ನಿನ್ನ ಹಂದರದ ಪರದೆಯನ್ನೊಮ್ಮೆ
ಕಳಚಿಟ್ಟುಬಿಡು.
ಲೋಕದ ಮೋಹ
ಮಕಾರಗಳು ಚಿಗುರುತಿವೆ.
ದೆಸೆದಿಕ್ಕುಗಳು ಚೈತ್ರ ಚಿಗುರ
ಮೀಯುತ್ತಿವೆ
ಮನದ ಬನಿ ಕೆನೆಗಟ್ಟಿದೆ.
ಓ..ಸಾವೇ ಕನಿಕರಿಸು
ಕಾಡಿಗೆಯ ಕಣ್ಣು
ಕಪೋಲದ ಕೆಂಪು
ಕೆಂದಾವರೆ ತುಟಿಗಳು ಅರಳಿ ನಗುತ್ತಿವೆ.
ಮರಗಿಡ ನದಿ ಬನದ
ಚಿತ್ರಕಾರನೊಬ್ಬ
ಹಸ್ತಾಕ್ಷರವ ಮೂಡಿಸುತ್ತಲೇ ಇದ್ದಾನೆ.
ದೃಗೋಚರ ಶ್ರಾವ್ಯ ಕಿವಿ ತುಂಬುತ್ತಿದೆ.
ತುರುಬಿಗೆ ನಿನ್ನೆಯಷ್ಟೇ
ಗುಲಾಬಿಯೊಂದ ಮುಡಿಸಿದ ಕೈ
ಕರೆಯುತ್ತಿದೆ ಕಾಣದ ಕಡಲಿನ
ತಟದಿ ಉಯ್ಯಾಲೆಗೆ
ಓ ಸಾವೇ
ಸುಮ್ಮನಿದ್ದು ಬಿಡು ಸ್ವಲ್ಪಕಾಲ
ಕೆದರು ತಲೆಯ ಮರಗಳ
ನೆತ್ತಿ ಹಸಿರ ಮುಪ್ಪುರಿಗೊಳ್ಳುವವರೆಗಾದರೂ
ಆ ನೆರಳಬುಡದಲ್ಲಿ
ನನ್ನಿನಿಯನ ಎದೆಯ
ನಿಬಿಡ ಕೇಶದ ಗೂಡಲ್ಲಿ ನಾ
ಬೆರಳಾಡಿಸಿ ಬರುವವರೆಗಾದರೂ.
*****