹೊರಟ ಸಂಜಿ. ಮಳೆ ಬಿದ್ದೂ
ಕುಣಿಯದ ನವಿಲು. ಅರ್ಧ ಆಕಾಶವನ್ನೆ
ಮುಚ್ಚಿದೆ ಮುಗಿಲು. ಸಮೆದ ಬೆಣಚು ಕಲ್ಲಿನ
ತುಂಡು ಚಿಕ್ಕಿ, ಬಾನಿನಲ್ಲಿಲ್ಲ ಒಂದೇ ಒಂದು ಹಕ್ಕಿ
ಸ್ತಬ್ಧ ಗಿಡಮರ, ಥಂಡಿಗಾಳಿ, ನೇಸರನಿಲ್ಲದ ಸಭೆ
ಬೇಸರವೋ ಬೇಸರ.
ಏನು ಸಾಧಿಸಿದ್ದಾಯಿತು ಈ ತನಕ ?
ತಿಂದದ್ದು ಕುಡಿದದ್ದು ಕೊಳಕರ ಜೊತೆ ಕಲೆತದ್ದು
ಯಾರ್‍ಯಾರನ್ನೋ ಚುಚ್ಚಿ ಛೇಡಿಸಿ ವಿದೂಷಕನೆನಿಸಿದ್ದು
ಹಣಕ್ಕಾಗಿ ಹೆಣಗಿದ್ದು, ಎಲ್ಲೆಂದರಲ್ಲಿ ಅಲೆದದ್ದು
ದುಡ್ಡು ಗುಡ್ಡೆಹಾಕಿಯೂ ಜೀನನಾಗಿ ಬಾಳಿದ್ದು-
ಮುಗಿಯಿತಲ್ಲ ಎಲ್ಲ
ನದಿತನಕ ಹೋದದ್ದಷ್ಟೆ ಇಳಿಯಲಿಲ್ಲ
ಇಳಿದ ಒಂದೆರಡು ಸಲವೂ ಈಜಲಿಲ್ಲ.
ಬರಿ ಪ್ರತಿಷ್ಠೆಗಾಗಿ ಬರೆದದ್ದು ಯಾರನ್ನೂ ಮುಟ್ಟಲಿಲ,
ಒಂದು ಅಂತಃಕರಣವನ್ನೂ ತಟ್ಟಲಿಲ್ಲ
“ಇಲ್ಲ ಇಲ್ಲ ಏನನ್ನೂ ಮಾಡಲಿಲ್ಲ ಈತನು.”
ಇನ್ನೇನು ಬಂತು ರಾತ್ರಿ. ಬಿಚ್ಚುತ್ತಿದೆ ಇರುಳ ಜಡೆ,
ಉಂಡು ಮಲಗಿದರೆ ಅಲ್ಲಿಗೆ ಕಡೆ.
ಅಷ್ಟು ಹಿಂದೆ ಹುಟ್ಟಿ, ಇಷ್ಟರ ತನಕ ಬಾಳಿ,
ಛಿ ಇಷ್ಟೇನೇ ಎಂದು ಮರುಗುತ್ತಿದೆ ಇವನ ಚಿತ್ತ;
ಹೆಪ್ಪುಗಟ್ಟಿದ್ದು ಮತ್ತೆ ಹಾಲಾಗಲು ಸಾಧ್ಯವೆ ?
ಈಗ ಪಶ್ಚಾತ್ತಾಪವಷ್ಟೇ ನಿತ್ಯ.
*****