ಓ ಶಿವೆಯೇ !
ಮಲ್ಲಿಗೆ ಹೂ ಬನದ ನಿವಾಸಿಯೇ…
ಪ್ರೇಮದೆದೆಯ ನಡೆಮಡಿಯ ಹಾಸಿನ ಮೇಲೆ
ಹೂಪಾದ ಮುದ್ರೆಯನೊತ್ತುತ್ತ ಬಾರೆ.
ನಿನ್ನ ದರ್ಶಿಸುವ
ಲೆಕ್ಕವಿರದ ಮೆಚ್ಚುಗೆಯ ನಯನಗಳಲಿ
ಯುಗಾದಿ ಹಬ್ಬದ ಚಿಗುರು ಚಿಗುರು
ಮಾವು, ಬೇವು ಹೊಂಗೆ ತರುಗಳ
ಕುಂದದ ಸೊಂಪು, ತಂಪನೆರೆಯ ಬಾರೆ.
ಜಾಜಿ, ಮಲ್ಲಿಗೆ, ಸಂಪಿಗೆ, ಸೇವಂತಿಗೆ ತೋಟದಲಿ
ಮಧುವ ಹೀರುತ್ತಾ ಮೈಮರೆವ
ಬಣ್ಣ ಬಣ್ಣದ ಚಿಟ್ಟೆ, ದುಂಬಿಗಳ
ಕೇಳಿ ಕಲರವ ಗೋಷ್ಠಿಯ ರಸಾನಂದ
ವಿಹಾರಕ್ಕೆ ನೇತಾರಳಾಗಿ ಬಾರೆ.
ಸಗ್ಗದಾಘ್ರ್‍ಆಣಕ್ಕೆ ವಶವಾಗಿ
ಎಗ್ಗಿಲ್ಲದೆ ಮಾಡು, ಗೂಡುಗಳ ಮಾಡಿಕೊಂಡು
ಚಿತ್ತಾರದ ವರ್ಣಮಯ ತನುಗಳಲಿ
ರುದ್ರ ಭೀಕರ ಹೊರಳು, ಸುರುಳಿಗಳಲಿ ಮಲೆತಿರುವ
ಸನಿಹ ಸಾರೆ ಪೂತ್ಕರಿಸುವ
ಕ್ಷಣ ಮರೆಯೆ ಯಮ ಸದನಕ್ಕಟ್ಟುವ
ಸರ್ಪ ಬಗೆಗಳ ಮಣಿಸಿ
ಪ್ರೇಮ ಕೇದಿಗೆಯ ಮುಡಿಸ ಬಾರೆ.
ವಿಜ್ಞಾನ, ತಂತ್ರಜ್ಞಾನದ ನೇತ್ಯಾತ್ಮಕ ಪ್ರಭಾವದಲಿ
ಶ್ರಮದ ಸೊಲ್ಲೂ ಕೇಳ ಬಯಸದ
ಭೋಗ ಸಂಸ್ಕೃತಿಯ ಬೆನ್ನು ಬಿದ್ದಿರುವ
ಮಾರಿಗೆ ಸಂಸ್ಕೃತಿ ಅಪ್ಪಿ
ಜನ್ಮಜಾತ ಗುಣ, ನೀತಿಗೆ ತಿಲಾಂಜಲಿಯನಿತ್ತು
ಹಾಡುವುದನ್ನೇ ಮರೆತಿರುವ ಮಾನವ ಕೋಗಿಲೆಗಳ
ಜಾಗೃತಗೊಳಿಸುವ ಚಿತ್ತ ಚೇತನಿಯೆ ಬಾರೆ.
ಶುದ್ಧ ಸಲಿಲದಿ ತುಂಬಿ
ಜುಳು ಜುಳು ನಾದ ಮಾಡುತ್ತಾ
ನರ್ತಕಿಯ ಲಾಸ್ಯದಲಿ ಪ್ರವಹಿಸುವ ಹಿರಿಯ ತರಂಗಿಣಿಯ
ಇಕ್ಕೆಲದಲಿ ಸೊಕ್ಕಿ ಬೆಳೆದು
ವಸಂತನಾಗಮನದಿ ನವ ಜೀವದಾಂಗುಡಿಯ
ಗುಡಿಯಂತಿರುವ
ಮಾಮರಗಳೆದೆಯಲ್ಲಡಗಿ
ಅಮೃತ ಗಾನಧಾರೆಯ ಹರಿಸುವ
ಕೋಗಿಲೆ ಸಂಕುಲದ ಮುಂದಾಳಾಗಿ ಬಾರೆ.
ಭುವನ ಭಾಗ್ಯನು ಮೂಡಿ ಬರುವ ಪ್ರಶಸ್ತ ಕಾಲದಲಿ
ಕೀಟ, ಪಕ್ಷಿ, ಪ್ರಾಣಿಗಳು
ಆನಂದದಲಿ ದನಿಗೆ ದನಿ ಬೆರೆಸಿ
ಹೊಮ್ಮಿಸುವ ದಿವ್ಯಗಾನ ಧಾರೆಯಾಸ್ವಾದನೆಯಲಿ
ಒತ್ತೊತ್ತಿ ಕುಳಿತು
ಹೃದಯದಲಿ ಹೃದಯ ಬೆಸೆಯುವ
ಜೀವ ಸೊಬಗಿನ ದರ್ಶನವ ಮಾಡಿಸುವ
ಸತ್ಯ ಪ್ರೇಮವೇ ಮೈವೆತ್ತ ಮೂರುತಿಯಾಗಿ ಬಾರೆ
ಬಾ! ಬಾರೆ ಶಿವೆ!
*****