ಸುಡಗಾಡುಗಟ್ಯಾಗ ಚಂದುಳ್ಳ ಚಲುವೇರು
ಕುಂಟಲ್ಪಿ ಹಂಚಲ್ಪಿ ಆಡ್ಯಾರೆ
ಹೆಣಗುಂಡ ತೆಗಿನ್ಯಾಗ ಚಕಚಂದ ಕುಂತಾರೆ
ಕ್ವಾಡ್ಬಾಳಿ ಗಾರೀಗಿ ತಿಂದಾರೆ ||೧||
ಏಂಚಂದಾ ಭೋಚಂದಾ ಮಾಚಂದಾ ಸುಡಗಾಡು
ಗೋರೀಯ ಮ್ಯಾಲ್ಹೂವು ನಕ್ಕಾವೊ
ಗಿಡದಾಗ ಗಿಳಿಯಣ್ಣ ಕಂಟ್ಯಾಗ ನರಿಯಣ್ಣ
ಕೂಗಾಡಿ ಕ್ಯಾಕೀಯ ಹಾಕ್ಯಾವೊ ||೨||
ಜೀನ್ಗೊಟ್ಟ ಸೂಗವ್ವ ಹಪೆಗೊಂಡ ಹಂಪವ್ವ
ಹೋಟಿಬಾಕ ಉಳವಪ್ಪ ಸತ್ತಾರೊ
ಕುಲವಂತ ಕಾಳಕ್ಕ ಹಲಕಟ್ಟ ಹೂವಕ್ಕ
ಬೋಳ್ಗುಂಡ ಸೀತಕ್ಕ ಅತ್ತಾರೊ ||೩||
ಕೊಳಿಬಿದ್ದ ಹೆಣಕಳ್ಳು ನರಿನಾಯಿ ಎಳದಾಡಿ
ಕಾಗ್ಹೆದ್ದು ಕಚ್ಯಾಡಿ ತಿಂದಾವೊ
ಈದಿಕ್ಕು ಆದಿಕ್ಕು ಯಾದಿಕ್ಕು ಮಾದಿಕ್ಕು
ಜಗವೆಲ್ಲ ಸುಡುಗಾಡು ಮಾಡ್ಯಾರೊ ||೪||
*****
ಸುಡುಗಾಡಗಟ್ಟಿ = ಪತಿತ ಜಗತ್ತು, ವಿಕಾರಿ ಜಗತ್ತು
ಚಂದುಳ್ಳ ಚಲುವೇರು = ಕಾಮ, ಕ್ರೋಧ, ಲೋಭ, ಮೋಹ ಮುಂ.