ಆ ಮನೆಯ ಕಣಜ ನಮಗೆ,
ದಿನಾರಾತ್ರೆ ಒಂದೊಂದು ನೀತಿಕಥೆಯನ್ನು ಹೇಳು ತ್ತಿತ್ತು;
ಕೇಳಿಸಿಕೊಳ್ಳುತ್ತಿದ್ದದ್ದು ಮಾತ್ರ ಅವರಾಗಿದ್ದರು.
ಅವರೆಕಾಳು, ರಾಗಿ, ಗೋಧಿ, ತೊಗರಿ, ಹೆಂಡ, ಹಳೆಬಟ್ಟೆಗಳು,
ಔಷಧಿ ಬೇರುಗಳೆಲ್ಲವನ್ನೂ ತನ್ನೊಳಗೆ ಹೊತ್ತುಕೊಂಡು,
ದೂರದ ಗ್ರಾಮದ ದಢೂತಿ ಹೆಂಗಸಿನಂತೆ ಕಂಗೊಳಿಸುತ್ತಿತ್ತು.
ಅದನ್ನು ಕಟ್ಟಿದ ಆ ಓಣಿಯ ಅವನೋ,
ಸಂತೆಯಿಂದ ಬಿದಿರುಕಾಡನ್ನು ಬಳಸಿಕೊಂಡು ಇತ್ತ ಬರುತ್ತಿದ್ದಂತೆ-
ಆ ಕಣಜವನ್ನು ಬಾಯಿಗೆ ಬಂದಂತೆ ಬೈಯ್ಯುವುದನ್ನು ರೂಢಿ ಮಾಡಿಕೊಂಡಿದ್ದ.
ನಾವೆಲ್ಲರೂ ಎದ್ದೇಳುವ ಮುಂಚಿತವೇ ಅವನು ತನ್ನದೆಲ್ಲವನ್ನೂ
ಆರಂಭಿಸಿರುತ್ತಿದ್ದನೇನೊ.
ಏಕೆಂದರೆ, ಆಗ ಅವನು ಅಳುತ್ತಾ ನಡೆದುಹೋಗುತ್ತಿದ್ದ.
ಅಪ್ರಾಕೃತ ಸಾವಿನಿಂದ ಅವನು ಸತ್ತರೂ
ಆ ಕಣಜದ ನೀತಿಕಥೆಗಳು ಮಾತ್ರ ಮುಗಿದಿರಲಿಲ್ಲ,
ನಾವು ಬೆಳೆಯುವುದು ಕುಗ್ಗಲಿಲ್ಲ;
ನಮ್ಮ ನಡುವಿನ ಅವರು (ಕತೆ ಕೇಳಿಸಿಕೊಳ್ಳುತ್ತಿದ್ದವರು)
ಸಾಯುವುದೂ ಕಡಿಮೆಯಾಗಲಿಲ್ಲ.
*****