ಈ ದೇಹವು ನಿನ್ನದೇ
ಈ ಪ್ರಾಣವು ನಿನ್ನದೆ|
ನನ್ನ ಜೀವನದಲಿ ನೀ
ಯಾವ ನಿರ್ಧಾರವನು
ನಿರ್ಧರಿಸಿದರೂ ಸರಿಯೇ
ನಾನು ನಿನ್ನವನೆಂಬ
ಆತ್ಮವಿಶ್ವಾಸವಿದೆ ಎನಗೆ||
ನಾನು ನಿಂತಿಹ ಈ ನೆಲ,
ಕುಡಿಯುತಿಹ ಈ ಜಲ
ಸೇವಿಸುತಿಹ ಗಾಳಿ ಇದೆಲ್ಲದು ನಿನ್ನದೇ|
ನಿನ್ನ ಪಂಚಭೂತಗಳಿಂದಾದ
ಹಸಿ ಮಡಕೆ ನಾನು
ಇದರ ಪ್ರಾಣಜೀವವು ನೀನು|
ಈ ಜೀವದ ಮೇಲೆ ನಿನಗೆ
ಸಂಪೂರ್ಣ ಸ್ವಾತಂತ್ರ್ಯ
ಪರಮಾಧಿಕಾರವಿದೆ||
ಮುಂದಿನ ಜನ್ಮವೇನಾದರೂ
ಇದ್ದರೆ ಅದು ನಿನ್ನಿಂದಲೇ|
ಹಿಂದಿನ ಜನ್ಮದಲ್ಲೇನಾದರೂ
ನಾ ಹುಟ್ಟಿದ್ದರೂ ಅದೂ ನಿನ್ನಿಂದಲೇ||
ಇಂದು ನಾನಿಲ್ಲಿ ಏನಾದರೂ
ಅಲ್ಪ ಸ್ವಲ್ಪ ಮನುಜನಾಗಿದ್ದರೂ
ಅದು ನಿನ್ನಿಂದಲ್ಲದೆ
ಇನ್ನಾರಿಂದ ಸಾಧ್ಯವು? ||
ಈ ದೇಹವೂ ನಿನ್ನದೆ
ಈ ಪ್ರಾಣವೂ ನಿನ್ನದೆ|
ಈ ಬಳ್ಳಿಯೂ ನಿನ್ನದೆ
ಈ ಕಾಯಿಯೂ ನಿನ್ನದೆ |
ನನ್ನೆಲ್ಲಾ ಕಾಲ ಕರ್ಮವು ನಿನ್ನದೆ
ಈ ಕಾಯ ಕತ್ತರಿಸುವ ಕುಡುಗೋಲು ನಿನ್ನದೇ||
*****