ಟಗರನು ಕೂಡಲು ಗೂಳಿಯು ಬಂದು
ಚಿಗುರಿದ ಬೇವಿಗೆ ಬೆಲ್ಲವು ಸಂದು
ಸಾಗಿತು ಕರಗವು ಕಬ್ಬಿನ ಗಾಣ
ಈಗೀಗ ಹೊರಟಿವೆ ಹುಬ್ಬಿನ ಕಂಪು
ಭುಯ್ಯೋ, ಭುಯ್ಯೋ, ಭಂಭರ ಭುಯ್ಯೋ
|| ಹುಯ್ಯೋ ಹುಯ್ಯೋ, ಹುವ್ವಿನ ಕೋಲ |
ಅವಳಿಯ ಕೂಟವ ನಳ್ಳಿಯು ನೋಡೆ
ಜವದೊಳು ಬಂದಿತು ವಡ್ಡಂತಿಯೂಟ
ಧಾವತಿಯಿತ್ತವು ಬಿತ್ತನೆ ಬೇಗೆ
ಭಾವಿಸಿ ಬಂದಿತು ಮುಂಗಾರ ಮಿಂಚು
ಹುಯ್ಯೋ, ಹುಯ್ಯೋ, ಪಾನಕ ಮಜ್ಜಿಗೆ
|| ಹುಯ್ಯೋ, ಹುಯ್ಯೋ, ಗಂಗೆಯ ಕೋಲ ||
ಓಡಲು ಅಂಗನೆ ಸಿಂಗನ ಮುಂದೆ
ಆಡಲು ಅಂಗಳದೆಲ್ಲೆಲ್ಲ ಗಂಗೆ
ಕಾಡಿಸೆ ಪಡುವಣ ಮೋಡವ ಸಿಡಿಲು
ಆಡಿತು ಭಾದ್ರದ ಮುಡಿಯೆಲ್ಲ ಸಡಲಿ
ಸುಯ್ಯೋ, ಸುಯ್ಯೋ, ಜಡಿಮಳೆ ಸುಯ್ಯೋ
|| ಹುಯ್ಯಲು ಜಡಿಮಳೆ ಹುಯ್ಯರಿ ಕೋಲ ||
ತಕ್ಕಡಿ ಯಾಡಿಸೆ ಚೇಳಿನ ಕೊಂಡಿ
ವಕ್ಕಲ ಮಕ್ಕಳ ಬೊಕ್ಕಸ ಬಿರಿಯೆ
ಜೋಕು ದೀಪಾವಳಿ ಅಂಬಿನ ನೌಮಿ
ಹಾಕು ಚಾಮುಂಡಿಗೆ ಹಣ್ಣಿನ ದೌನ
ಹುಯ್ಯೋ, ದೀಪ ಸಹಸ್ರಕೆ ಹುಯ್ಯೋ
|| ಹುಯ್ಯೋ ಭಾವ ! ಬನ್ನಿಯ ಕೋಲ ||
ಬಿಲ್ಲೆದ್ದು ಬಾಗಲು ಹೋತನ ಮುಂದೆ
ಎಲ್ಲ ಮಂದೇವರು ಹತ್ತಿತು ತೇರ
ವಾಲಾಡುತಿತ್ತಲೆ ಪರಿಷೆಗೆ ಬಾರೋ
ತೇಲಾಡಿದಾಮೋಡವೆಲ್ಲಿದೆ ನೋಡೋ
ತುಯ್ಯೋ, ತುಯ್ಯೋ, ತೇರಿನ ಮಿಣಿಯ
|| ಹುಯ್ಯೋ ಹುಯ್ಯೋ, ದೇವರ ಕೋಲ ||
ಮಡಕೆಯಲಾಡಲು ಮೀನಿನ ಬಾಲ
ಮೃಡನವ ತಪಸಲಿ ಕೂರುವ ಕಾಲ
ಕಾಡುವ ಮಾಗಿಗೆ ಧಾವಳಿ ಜೋಡಿ
ಜೋಡು ಕಂಗ್ಗಂಬಳಿ ಕಾಮನ ದಿನಕೆ
ಕಾಯೋ ಕಾಯೋ ಕಾಮನ ಬೆಂಕಿ
|| ಹುಯ್ಯೋ ಹುಯ್ಯೋ, ಭಾಗ್ಯದ ಕೋಲ ||
*****