“ದೇವರೆಂದರೇನು ಅಜ್ಜ, ದೇವರೆಂದರೇನು ?
ಹೇಳು ಅವನು ಯಾರು, ಏನು, ತಿಳಿಯಬೇಕು ನಾನೂ”
“ಬಾನು ಬುವಿಯ ಕೈಗೆ ಕೊಟ್ಟ ಬೆಳಕಿನೂರೆಗೋಲು,
ಜೀವ ಎಂದೊ ಕುಡಿದು ಮರೆತ ತಾಯಿಯೆದೆಯ ಹಾಲು,
ಕಲ್ಲು ಮಣ್ಣು ಬಳಸದೇನೆ ಕಟ್ಟಿಕೊಂಡ ಮನೆ.
ಏಸು, ಗಾಂಧಿ ಜೀವಜಲವ ಸುರಿಸಿ ಬೆಳೆದ ತೆನೆ.
ಎಂಥ ಮಾರುಕಟ್ಟೆಯಲ್ಲೂ ಸಿಗದ ಸರಕು ಮಗೂ,
ತಾಯ ಕಣ್ಣ ಬೆಳಕಿನಲ್ಲಿ ಹೊಳೆವ ತಾರೆ ಅದು.
“ದೇವರನ್ನೆ ಹೋಲುವುದು ರಾತ್ರಿ ತೆರೆದ ಬಾನು,
ತಲೆಯನೆತ್ತಿ ನೋಡಿದವರಿಗೆಲ್ಲ ಕಂಡರೂನು
ಮುಟ್ಟಬರದು, ಬೆನ್ನನಟ್ಟಿ ಹೋದರೂನು ಸಿಗದು,
ಇದೆ, ಇಲ್ಲ ಎರಡೂ ನಿಜ ತೆಕ್ಕೆಯೊಳಗೆ ಬರದು.
ಬಿತ್ತದೊಳಗೆ ಮಲಗಿರುವ ವೃಕ್ಷದಂತೆ ಅದು,
ಹೂವಿನೆದೆಯ ಮಾರ್ದವದಲಿ ಹರಿವ ಹಾಗೆ ಮಧು.
“ಎಷ್ಟೇ ಮಳೆ ಸುರಿದೂ ಅದು, ಗಾಳಿಯ ಥರ, ನೆನೆಯದು,
ಗಾಳಿ ಎಷ್ಟೆ ಬೀಸಿದರೂ, ಬೆಳಕಿನ ಥರ, ಅಲುಗದು,
ಮತ್ತೆ ಮತ್ತೆ ಮೊಗೆದರೂ ಕುಳಿ ಬೀಳದ ನೀರು,
ಕತ್ತಲ ಪಡೆ ಸೀಳಿ ನಡೆವ ತಂಬೆಳಕಿನ ತೇರು.
ನಮ್ಮ ಸುತ್ತ ಇದ್ದೂ ಅದು ನಮಗೆ ಸಿಗುವುದಲ್ಲ,
ಸಿಕ್ಕವರಿಗೆ ಕೂಡ ಆದನು ತಿಳಿಸಬರುವುದಿಲ್ಲ.
“ಮುಗಿಲ ರೆಕ್ಕೆ ಮಡಚಿ ಕುಂತ ಕಾಲವೆಂಬ ಹಕ್ಕಿ,
ಗ್ರಹ ತಾರಗಳದಕೆ ತಿನ್ನಲೆರಚಿದಂಥ ಅಕ್ಕಿ.
ಮ್ಮೆತುದಿಗಳೆ ಕಾಣದಂಥ ಮಹದಾಕೃತಿ ಅದು,
ಅಣುವಿನೆದುರ ಬೆಟ್ಟದಂತೆ ನಮ್ಮೆದುರಲಿ ಅದು.
ಹೀಗಿದ್ದೂ ಅದು ಸಣ್ಣನೆ ಕಣಕೂ ಕಿರಿದಂತೆ,
ಕೇಳುವ ನಮ್ಮೊಳಗಿನೊಳಗೆ ಅಣುವಾಗಿದೆಯಂತೆ!
“ದೇವರೆನುವುದೆಲ್ಲಕಿಂತ ತುಂಬ ಸರಳ ಮಗೂ.
ಆದರದನು ತಿಳಿದವರು ತುಂಬ ವಿರಳ ಮಗೂ”
*****