ಅವನು ಹಾಗೆಯೆ
ಮಾತಿನಿಂದ ಮೈಥುನದವರೆಗೆ
ಎಲ್ಲವೂ ಹಿತಮಿತ
ತೂಕದ ವ್ಯವಹಾರ
ಅರವತ್ತರ ಇಳಿವಯಸ್ಸಿನಲ್ಲೂ
ಕಪ್ಪನೆಯ ಒತ್ತಾದ ಕೂದಲು
ಉಬ್ಬರಿಸದ ಹೊಟ್ಟೆ
ಸಂಯಮ ಫಲ
ಇವನದು
ಆತಿಯೆ ಆಡಂಬರ
ಮೋಸ ದಗಾ ವಂಚನೆಯಲಿ
ಹೆಚ್ಚು ಗೊಂದಲವಿಲ್ಲ
ತುಂಬಿದ ಸಂಸಾರ
ಹೆಣ್ಣು ಹೊನ್ನೂ ಮಣ್ಣಿನಲಿ
ಹೆಚ್ಚು ರುಚಿ
ಬಾಗಿದ ಬೆನ್ನು ಮಂಜು ಕಣ್ಣು
ಚಪಲವೇ ಬಲ
ಇದು-
ಮರದ ಹಾಗೆ ಬೆಳೆಯಿತು
ಜೀವ;
ನದಿಯ ಹಾಗೆ ಹರಿಯಿತು
ಭಾವ;
ಫಳ ಫಳ ಫಳ…
ಹೊಳೆದು ಹೋಯಿತು ಕಾಲ
ಅವರವರ ಮನೆಯಲಿ
ಗೊತ್ತಾದ ಸಮಯದಲಿ
ಯಾರೂ ಬಂದ ಹಾಗಿರಲಿಲ್ಲ
ಯಾರೂ ಹೋದ ಹಾಗಿರಲಿಲ್ಲ
ಆ ಕ್ಷಣವದು ತಲ್ಲಣವೊ?
ಆ ಕ್ಷಣವದು ರೋಮಾಂಚನವೊ?
ಹೇಳಲವರು…
ಇದ್ದಂತೆ ಇರಲಿಲ್ಲ.
*****