ಮುತ್ತು ಚೆಲ್ಲಾಪಿಲ್ಲಿ. ಹಾರಕಟ್ಟಿದ ದಾರವು ಹರಿಯಿತೆ?
ಮುತ್ತುಗಬನಾಯ್ದು ಕಟ್ಟಿದರೂ ಮತ್ತೆ, ಫಲವೇನು?
ನೀನಿಲ್ಲ. ಪೋಣಿಸಿದ ಮುತ್ತು ಹಾರವಾಗಲು
ನಿನ್ನ ಸದೃಢ ಕೊರಳು ಬೇಕೇ ಬೇಕು.
ಚಳಿ ಮುಂಜಾವು, ಇರುಳಿನೊಡನೆ ಕಾದಾಡಿ
ಬಳಲಿ, ಬಿಳುಪೇರಿ, ಸೂರ್ಯ ಹುಟ್ಟಲೆಂದು ಕಾದಂತೆ ಕಾದಿದ್ದೇನೆ.
ನಾಟಕದ ನಡುವೆ ನಿನ್ನ ಪ್ರವೇಶದ
ಯಾವೊಂದು ಭಾವಭಂಗಿಯೂ ಕಣ್ಣು ತಪ್ಪಬಾರದೆಂದು
ಕಾತರದಿಂದ ಕಾದಿರುವ ಪ್ರೇಕ್ಷಕ ಸಮೂಹ ನನ್ನ ಮುಖ.
ಲೈಟ್ ಹೌಸಿನ ಬೆಳಕಾಡುವ ವಿಶಾಲ ನಗರದ
ಬಯಲ ಬಯಸುವ ಒಳನಾಡ ಕಿರುತೊರೆಯಂತೆ;
ಬೆಟ್ಟದ ಮೇಲೆ ಸುರಿದ ಬಿರುಮಳೆ
ತನ್ನತ್ತ ಹರಿದು ಜೀವ ಉಕ್ಕಿಸಲೆಂದು
ಕಾದ ಮರುಭೂಮಿಯ ನದಿಯ ಪಾತ್ರದಂತೆ;
ಮುಗ್ಧ ಕಿಟಕಿಯಲ್ಲಿ ನಕ್ಷತ್ರವೊಂದು ಕಂಡು
ತನ್ನ ಪ್ರಶ್ನೆಗೆಲ್ಲಾ ಉತ್ತರ ಹೇಳಿತೆಂದು
ಹಂಬಲಿಸುವ ಸೆರೆಯಾಳಿನಂತೆ;
ಕಂಕುಳ ಕೆಳಗಿದ್ದ ಬೆಚ್ಚನೆ ಊರುಗೋಲನ್ನು ದೇವರ ಮುಂದೆಸೆದ,
ಪವಾಡ ಸಂಭವಿಸಿದೆ ಬಿದ್ದಲ್ಲಿಂದ ಮೇಲೇಳಲಾರದ ಹೆಳವನಂತೆ;
ನಾನು ಹಾಗೇ ಬಿದ್ದುಕೊಂಡಿದ್ದು ಕೊನೆಯ ಕಾಣುವವರೆಗೆ
ತೆವಳಬೇಕು ನೀನು ಬಾರದಿದ್ದರೆ.
ನನಗೆ ನೀನಷ್ಟೇ ಬೇಕು.
ಬಿರುಕಲ್ಲಿ ಮೂಡಿದ ಹುಲ್ಲುಗರಿಯ ಸ್ಪರ್ಶ ಪಡೆದು
ಕಾಲು ಹಾದಿಯ ಕಲ್ಲು ಇಡೀ ವಸಂತ ಬೇಕೆಂದು ಹಂಬಲಿಸದೇ?
ಹಳ್ಳಿಯ ಕೆರೆಯಲ್ಲಿ ತನ್ನ ಬಿಂಬ ನೋಡಬಯಸುವ ಚಂದ್ರ
ಮೈದುಂಬಿ ಪೂರ್ಣನಾಗಬೇಡವೆ? ಭವಿಷ್ಯದ ಪೂರ್ಣತೆ
ನಮ್ಮತ್ತ ನಾಲ್ಕು ಹೆಜ್ಜೆಯಾದರೂ ಹಾಕದಿದ್ದರೆ
ಏನಾದರೂ ಪೂರ್ತಿಯಾಗುವುದಾದರೂ ಹೇಗೆ?
ಕೊನೆಗೂ ನೀನು ನಾಟಕದ ಪಾತ್ರವರ್ಗದಲ್ಲಿಲ್ಲವೇ,
ಓ ಹೆಸರು ಹೇಳಬಾರದವಳೇ?
ಉಳಿದಿರುವ ಸಮಯ ಸ್ವಲ್ವ
ನಿನಗೆ ತಕ್ಕವನಾಗಿ ಉಳಿಯೆ;
ವಯಸ್ಸಾಗಿ, ಮುದುಕನಾಗಿ,
ಅಥವ ನನ್ನ ಮಕ್ಕಳು ನನ್ನನ್ನು ಮರವೆಗೆ ದಬ್ಬ…..
ಮುತ್ತು ಚೆಲ್ಲಾಪಿಲ್ಲಿ.
*****
ಮೂಲ: ರೇನರ್ ಮಾರಿಯಾ ರಿಲ್ಕ್ / Rainer Maria Rilke